ಧಾರವಾಡ:

ಆಕಾಶವಾಣಿಯಿಂದ ಪ್ರಸಾರವಾಗುವ ಶರಣರ ವಚನಗಳ ಆಧಾರಿತ ವಚನಾಮೃತ ಮೂಲಕ ಮನೆ-ಮನೆಗೂ ತಲುಪಿಸುವಲ್ಲಿ ಬಸವ ಪೀಠ ಮತ್ತು ಆಕಾಶವಾಣಿಯ ಪಾತ್ರ ಬಹಳ ಇದೆ ಎಂದು ಚಿತ್ರದುರ್ಗದ ಮುರುಘರಾಜೇಂದ್ರ ವಿವಿ ಕುಲಪತಿ ಪ್ರೊ. ಕೆ.ಬಿ . ಗುಡಸಿ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ ಬಸವೇಶ್ವರ‌ ಪೀಠವು ಆಕಾಶವಾಣಿ ಹಾಗೂ ಹುಬ್ಬಳ್ಳಿಯ ಜಗದ್ಗುರು ಮೂರುಸಾವಿರ ಮಠದ ಸಹಯೋಗದೊಂದಿಗೆ ಮೂಜಗಂ ಸಭಾಭವನದಲ್ಲಿ ಆಯೋಜಿಸಿದ ವಚನಾಮೃತ- 250ರ ಸಂಭ್ರಮದಲ್ಲಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಣ್ಣವರು ಪ್ರತಿಪಾದಿಸಿದ ಚಿಂತನೆಗಳು ಎಲ್ಲ ಜಾತಿ, ಪ್ರದೇಶ ಮತ್ತು ಕಾಲಕ್ಕೂ ಅನ್ವಯಿಸುಕೊಳ್ಳಬಹುದಾದ ಸರ್ವಕಾಲಿಕ ಸತ್ಯವಾಗಿವೆ. ವಚನಾಮೃತ ಕಾರ್ಯಕ್ರಮದ ಮೂಲಕ ಸಮಾಜದ ಎಲ್ಲ ಜನರಿಗೂ ಸುಲಭವಾಗಿ ಮನೆ-ಮನೆಗೂ ತಲುಪಿಸುವಲ್ಲಿ ಬಸವ ಪೀಠ ಮತ್ತು ಆಕಾಶವಾಣಿಯು ಪ್ರಾಮಾಣಿಕವಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಡಾ. ಎಂ.ಎಂ. ಕಲಬುರ್ಗಿಯ ರಾಷ್ಟ್ರೀಯ ಟ್ರಸ್ಟ್ ಅಧ್ಯಕ್ಷ ಪ್ರೊ. ವೀರಣ್ಣ ರಾಜೂರ ಮಾತನಾಡಿ, ವಚನಗಳು ಅನುಭವದ ನುಡಿಗಳಾಗಿರುವುದರಿಂದ ಅವುಗಳಲ್ಲಿ ಮನುಷ್ಯನ ಬದುಕಿನ ಎಲ್ಲ ಬಗೆಯ ಸಮಸ್ಯೆಗಳಿಗೂ ಪರಿಹಾರ ಅಡಗಿದೆ. ದಾಸೋಹ ಚಿಂತನೆಯು ಶರಣ ಧರ್ಮದ ಪ್ರಧಾನ ಮಾರ್ಗವಾಗಿದೆ. ಜ್ಞಾನ ಸಂಪತ್ತು ಸಮಾಜದಿಂದ ಸಮಾಜಕ್ಕೆ ಬಳಕೆಯದಾಗ ಮಾತ್ರ ಪರಿಪೂರ್ಣ ಬದುಕು ಸಾಧ್ಯ ಎಂಬುದನ್ನು ಶಿವಶರಣರು ನಮಗೆ ಕಲಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಸದಸ್ಯ ಡಾ. ಸಿ.ಎಂ. ಕುಂದಗೋಳ, ವಚನಾಮೃತ ಸಾಹಿತ್ಯ, ಸಂಗೀತ, ಅನುಭವ ಇವೆಲ್ಲವನ್ನೂ ಹೂರಣದ ರೂಪದಲ್ಲಿ ಉಣಬಡಿಸುವ ಆಕಾಶವಾಣಿಯ ಜನಪ್ರಿಯ ಕಾರ್ಯಕ್ರಮ. ಯುವಜನತೆ ಆಧುನಿಕ ತಂತ್ರಜ್ಞಾನಗಳನ್ನು ಬಳಸುತ್ತಿದ್ದಾರೆ. ಅವುಗಳ ಮೂಲಕವೇ ಅವರಿಗೆ ಶಿವಶರಣರ ಚಿಂತನೆಗಳು ಸುಲಭವಾಗಿ ಕಲಿಯುವಂತೆ ಮಾಡುವ ಮಾಡಿರುವ ವಿನೂತನ ಕಾರ್ಯಕ್ರಮ ಎಂದರು.


ಕವಿವಿ ಪ್ರಭಾರ ಕುಲಸಚಿವ ಪ್ರೊ. ರಾಮಾಂಜಯನೇಯಲು ಮಾತನಾಡಿದರು. ಕವಿವಿ ಬಸವೇಶ್ವರ ಪೀಠದ ಸಂಯೋಜಕ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ, ಆಕಾಶವಾಣಿ ಮುಖ್ಯಸ್ಥರಾದ ಮಂಜುಳಾ ಪುರಾಣಿಕ, ಶರಣಬಸವ ಚೋಳಿನ, ಶ್ಯಾಮ ಮಲ್ಲನಗೌಡ, ಮಹೇಶ ಹುಲ್ಲಣ್ಣವರ, ವಿಜಯಕುಮಾರ ಕಮ್ಮಾರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್ ಮಾತನಾಡಿ, ಬಸವೇಶ್ವರ ಪೀಠವು ತುಂಬಾ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವರಾಜ ಲಿಂಗಶೆಟ್ಟರ, ಜಿ.ಬಿ. ಹಳ್ಯಾಳ, ಡಾ. ಸಿಸಿಲಿಯಾ ಡಿಕ್ರೋಜ್, ಶೈಲಜಾ ರಾಜಕುಮಾರ, ಶಂಕರ ಕೋಳಿವಾಡ, ಶಂಕರ ಕುಂಬಿ, ಸವಿತಾ ಅಮರಶೆಟ್ಟಿ ಮತ್ತಿತರರು ಇದ್ದರು.