ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿರುವ ಅಂಬರೀಶ್ ಹೆಸರನ್ನು ಶಾಶ್ವತಗೊಳಿಸಲು ಸಚಿವರು ಮತ್ತು ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಸಂಸದ ಸುಮಲತಾ ಅಂಬರೀಶ್ ಮನವಿ ಮಾಡಿದರು.
ತಾಲೂಕು ಬೂದನೂರು ಗ್ರಾಮದಲ್ಲಿ ನಡೆದ ಬೂದನೂರು ಉತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.ಅಂಬರೀಶ್ ಅವರು ಕಾಂಗ್ರೆಸ್ ಪಕ್ಷದಲ್ಲೇ ಇದ್ದರು. ಆ ಪಕ್ಷದಿಂದಲೇ ಮೂರು ಬಾರಿ ಸಂಸದರಾಗಿ, ಶಾಸಕರಾಗಿ, ಸಚಿವರಾಗಿ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅಂತಹ ಒಬ್ಬ ಜನಪ್ರಿಯ ನಾಯಕನಿಗೆ ಮಂಡ್ಯದ ಯಾವುದೇ ಬಡಾವಣೆಗೆ ಅಥವಾ ರಸ್ತೆಗೆ ಅಥವಾ ಇನ್ಯಾವುದೇ ಪ್ರಮುಖ ವೃತ್ತಕ್ಕೆ ಅವರ ಹೆಸರಿಡುವ ಪ್ರಯತ್ನ ನಡೆದಿಲ್ಲ. ಪ್ರಮುಖ ಸ್ಥಳದಲ್ಲಿ ಅಂಬರೀಶ್ ಅವರ ಪುತ್ಥಳಿ ನಿರ್ಮಾಣ ಮಾಡಿಲ್ಲ. ಇದೆಲ್ಲವೂ ಅಂಬರೀಶ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅವರೆಲ್ಲರೂ ನನ್ನ ಬಳಿ ಬಂದು ನೋವನ್ನು ತೋಡಿಕೊಳ್ಳುತ್ತಿದ್ದಾರೆ ಎಂದು ಬೇಸರದಿಂದ ನುಡಿದರು.
ಈಗ ನಿಮ್ಮದೇ ಸರ್ಕಾರವಿದೆ. ಅಂಬರೀಶ್‌ಗೆ ಆಪ್ತರಾಗಿದ್ದ ನೀವೇ ಸಚಿವರಾಗಿದ್ದೀರಿ. ನೀವು ಸೇರಿದಂತೆ ಜಿಲ್ಲಾಡಳಿತ ಅಂಬರೀಶ್ ಹೆಸರನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಕಾಯೋನ್ಯೂಮುಖರಾಗಬೇಕು ಎಂದು ಕೋರಿದರು.ಬೂದನೂರು ಗ್ರಾಮದ ಜನರೊಂದಿಗೆ ಅಂಬರೀಶ್ ಅವರು ಅವಿನಾಭಾವ ಸಂಬಂಧ ಹೊಂದಿದ್ದರು. ಗ್ರಾಮದ ಶ್ರೀಕಾಶಿ ವಿಶ್ವನಾಥ ದೇಗುಲದ ಜೀರ್ಣೋದ್ಧಾರಕ್ಕೆ 1 ಕೋಟಿ ರು. ಕೊಡುಗೆ ನೀಡಿದ್ದಾರೆ. ಗ್ರಾಮ ಅಭಿವೃದ್ಧಿಗೆ 3 ಕೋಟಿ ರು. ಕೊಟ್ಟಿದ್ದಾರೆ. ನಾನು ಸಂಸದೆಯಾದ ಬಳಿಕ ಶ್ರೀಕಾಶಿ ವಿಶ್ವನಾಥ ದೇಗುಲದ ಸುತ್ತ ಫೆನ್ಸಿಂಗ್ ನಿರ್ಮಾಣಕ್ಕೆ 3 ಲಕ್ಷ ರು., ಕೊಟ್ಟಿದ್ದೇನೆ. ಸಂಸದರ ಪ್ರದೇಶ ಅಭಿವೃದ್ಧಿ ನಿಧಿಯಲ್ಲಿ ಬೂದನೂರು ಸರ್ಕಾರಿ ಶಾಲೆಯ ಕೊಠಡಿಗಳ ನಿರ್ಮಾಣಕ್ಕೆ 5 ಕೋಟಿ ರು. ಬಿಡುಗಡೆ ಮಾಡಿರುವುದಾಗಿ ಹೇಳಿದರು.
ಸಚಿವ ಎನ್. ಚಲುವರಾಯಸ್ವಾಮಿ ಶಾಸಕರಾದ ಪಿ.ರವಿಕುಮಾರ್, ಪಿ.ಎಂ.ನರೇಂದ್ರಸ್ವಾಮಿ, ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್,ತಹಶೀಲ್ದಾರ್ ಶಿವಕುಮಾರ್ ಬಿರಾದಾರ್, ಮಂಡ್ಯ ಲೋಕಸಭೆ ಸಂಭವನೀಯ ಅಭ್ಯರ್ಥಿ ವೆಂಕಟರಮಣೇಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಗ್ರಾಪಂ ಉಪಾಧ್ಯಕ್ಷೆ ಮಾನಸ, ರವಿಭೋಜೇಗೌಡ ಇದ್ದರು.