ಚಾಮರಾಜನಗರ ಪಟ್ಟಣದ ರಥದ ಬೀದಿಯಲ್ಲಿ ಶ್ರೀ ವಿದ್ಯಾಗಣಪತಿ ಮಂಡಳಿಯವರಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯ ವಿಸರ್ಜನೆಯು ಇದೇ ಅ.29ರಂದು ನೆರವೇರಲಿದ್ದು, ಈ ಕಾರ್ಯಕ್ಕೆ ಎಲ್ಲಾ ಸಮುದಾಯದವರು ಸೌಹಾರ್ದತೆಯಿಂದ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಶ್ರೀರೂಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಾಮರಾಜನಗರ ಪಟ್ಟಣದ ರಥದ ಬೀದಿಯಲ್ಲಿ ಶ್ರೀ ವಿದ್ಯಾಗಣಪತಿ ಮಂಡಳಿಯವರಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯ ವಿಸರ್ಜನೆಯು ಇದೇ ಅ.29ರಂದು ನೆರವೇರಲಿದ್ದು, ಈ ಕಾರ್ಯಕ್ಕೆ ಎಲ್ಲಾ ಸಮುದಾಯದವರು ಸೌಹಾರ್ದತೆಯಿಂದ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಶ್ರೀರೂಪ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ಕಾರ್ಯಕ್ರಮ ಸಂಬಂಧ ವಿವಿಧ ಕೋಮಿನ ಮುಖಂಡರು, ಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚಾಮರಾಜನಗರ ಪಟ್ಟಣದಲ್ಲಿ ನಡೆಯಲಿರುವ 64ನೇ ವರ್ಷದ ಗಣೇಶ ಮೂರ್ತಿಯ ವಿಸರ್ಜನಾ ಕಾರ್ಯಕ್ರಮವಾಗಿದೆ. ಕಳೆದ ಬಾರಿ ಚೆನ್ನಾಗಿ ನಡೆಸಲಾಗಿತ್ತು. ಈ ಬಾರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ನಡೆಸಬೇಕಾಗಿದೆ. ಇದಕ್ಕಾಗಿ ಎಲ್ಲಾ ಸಮುದಾಯಗಳ ಮುಖಂಡರು ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಜಿಲ್ಲಾಡಳಿತದೊಂದಿಗೆ ಶಾಂತಿ, ಸಾಮರಸ್ಯದಿಂದ ಸಹಕರಿಸುವಂತೆ ಮನವಿ ಮಾಡಿದರು.

ಗಣೇಶ ಮೂರ್ತಿಯ ವಿಸರ್ಜನೆ ವೇಳೆ ಮೆರವಣಿಗೆ ಸಂಚರಿಸುವ ಮಾರ್ಗ ಹಾಗೂ ದೊಡ್ಡರಸನ ಕೊಳದಲ್ಲಿ ಲೈಟಿಂಗ್ಸ್ ವ್ಯವಸ್ಥೆ ಮಾಡಬೇಕು. ವಿದ್ಯುತ್ ತಂತಿಗಳು ಅಡಚಣೆಯಾಗದಂತೆ ನೋಡಿಕೊಳ್ಳಲು ವಿದ್ಯುತ್ ಸರಬರಾಜು ನಿಗಮದಿಂದ ಸಿಬ್ಬಂದಿ ನಿಯೋಜಿಸಬೇಕು. ನಗರಸಭೆ ವತಿಯಿಂದ ರಸ್ತೆ ಸ್ವಚ್ಛತೆ, ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕುಡಿಯುವ ನೀರು ಸಮರ್ಪಕವಾಗಿ ಪೂರೈಸಬೇಕು. ಮೆರವಣಿಗೆ ಮಾರ್ಗಗಳಲ್ಲಿ ಗುಂಡಿ ಮುಚ್ಚುವ ಕಾರ್ಯ ಶೀಘ್ರವಾಗಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು ಮಾತನಾಡಿ, ಕಳೆದ ವರ್ಷ ಗಣಪತಿ ವಿಸರ್ಜನಾ ಮೆರವಣಿಗೆಯು ಎಲ್ಲ ಕೋಮಿನವರ ಸಹಕಾರದಿಂದ ಶಾಂತಿಯುತವಾಗಿ ನಡೆದಿದೆ. ಪ್ರತಿಬಾರಿಯು ಇದೇ ಸಹಕಾರ ನೀಡಬೇಕು. ಎಲ್ಲಾ ಸಮಾಜದವರು ಸಂಭ್ರಮ, ಸಡಗರದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಸಾಮರಸ್ಯದಿಂದ ನಡೆದುಕೊಂಡು ಬಂದಿರುವ ಗಣಪತಿ ವಿಸರ್ಜನಾ ಕಾರ್ಯಕ್ರಮ ಮುಂದುವರಿಯಬೇಕು ಎಂದರು.

ಗಣಪತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಬಂದೋಬಸ್ತ್ಗಾಗಿ ಸಕಲ ಸಿದ್ದತೆ ಕೈಗೊಳ್ಳಲಾಗಿದೆ. ಸಿಸಿ ಕ್ಯಾಮರಾಗಳನ್ನು ವಿವಿಧೆಡೆ ಅಳವಡಿಸಲಾಗಿದೆ. ಸುಳ್ಳುಸುದ್ದಿ ಹಬ್ಬಿಸುವವರ ವಿರುದ್ಧ ಹಾಗೂ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲಾಗುವುದು. ಮುನ್ನೆಚ್ಚರಿಕೆಯಾಗಿ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆಂಬುಲೆನ್ಸ್, ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಕಮಾಂಡೋ, ಇನ್ನಿತರ ಇಲಾಖೆಗಳ ಅಗತ್ಯ ಸೇವೆಗಳು ನಿಯೋಜನೆಯಾಗಲಿವೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕೃತಿ ಬನ್ಸಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ವಿ. ಪ್ರಿಯದರ್ಶಿನಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಡಿವೈಎಸ್‌ಪಿ ಸ್ನೇಹರಾಜ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ವೆಂಕಟೇಶ್, ನಗರಸಭೆ ಪೌರಾಯುಕ್ತರಾದ ಪರಶುರಾಮ್ ಛಲವಾದಿ, ತಹಶೀಲ್ದಾರ್ ಗಿರಿಜಾ, ಶ್ರೀ ವಿದ್ಯಾಗಣಪತಿ ಮಂಡಳಿ ಅಧ್ಯಕ್ಷರಾದ ನವೀನ್, ಮುಖಂಡರಾದ ಎಸ್. ಬಾಲಸುಬ್ರಮಣ್ಯ, ಶಿವಣ್ಣ, ನಟರಾಜು, ರಮೇಶ್, ರಾಘವೇಂದ್ರ, ಮಾರ್ಕೆಟ್ ಕುಮಾರ್, ಮೂಡ್ಲುಪುರ ನಂದೀಶ್, ಕೃಷ್ಣಪ್ಪ, ವಿರಾಟ್ ಶಿವು, ಇನ್ನಿತರ ಪದಾಧಿಕಾರಿಗಳು, ವಿವಿಧ ಕೋಮಿನ ಮುಖಂಡರು ಹಾಜರಿದ್ದರು. 27ಸಿಎಚ್‌ಎನ್‌53

ಚಾಮರಾಜನಗರದಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ಕಾರ್ಯಕ್ರಮ ಸಂಬಂಧ ವಿವಿಧ ಕೋಮಿನ ಮುಖಂಡರು, ಪ್ರತಿನಿಧಿಗಳ ಜತೆ ಜಿಲ್ಲಾಧಿಕಾರಿ ಶ್ರೀರೂಪ ಸಭೆ ನಡೆಸಿದರು.