ಕುಮಾರವ್ಯಾಸ ಭಾರತ 21ನೇ ಶತಮಾನಕ್ಕೂ ಪ್ರಸ್ತುತ: ಡಾ.ಪ್ರಸನ್ನ

| Published : Mar 04 2024, 01:16 AM IST

ಸಾರಾಂಶ

ಕುಮಾರವ್ಯಾಸ ಭಾರತದಲ್ಲಿ ಉದ್ಯೋಗ ಪರ್ವ: ಒಂದು ಚಿಂತನೆ’ ಕುರಿತ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಕುಮಾರವ್ಯಾಸ ಭಾರತ 21ನೇ ಶತಮಾನಕ್ಕೂ ಪ್ರಸ್ತುತ ಎಂದು ಡಾ.ಪ್ರಸನ್ನ ಹೇಳಿದ್ದಾರೆ.

ಕುಮಾರವ್ಯಾಸ ಭಾರತದಲ್ಲಿ ಉದ್ಯೋಗ ಪರ್ವ: ಒಂದು ಚಿಂತನೆ’ ಕುರಿತ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಕುಮಾರವ್ಯಾಸ ಭಾರತ 21ನೇ ಶತಮಾನಕ್ಕೂ ಪ್ರಸ್ತುತ ಎಂದು ಡಾ.ಪ್ರಸನ್ನ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ದಾರ್ಶನಿಕ, ಸಮಕಾಲೀನ ಪ್ರಜ್ಞೆಯಲ್ಲಿ ಸೃಷ್ಟಿಯಾದ ಕುಮಾರವ್ಯಾಸನ ಮಹಾಭಾರತ ಕಾವ್ಯವು 21ನೆಯ ಶತಮಾನದ ರಾಜಕೀಯ ಪರಿಸ್ಥಿತಿ, ತೆರಿಗೆ ವ್ಯವಸ್ಥೆಗೆ ಪ್ರಸುತ್ತವಾಗಿದೆ ಎಂದು ಹಿರಿಯ ವಿದ್ವಾಂಸ ಡಾ.ಎ. ವಿ.ಪ್ರಸನ್ನ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯ ಕುಮಾರವ್ಯಾಸ ಅಧ್ಯಯನ ಪೀಠವು ಆಯೋಜಿಸಿದ್ದ ‘ಕುಮಾರವ್ಯಾಸ ಭಾರತದಲ್ಲಿ ಉದ್ಯೋಗ ಪರ್ವ: ಒಂದು ಚಿಂತನೆ’ ಕುರಿತ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಕುಮಾರವ್ಯಾಸ ಲಿಪಿಕಾರ ಮಾತ್ರವಲ್ಲದೇ, ಜನಾಂಗದ-ಸಮುದಾಯದ ಧ್ವನಿಯಾಗಿದ್ದ ಶ್ರೇಷ್ಠ ಕವಿ. ಎಲ್ಲರ ನಾಲಿಗೆಯ ಮೇಲೆ ನಲಿದು ನರ್ತಿಸಿದ ಕಾವ್ಯಗಳು ಕುಮಾರವ್ಯಾಸನದ್ದು.ವ್ಯಾಸರ ಮಹಾಭಾರತವನ್ನು ಕನ್ನಡೀಕರಿಸಿದ ಕವಿ ಅನ್ನುವುದಕ್ಕಿಂತಲೂ, ಮಹಾಭಾರತವನ್ನು ಮರುಸೃಷ್ಟಿ ಮಾಡಿದ ಬಂಧನವಿಲ್ಲದ, ಒತ್ತಡಗಳಿಗೆ ಸಿಲುಕದ, ಆಸ್ಥಾನ ಮುಕ್ತ ಕವಿ ಎಂದು ತಿಳಿಸಿದರು.

ವ್ಯಾಸರ ಮಾನಸಪುತ್ರನಾಗಿ ಮಹಾಭಾರತದ ಪಾತ್ರಗಳ ಬೇರಿಗೆ ಪೆಟ್ಟುಕೊಡದೆ, ಕೇವಲ ಕರ್ಣನ ಪಾತ್ರವನ್ನು ಮರುಸೃಷ್ಟಿಸಿದ ಸೋಪಜ್ಞ ಕವಿ ಕುಮಾರವ್ಯಾಸ. ಮಹಾಭಾರತದಕೇಂದ್ರ ಸ್ಥಾನವಾದ ಉದ್ಯೋಗ ಪರ್ವದಲ್ಲಿ ಲೌಕಿಕ ವಿಚಾರಗಳನ್ನೂ ಮೀರಿಕೃಷ್ಣನನ್ನು ಕಥಾ ನಾಯಕನಾಗಿ ಮಾಡಿ, ಕೃಷ್ಣ ಪ್ರಜ್ಞೆಯ ಕಥೆಯಾಗಿ ಮಹಾಭಾರತವನ್ನು ರೂಪಿಸಿದ ದಾರ್ಶನಿಕ ಕವಿ ಕುಮಾರವ್ಯಾಸ ಎಂದರು.

ಉದ್ಯೋಗವನ್ನುಉಜ್ಜುಗವೆಂದು ತನ್ನ ಕಾವ್ಯಗಳಲ್ಲಿ ಬಳಸಿ, ಅರ್ಥವನ್ನು ಪ್ರಾರಂಭವೆಂದು ರೂಪಕಗಳಲ್ಲಿ ಸೇರಿಸಿ, ಕೃಷ್ಣನು ಸಂಧಾನಕ್ಕೆ, ಪಾಂಡವರು ಯುದ್ಧಕ್ಕೆ, ಬಲರಾಮ ತನ್ನ ಇರುವಿಕೆಗೆ, ದುರ್ಯೋಧನ ಕೃಷ್ಣನ ಬೆಂಬಲಕ್ಕಾಗಿ, ಇಂದ್ರನು ಅರ್ಜುನನ್ನು ಮೊದಲಿಗೆ ಕೃಷ್ಣನ ಬಳಿ ಕಳುಹಿಸಲು, ದ್ರೌಪದಿ ಎಲ್ಲರನ್ನೂ ಉಜ್ಜುಗಿಸಲು- ಹೀಗೆ ಉದ್ಯೋಗ ಪರ್ವದ ಪ್ರಾರಂಭವನ್ನು ಕುಮಾರವ್ಯಾಸ ಚಿತ್ರಿಸಿದ್ದಾನೆ.

ವಿರಾಟ ಪರ್ವದಲ್ಲಿ ಪಾಂಡವರಿದ್ದ ಅಜ್ಞಾತ ವಾಸವನ್ನು ಅದ್ಭುತವಾಗಿ ಚಿತ್ರಿಸಿ, ಅಜ್ಞಾತ ವಾಸದ ಒಂದು ವರ್ಷದ ಕಾಲ ಕೃಷ್ಣನ ಹೆಸರನ್ನು ಪ್ರಸ್ತಾಪಿಸದೆ ಕಾವ್ಯವನ್ನು ನಿಭಾಯಿಸಿದ ಕವಿ ಕುಮಾರವ್ಯಾಸ. ಉದ್ಯೋಗ ಪರ್ವದಲ್ಲಿ ಕೃಷ್ಣನನ್ನು ಎಲ್ಲ ಸಂಧಿಗಳಲ್ಲಿ ಬಳಸಿಕೊಂಡ. ಹಾಗಾಗಿ, ಹೃದಯ ಸ್ಥಾನದ ಜೀವವಿರುವಂತಹ ಜಾಗ ಉದ್ಯೋಗ ಪರ್ವವಾಯಿತು ಎಂದು ಹೇಳಿದರು.

ಪಾಂಡವರ ಸೋದರ ಮಾವ ಶಲ್ಯನೊಂದಿಗೆ ದುರ್ಯೋಧನ ಮಾಡಿದ ರಾಜಕೀಯವನ್ನು ಪ್ರಸ್ತುತ ರಾಜಕೀಯ ಸ್ಥಿತಿ-ಗತಿಗಳಿಗೆ ಹೋಲಿಸಬಹುದಾಗಿದೆ.ವ್ಯಾಸರ ಮಹಾಭಾರತದಲ್ಲಿ ವಿಸ್ತಾರವಿದ್ದರೂ, ನಿರ್ಣಯಗಳಲ್ಲಿ ಸ್ಪಷ್ಟತೆ ಇರಲಿಲ್ಲ. ಯಾರಿಗೆ ಯುದ್ಧದ ಅಗತ್ಯವಿದೆ, ಸಂಧಾನದ ಮನಸ್ಸಿದೆ ಎಂಬುದನ್ನು ವ್ಯಾಸರು ಅಸ್ಪಷ್ಟವಾಗಿ ಚಿತ್ರಿಸಿದ್ದಾರೆ.ಆದರೆ ಕುಮಾರವ್ಯಾಸನ ಕಾವ್ಯಗಳಲ್ಲಿ ಸ್ಪಷ್ಟತೆಯು ಎದ್ದು ಕಾಣುತ್ತದೆ ಎಂದು ತಿಳಿಸಿದರು.

ಒಂದೇ ಸಾಲಿನಲ್ಲಿ ಎರಡು ಕ್ರಿಯಾಪದಗಳನ್ನು ಬಳಸುವ ಭಾಷಾ ನೈಪುಣ್ಯತೆ, ಶಬ್ಧಗಳ ಮೇಲಿನ ಹಿಡಿತವಿದ್ದ ಕುಮಾರವ್ಯಾಸನು ಶಬ್ಧಗಳ ಸೃಷ್ಟಿಕರ್ತನಾಗಿದ್ದಾನೆ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ತುಮಕೂರು ವಿವಿ ಕುಮಾರವ್ಯಾಸ ಅಧ್ಯಯನ ಪೀಠದ ಸಂಯೋಜಕ ಡಾ. ಪಿ. ಎಂ.ಗಂಗಾಧರಯ್ಯ, ಪ್ರತಿಭೆಯ ಪ್ರಜ್ಞೆಗೆ ಸಾಕ್ಷಿ-ಜ್ಞಾನಕಟ್ಟಿ ಕೊಡುವ ಕಾಯಕ ಅಧ್ಯಯನ ಪೀಠಗಳದ್ದಾಗಬೇಕು ಎಂದು ಹೇಳಿದರು.

‘ಕುಮಾರವ್ಯಾಸ ಭಾರತದಲ್ಲಿ ಉದ್ಯೋಗ ಪರ್ವ’ ಕುರಿತು ಗೋಷ್ಠಿಗಳು ನಡೆದವು.ಡಾ.ಶ್ಯಾಮಲಾ ಪ್ರಕಾಶ್, ಲಕ್ಷ್ಮೀ- ಗಮಕ ವಾಚಿಸಿದರು. ಸಂತೋಷ್ ಭಾರದ್ವಾಜ್, ಶ್ರೀನಿವಾಸಮೂರ್ತಿ- ವ್ಯಾಖ್ಯಾನಿಸಿದರು. ಸಮಾರೋಪ ಸಮಾರಂಭದಲ್ಲಿ ಡಾ. ಶಾಂತಾಗೋಪಾಲ್ ಭಾಗವಹಿಸಿದ್ದರು.

ವಿವಿ ಸಿಂಡಿಕೇಟ್ ಸದಸ್ಯಡಾ.ಕೆ.ರಾಜೀವಲೋಚನ, ಡಾ.ಡಿ. ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ನಿತ್ಯಾನಂದ ಬಿ.ಶೆಟ್ಟಿ ಉಪಸ್ಥಿತರಿದ್ದರು .ಸಹಾಯಕ ಪ್ರಾಧ್ಯಾಪಕಿ ಡಾ.ಗೀತಾ ವಸಂತ ನಿರೂಪಿಸಿದರು.