ದೌರ್ಜನ್ಯದಿಂದ ನೊಂದ ಸಂತ್ರಸ್ತರಿಗೆ ಪರಿಹಾರ ವಿತರಿಸಿ

| Published : Jan 11 2025, 12:46 AM IST

ದೌರ್ಜನ್ಯದಿಂದ ನೊಂದ ಸಂತ್ರಸ್ತರಿಗೆ ಪರಿಹಾರ ವಿತರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

Distribute compensation to victims of violence

-ಪ.ಜಾತಿ, ಪ.ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆ 1995ರ ನಿಯಮ 17ರ ರೀತ್ಯ ಜಿಲ್ಲಾ ಜಾಗೃತಿ ಸಮಿತಿಯ ಸಭೆಯಲ್ಲಿ ಡೀಸಿ ಸೂಚನೆ

-------

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದ ಮೇಲೆ ಅತಿ ಹೆಚ್ಚು ದೌರ್ಜನ್ಯ ನಡೆಯುವಂತಹ ಗ್ರಾಮಗಳ ಪಟ್ಟಿಯನ್ನು ಇಟ್ಟುಕೊಂಡು ತಕ್ಷಣ ಕಾಲ ಕಾಲಕ್ಕೆ ಭೇಟಿ ನೀಡಿ ಅಲ್ಲಿ ಸೂಕ್ತ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಬಿ.ಸುಶೀಲಾ ಅವರು ಸೂಚನೆ ನೀಡಿದರು.

ನಗರದ ಜಿಲ್ಲಾಡಳಿತ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆ 1995ರ ನಿಯಮ 17ರ ರೀತ್ಯ ಜಿಲ್ಲಾ ಜಾಗೃತಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ವಸತಿ ನಿಲಯಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ತಿಳಿಸಿದರು.

ದೌರ್ಜನ್ಯದಿಂದ ನೊಂದ ಸಂತ್ರಸ್ತರಿಗೆ ತಕ್ಷಣ ಪರಿಹಾರ ನೀಡಬೇಕು. ಹತ್ತಿಗೂಡುರ ಗ್ರಾಮದಲ್ಲಿ ಸರ್ಕಾರಿ ಸರ್ವೇ ನಂಬರ್‌ ಪರಿಶೀಲಿಸಿ ಕ್ರಮ ವಹಿಸಬೇಕು ಶಹಾಪುರ ನಗರದ ಮೂವರು ಸಂತ್ರಸ್ತರಿಗೆ ಪರಿಹಾರ ಕಲ್ಪಿಸಬೇಕು ಎಂದು ಸೂಚಿಸಿದರು.

ಸಾರ್ವಜನಿಕ ಸಮಸ್ಯೆಗಳಿಗೆ ಅಧಿಕಾರಿಗಳು ತುರ್ತು ಸ್ಪಂದಿಸಿ ಕಾರ್ಯಗಳನ್ನು ನಿರ್ವಹಿಸಬೇಕು. ದೌರ್ಜನ್ಯ ಪ್ರಕರಣಗಳಿಗೆ ಸಂತ್ರಸ್ತರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹಾಗೂ ಅಗತ್ಯ ಸೌಲಭ್ಯ ಒದಗಿಸಲು ತಿಳಿಸಿದರು.

ವಸತಿ ನಿಲಯ ಸುರಕ್ಷತಾ ಸಮಿತಿ ಸದಸ್ಯರಿಗೆ ಕಾಲಕಾಲಕ್ಕೆ ವಸತಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಸಲಹೆ ಸೂಚನೆ ನೀಡಬೇಕೆಂದರು. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಪಟ್ಟಂತೆ 2024ರ ಜು.14ರ ರಿಂದ 2025ರ ಜ.9ರವರೆಗಿನ ಅವಧಿಯಲ್ಲಿ ನೊಂದ ಸಂತ್ರಸ್ತರಿಗೆ ಒಟ್ಟು 46 ಲಕ್ಷ ರು. ಪರಿಹಾರ ಧನವನ್ನು ಜಿಲ್ಲಾಡಳಿತದಿಂದ ವಿತರಿಸಲಾಗಿದೆ ಎಂದರು.

ಜಿಲ್ಲಾ ಜಾಗೃತಿ ಸಮಿತಿಯ ನಾಮ ನಿರ್ದೇಶಿತ ಸದಸ್ಯರು ವಿವಿಧ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. ಆಗ ಜಿಲ್ಲಾಧಿಕಾರಿ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಸಾರ್ವಜನಿಕ ಸಮಸ್ಯೆಗಳನ್ನು ಬಗೆ ಹರಿಸಬೇಕು. ಪ.ಜಾ ಮತ್ತು ಪ. ಪಂಗಡದ ಜನಾಂಗದ ಮೇಲೆ ಆಗುವ ದೌರ್ಜನ್ಯ ಪ್ರಕರಣಗಳಿಗೆ ಪರಿಹಾರ ವಿತರಿಸಲು ಒಟ್ಟು 1.20 ಲಕ್ಷ ರು. ಅನುದಾನ ಬಿಡುಗಡೆಯಾಗಿದೆ. ಉಳಿದ ಅನುದಾನ ಬಾಕಿ ಪ್ರಕರಣಗಳಿಗೆ ವೆಚ್ಚ ಭರಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು.

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ವ್ಯಾಪ್ತಿಯಲ್ಲಿ ಭೂ ಒಡೆತನ ಯೋಜನೆ, ಈ ಜನಾಂಗಕ್ಕಾಗಿ ಸಾರ್ವಜನಿಕ ಸ್ಮಶಾನಭೂಮಿ ಸೌಲಭ್ಯ ಗುರುತಿಸುವ ಜೊತೆಗೆ ಪ್ರಸ್ತಾವನೆ ಸಲ್ಲಿಸಲು, ವಿವಿಧ ನಿಗಮಗಳ ವ್ಯಾಪ್ತಿಯಲ್ಲಿ ಈ ಜನಾಂಗಕ್ಕಾಗಿ ನೀಡಲಾಗುವ ಸಾಲಕ್ಕಾಗಿ ಅನಗತ್ಯ ದಾಖಲಾತಿ ಕೇಳದಂತೆ ಹಾಗೂ ಸ್ಮಶಾನ ಭೂಮಿ ಒತ್ತುವರಿಯಾಗಿರುವ ಬಗ್ಗೆ ಪರಿಶೀಲಿಸಿ ತಕ್ಷಣ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಮಾತನಾಡಿ, ದೌರ್ಜನ್ಯ ಪ್ರಕರಣಗಳಲ್ಲಿ ನಿಯಮನುಸಾರ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.

ಸುರಪುರ ತಾಲೂಕಿನಲ್ಲಿ ದೌರ್ಜನ್ಯ ಪ್ರಕರಣ ಕುರಿತು ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕೆ ವಹಿಸಿ ಕ್ರಮ ಕೈಗೊಳ್ಳುತ್ತೇವೆ. ಜಿಲ್ಲೆಯಾದ್ಯಂತ ದೌರ್ಜನ್ಯ ಪ್ರಕರಣಗಳು 2021ರಲ್ಲಿ 51, ಹಾಗೂ 2024ರಲ್ಲಿ 46 ಪ್ರಕರಣ ದಾಖಲಾಗಿದ್ದು, ಪ್ರಸ್ತುತ ದೌರ್ಜನ್ಯ ಪ್ರಕರಣ 10 ತನಿಖೆಯಲ್ಲಿ ಇದೆ ಎಂದು ಅವರು ತಿಳಿಸಿದರು.

ಯಾದಗಿರಿ ದೌರ್ಜನ್ಯ ಸಮಿತಿ ನಾಮ ನಿರ್ದೇಶಿತರಾದ ಮರೆಪ್ಪ ಚಟೇಕರ್, ಸುರಪುರ ದೌರ್ಜನ್ಯ ಸಮಿತಿ ನಿರ್ದೇಶಿತ ನಿಂಗಪ್ಪ ಬುಡ್ಡಾ ದೇವಳಗುಡ್ಡ, ಮಲ್ಲಪ್ಪ ಉಳಡಿಗೇರ್, ರವಿಕುಮಾರ ಯಂಕ್ಷಂತೆ, ಯಾದಗಿರಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಎಸ್.ಎಸ್. ಚನ್ನಬಸಪ್ಪ ಸೇರಿದಂತೆ ಇತರರಿದ್ದರು.

----

ಫೋಟೊ: ಯಾದಗಿರಿ ನಗರದ ಜಿಲ್ಲಾಡಳಿತ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆ 1995ರ ನಿಯಮ 17ರ ರೀತ್ಯ ಜಿಲ್ಲಾ ಜಾಗೃತಿ ಸಮಿತಿಯ ಸಭೆ ಜರುಗಿತು.

----

10ವೈಡಿಆರ್1