ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಕೂಡಲೇ ಸರ್ಕಾರವನ್ನು ವಿಸರ್ಜನೆ ಮಾಡಿದರೆ ರಾಜ್ಯಕ್ಕೆ ಒಳಿತು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಕೂಡಲೇ ಸರ್ಕಾರವನ್ನು ವಿಸರ್ಜನೆ ಮಾಡಿದರೆ ರಾಜ್ಯಕ್ಕೆ ಒಳಿತು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ಅಭಿವೃದ್ಧಿಯಂತು ಎಂದೋ ಮರೀಚಿಕೆಯಾಗಿದೆ, ಜನಸ್ಪಂದನೆ ಗಗನ ಕುಸುಮವಾಗಿದೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಮೂರಾಬಟ್ಟೆ ಆಗಿ ಹೋಗಿದೆ. ಮಹಿಳೆಯರಿಗೆ ಸುರಕ್ಷಿತವಾದ ವಾತಾವರಣವಿಲ್ಲ. ಅನೇಕ ಬಾಲಕಿಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಗೂಂಡಾಗಳು ತಾಂಡವವಾಡುತ್ತಿದ್ದಾರೆ, ಡ್ರಗ್ಸ್ ಧಂಧೆ ವ್ಯಾಪಕವಾಗಿದೆ, ಮಂತ್ರಿಗಳು ಹಾಗೂ ಜವಾಬ್ದಾರಿ ಸ್ಥಾನದಲ್ಲಿರುವ ಅಧಿಕಾರಿಗಳೇ ದುರ್ನಡತೆ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ರಾಜ್ಯ ಸರ್ಕಾರ ಅವ್ಯವಸ್ಥೆಯ ಆಗರವಾಗಿದ್ದು ಕೂಡಲೇ ಸರ್ಕಾರವನ್ನು ವಿಸರ್ಜಿಸಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ನಾಚಿಕೆ ಇಲ್ಲದ ಸಿದ್ದರಾಮಯ್ಯ ಅಧಿಕಾರದ ನಿದ್ದೆಯಲ್ಲಿದ್ದಾರೆ. ಅತ್ತ ಡಿಸಿಎಂ ಶಿವಕುಮಾರ್ ಅಧಿಕಾರ ದಾಹದಲ್ಲಿ ಪರಿತಪಿಸುತ್ತಿದ್ದಾರೆ. ಇವರಿಗೆ ಜನರ ಚಿಂತೆ ಮಾತ್ರ ಎಳ್ಳಷ್ಟೂ ಇಲ್ಲ. ಸಚಿವರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಉಗ್ರರಿಗೆ ರಾಜ್ಯದಲ್ಲಿ ಆಶ್ರಯ ಕೊಟ್ಟವರು ಯಾರು? ಅದರತ್ತ ಸ್ವಲ್ಪವೂ ಕಾಳಜಿ ಇಲ್ಲದ ಈ ಕಾಂಗ್ರೆಸ್ ನಾಯಕರು ವಿನಾಕಾರಣ ಪ್ರಧಾನಿ ಮೋದಿಜಿ ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಕುಸಿದು ಹೋಗಿರುವ ಆಡಳಿತ ವ್ಯವಸ್ಥೆ ಹೇಗೆ ಸರಿದಾರಿಗೆ ತರಬೇಕು ಎಂಬ ಬಗ್ಗೆ ಒಂದಂಶವೂ ಕಾಳಜಿ ಹೊಂದದ ಈ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಸಂದಾಯವಾಗಬೇಕಿದ್ದ ಅನುದಾನ ನುಂಗಿ ನೀರು ಕುಡಿದಿದೆ ಎಂದು ಪ್ರಕಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.