ಬಿಜೆಪಿ ಟಿಕೆಟ್‌ನಲ್ಲಿ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ: ರಘು ಕೌಟಿಲ್ಯ

| Published : Mar 04 2024, 01:16 AM IST / Updated: Mar 04 2024, 01:13 PM IST

ಸಾರಾಂಶ

 ಲೋಕಸಭಾ ಚುನಾವಣೆಗೆ ಬಿಜೆಪಿಯ ಪ್ರಥಮ 195 ಅಭ್ಯರ್ಥಿಗಳ ಪಟ್ಟಿಯಲ್ಲಿ ಹಿಂದುಳಿದ ವರ್ಗಗಳ 57 ಅಭ್ಯರ್ಥಿಗಳಿಗೆ ಟಿಕೆಟ್‌ ನೀಡುವ ಮೂಲಕ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಹಿಂದುಳಿದ ಸಮುದಾಯಗಳಿಗೆ ಹೆಚ್ಚು ಪ್ರಾತಿನಿಧ್ಯ ನೀಡಿದ್ದಾರೆ 

ಕನ್ನಡಪ್ರಭ ವಾರ್ತೆ ಮಂಗಳೂರು

ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಯ ಪ್ರಥಮ 195 ಅಭ್ಯರ್ಥಿಗಳ ಪಟ್ಟಿಯಲ್ಲಿ ಹಿಂದುಳಿದ ವರ್ಗಗಳ 57 ಅಭ್ಯರ್ಥಿಗಳಿಗೆ ಟಿಕೆಟ್‌ ನೀಡುವ ಮೂಲಕ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಹಿಂದುಳಿದ ಸಮುದಾಯಗಳಿಗೆ ಹೆಚ್ಚು ಪ್ರಾತಿನಿಧ್ಯ ನೀಡಿದ್ದಾರೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಹೇಳಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳಿಗೆ ಮಾತ್ರವಲ್ಲದೆ, ಮಹಿಳೆಯರು, ಪರಿಶಿಷ್ಟ ಸಮುದಾಯದ ಅಭ್ಯರ್ಥಿಗಳಿಗೂ ಹೆಚ್ಚು ಟಿಕೆಟ್‌ ನೀಡಲಾಗಿದ್ದು, ಅಂಬೇಡ್ಕರ್‌ ಆಶಯ ಹಾಗೂ ಪ್ರಜಾಪ್ರಭುತ್ವ ಮೌಲ್ಯ ಎತ್ತಿ ಹಿಡಿದಿದ್ದಾರೆ. 

ಮುಂದಿನ ಪಟ್ಟಿಯಲ್ಲೂ ಈ ವರ್ಗಗಳಿಗೆ ಇನ್ನೂ ಹೆಚ್ಚಿನ ಅವಕಾಶ ಸಿಗಲಿದೆ ಎಂದರು.ಪಕ್ಷ ಅತ್ಯಂತ ಬಲಿಷ್ಠವಾಗಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವನ್ನು ಅತೀ ಹೆಚ್ಚು ಅಂತರದಿಂದ ಗೆಲ್ಲುವ ಮೂಲಕ ರಾಜ್ಯದ ಎಲ್ಲ 28 ಸೀಟ್‌ಗಳನ್ನು ಗೆಲ್ಲುವ ಸಂಕಲ್ಪವನ್ನು ವಿಜಯೇಂದ್ರ ಮಾಡಿದ್ದಾರೆ. 

ರಾಜ್ಯ ಸರ್ಕಾರದ ವೈಫಲ್ಯಗಳು, ಜನಪರವಿಲ್ಲದ ಆಡಳಿತ, ಅಭಿವೃದ್ಧಿ ಕುಂಠಿತವಾಗಿರುವುದು ಇತ್ಯಾದಿ ವಿಚಾರಗಳಿಂದಾಗಿ ಎಷ್ಟು ಅಂತರದಲ್ಲಿ ಎದುರಾಳಿ ಪಕ್ಷವನ್ನು ಸೋಲಿಸುತ್ತೇವೆ ಎಂಬುದಷ್ಟೇ ಸದ್ಯದ ಗುರಿಯಾಗಿದೆ ಎಂದು ರಘು ಕೌಟಿಲ್ಯ ಹೇಳಿದರು.

ಭಯೋತ್ಪಾದನೆ ಮೃದುಧೋರಣೆ: ಶಕ್ತಿಸೌಧದಲ್ಲಿ ಪಾಕಿಸ್ತಾನ್‌ ಪರ ಘೋಷಣೆ ಕೂಗಿದರೂ ಬಂಧಿಸಲು ರಾಜ್ಯ ಸರ್ಕಾರ ಮೀನ ಮೇಷ ಎಣಿಸುತ್ತಿದೆ. ಅಲ್ಲದೆ ಇಂಥ ವಿಚಾರಗಳನ್ನು ಸಮರ್ಥನೆಯೂ ಮಾಡಲಾಗುತ್ತಿದೆ. 

ಭಯೋತ್ಪಾದನೆ ಬಗ್ಗೆ ಕಾಂಗ್ರೆಸ್‌ ಸರ್ಕಾರ ಮೃದು ಧೋರಣೆ ತಾಳಿದೆ ಎಂದು ಆರೋಪಿಸಿದರು.ಬೆಂಗಳೂರಿನ ಬಾಂಬ್‌ ಸ್ಫೋಟ ಪ್ರಕರಣದ ಹಿಂದೆ ನಿಷೇಧಿತ ಸಂಘಟನೆಯ ಕೈವಾಡದ ಶಂಕೆ ವ್ಯಕ್ತವಾಗಿದೆ. 

ಭಯೋತ್ಪಾದನೆ ಹಿಮ್ಮೆಟ್ಟಿಸಲು ಸಾಧ್ಯವಾಗದೆ ಇದ್ದರೆ ವಿಧಾನಸೌಧ ಬಿಟ್ಟು ತೊಲಗಿ ಚಳವಳಿ ಮಾಡಬೇಕಾದೀತು ಎಂದು ಎಚ್ಚರಿಸಿದ ರಘು ಕೌಟಿಲ್ಯ, ಕಾಂಗ್ರೆಸ್‌ಗೆ ಮೊಳೆ ಹೊಡೆಯುವ ಕಾಲ ಈ ಲೋಕಸಭೆ ಚುನಾವಣೆ ಬಳಿಕ ಬರಲಿದೆ. 

ಅಲ್ಪಸಂಖ್ಯಾತರನ್ನು ಓಲೈಸುವ ಭರದಲ್ಲಿ ದೇಶವಿರೋಧಿ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದರು.ಇನ್ಮುಂದೆ ಪ್ರತಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಸಮಾವೇಶಗಳನ್ನು ಮಾಡಿ ನರೇಂದ್ರ ಮೋದಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲಾಗುವುದು ಎಂದು ರಘು ಕೌಟಿಲ್ಯ ತಿಳಿಸಿದರು.

ಬಿಜೆಪಿ ಮುಖಂಡರಾದ ವಿಠಲ ಪೂಜಾರಿ, ಕಿಶೋರ್‌ ಕುಮಾರ್‌, ಆರ್‌ಸಿ ನಾರಾಯಣ್‌, ಮಹೇಶ್‌ ಜೋಗಿ ಮತ್ತಿತರರಿದ್ದರು.