ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಆಧುನಿಕತೆ ಹಾಗೂ ತಂತ್ರಜ್ಞಾನದ ಹೊಡೆತಕ್ಕೆ ಸಿಕ್ಕು ಮೌಲ್ಯಗಳಿಂದ ವಿಮುಖವಾಗುತ್ತಿರುವ ಮನಸ್ಸುಗಳಲ್ಲಿ ಮಾನವೀಯ ಮೌಲ್ಯಗಳನ್ನು ಮರುಸ್ಥಾಪಿಸುವ ಕೆಲಸ ನಾಲವಾರ ಶ್ರೀಮಠ ಮಾಡುತ್ತಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ನಾಲವಾರದ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಶ್ರೀಮಠದ ನೂತನ ಮಹಾದ್ವಾರ ಕಟ್ಟಡದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಜಾತಿ-ಮತ-ಪಂಥಗಳ ಬೇಧವಿಲ್ಲದೇ ಲಕ್ಷಾಂತರ ಜನರು ನಾಲವಾರ ಶ್ರೀಮಠದ ಹಾಗೂ ಪೀಠಾಧಿಪತಿ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯರ ಆಶೀರ್ವಾದ ಬಯಸಿ ಬರುತ್ತಾರೆ. ಬಂದ ಭಕ್ತರಿಗೆ ತ್ರಿವಿಧ ದಾಸೋಹದ ಮೂಲಕ ಆರೈಕೆ ಮಾಡುವ ಶ್ರೀಗಳು, ಅವರ ಕಷ್ಟಗಳನ್ನು ಕೇಳಿ ಪರಿಹಾರ ಒದಗಿಸುವ ಮೂಲಕ ಮಠವು ನೆಮ್ಮದಿ ನೀಡುವ ತಾಣವಾಗಿಸಿದ್ದಾರೆ ಎಂದರು.ಅತಿಥಿಗಳಾಗಿ ಆಗಮಿಸಿದ್ದ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶದಲ್ಲಿರುವ ನಾಲವಾರ ಶ್ರೀಮಠ ತನ್ನ ಧಾರ್ಮಿಕ, ಶೈಕ್ಷಣಿಕ ಕಾರ್ಯಗಳ ಮೂಲಕ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಬರುವ ಭಕ್ತರನ್ನು ತಾಯಿಯಂತೆ ಪ್ರೀತಿಯಿಂದ ಕಾಣುವ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರು ಹಿಂದುಳಿದ ಭಾಗದಲ್ಲಿ ಅನೇಕ ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಶ್ರೀಮಠದ ಪೀಠಾಧಿಪತಿ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ನಾಲವಾರ ಕೋರಿಸಿದ್ಧೇಶ್ವರ ಮಠ ಕಲ್ಲು-ಸಿಮೆಂಟ್ ಗೋಡೆಗಳ ಮೇಲೆ ನಿರ್ಮಾಣವಾದದ್ದಲ್ಲ. ಭಕ್ತರ ಭಕ್ತಿಯ ಕಂಬದ ಮೇಲೆ ನಾಲವಾರ ಶ್ರೀಮಠ ನಿರ್ಮಾಣವಾಗಿದ್ದು,ಭಕ್ತರೇ ನಮ್ಮ ಮಠದ ಆಸ್ತಿ. ನಾವು ಯಾವುದನ್ನೂ ಕೇಳಿ ಪಡೆದಿಲ್ಲ. ಕೇಳದೆಯೂ ಮಾಡುವ ಲಕ್ಷ ಲಕ್ಷ ಭಕ್ತರನ್ನು ಕೋರಿಸಿದ್ಧೇಶ್ವರ ನಮಗೆ ನೀಡಿದ್ದಾನೆ ಎಂದರು.ಸನ್ನತಿ ರಸ್ತೆಗೆ ಹೊಂದಿಕೊಂಡಂತೆ ಮಠದ ಮಹಾದ್ವಾರ ಕಟ್ಟಡ ನಿರ್ಮಾಣವಾಗಬೇಕು ಎಂದು ಒಂದು ದಿನದ ಹಿಂದೆ ಯೋಚನೆ ಮಾಡಿದ್ದೆವು. ಮರುದಿನವೇ ಸೂಗೂರ ಎನ್. ಗ್ರಾಮದ ಶ್ರೀಮಠದ ಸದ್ಭಕ್ತರಾದ ವಿಶ್ವನಾಥರೆಡ್ಡಿ ಬಸವರಾಜ ಗೌಡ ವಕೀಲ್ ಯವರು ನಿರ್ಮಾಣದ ಸೇವೆ ವಹಿಸಿಕೊಳ್ಳುವೆ ಎಂದು ಮುಂದೆ ಬಂದು, ಇವತ್ತೇ ಭೂಮಿಪೂಜೆ ನೆರವೇರಿಸಿರುವುದು ನಿಜಕ್ಕೂ ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ದಾನಿಗಳಾದ ವಿಶ್ವನಾಥರೆಡ್ಡಿ ಪಾಟೀಲ ಸೂಗೂರ, ಮಹೇಶರೆಡ್ಡಿ ಪಾಟೀಲ, ಸೂಗೂರ ಪರಿವಾರದವರು, ಸಂಗಾರೆಡ್ಡಿಗೌಡ ಮಲ್ಹಾರ, ಸೋಮನಾಥರೆಡ್ಡಿ ಬಾಲಚೇಡ, ಡಾ.ವೀರೇಶ ಎಣ್ಣೆ, ಪ್ರದೀಪ್ ಮಾಲಿಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ನಂತರ ಶ್ರೀಮಠದ ಕಲ್ಯಾಣ ಮಂಟಪದಲ್ಲಿ ಮಾಸಿಕ ಶಿವಾನುಭವ ಚಿಂತನ ಸಮಾರಂಭ ಮತ್ತು ಶಂಕರ್ ತಂದೆ ಮಲ್ಲಣ್ಣ ಹಡಪದ್ ಕುಲಕುಂದ ಇವರಿಂದ ಪರಮ ಪೂಜ್ಯ ಸದ್ಗುರುಗಳವರ ತುಲಾಭಾರ ನೆರವೇರಿತು ಇದೇ ಸಂದರ್ಭದಲ್ಲಿ ಮುಂದಿನ ತಿಂಗಳು ನಡೆಯುತ್ತಿರುವ ಶ್ರೀ ಕ್ಷೇತ್ರ ನಾಲಭಾರ ಜಾತ್ರಾ ಮಹೋತ್ಸವದ ವಿವಿಧ ಸೇವೆಗೈದ ಭಕ್ತರಿಗೆ ಗುರುರಕ್ಷ ನೀಡಿ ಸನ್ಮಾನಿಸಲಾಯಿತು.