ರೈತರ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ ವಿತರಿಸಿ: ರೇವಣೆಪ್ಪ

| Published : May 23 2025, 12:27 AM IST

ರೈತರ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ ವಿತರಿಸಿ: ರೇವಣೆಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

2025- 26ನೇ ಸಾಲಿನ ಮುಂಗಾರು ಬೆಳೆಗಳ ಅನುಗುಣವಾಗಿ ಮೆಕ್ಕಜೋಳ, ಸೋಯಾ, ಅವರೆ, ಶೇಂಗಾ, ಹೆಸರು, ತೊಗರಿ, ಅಲಸಂದೆ ಹಾಗೂ ಇತರೆ ಬಿತ್ತನೆ ಬೀಜಗಳನ್ನು ನೀಡುತ್ತಿದ್ದು, ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನು ಖರೀದಿಸುವುದು ಉತ್ತಮ.

ರಟ್ಟೀಹಳ್ಳಿ: ರೈತರ ಅನುಕೂಲಕ್ಕಾಗಿ ಕೃಷಿ ಇಲಾಖೆಯಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳು ದೊರೆಯುತ್ತಿದ್ದು, ಇದರ ಸದುಪಯೋಗ ಪಡೆದುಕೊಂಡು ಉತ್ತಮ ಇಳುವರಿ ಪಡೆಯಿರಿ ಎಂದು ಕೃಷಿಕ ಸಮಾಜದ ಅಧ್ಯಕ್ಷ ರೇವಣೆಪ್ಪ ತಂಬಾಕದ ಸಲಹೆ ನೀಡಿದರು.ಪಟ್ಟಣದ ಕೃಷಿ ಇಲಾಖೆಯಲ್ಲಿ ನಡೆದ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಸ್ತುತ ವರ್ಷ ಮುಂಗಾರು ಬೇಗನೆ ಆರಂಭವಾಗಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಕೃಷಿ ಅಧಿಕಾರಿಗಳು ರೈತರ ಬೇಡಿಕೆಗನುಗುಣವಾಗಿ ಬಿತ್ತನೆ ಬೀಜ ಹಾಗೂ ಗೊಬ್ಬರವನ್ನು ನೀಡಬೇಕು ಎಂದರು.2025- 26ನೇ ಸಾಲಿನ ಮುಂಗಾರು ಬೆಳೆಗಳ ಅನುಗುಣವಾಗಿ ಮೆಕ್ಕಜೋಳ, ಸೋಯಾ, ಅವರೆ, ಶೇಂಗಾ, ಹೆಸರು, ತೊಗರಿ, ಅಲಸಂದೆ ಹಾಗೂ ಇತರೆ ಬಿತ್ತನೆ ಬೀಜಗಳನ್ನು ನೀಡುತ್ತಿದ್ದು, ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನು ಖರೀದಿಸುವುದು ಉತ್ತಮ ಎಂದರು.ಸಹಾಯಕ ಕೃಷಿ ನಿರ್ದೇಶಕ ಹಿತೇಂದ್ರ ಗೌಡಪ್ಪಳವರ ಮಾತನಾಡಿ, ಮಳೆ ತಾಲೂಕಿನಾದ್ಯಂತ ಉತ್ತಮವಾಗಿ ಬೀಳುತ್ತಿದ್ದು, ರೈತರ ಮೊಗದಲ್ಲಿ ಹರ್ಷವನ್ನುಂಟು ಮಾಡಿದೆ. ಅದೇ ರೀತಿ ಗುಣಮಟ್ಟದ ಬಿತ್ತನೆ ಬೀಜ, ಗೊಬ್ಬರವನ್ನು ಅಧಿಕೃತ ಮಾರಾಟ ಕೇಂದ್ರದಲ್ಲಿ ಖರೀದಿಸುವುದು ಉತ್ತಮ ಎಂದರು.ತಾಲೂಕಿನಲ್ಲಿ ರಟ್ಟೀಹಳ್ಳಿ ರೈತ ಸಂಪರ್ಕ ಕೇಂದ್ರವಲ್ಲದೇ, ತಡಕನಹಳ್ಳಿ, ಹಳ್ಳೂರ ಎರಡು ಉಪ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ತಾಲೂಕಿನ ರೈತರು ತಮಗೆ ಅನುಕೂಲವಾಗುವ ಕೇಂದ್ರಗಳಲ್ಲಿ ಖರೀದಿ ಮಾಡಬಹುದು ಎಂದರು.

ರಾಣಿಬೆನ್ನೂರು ಉಪ ಕೃಷಿ ನಿರ್ದೇಶಕ ಕರಿಯಪ್ಪ ಕೊರಚರ, ಜಿ.ಎಂ. ಬತ್ತಿಕೊಪ್ಪ, ಮಂಗಳಾ ಹುಲ್ಲತ್ತಿ, ತಾಲೂಕಿನ ಕೃಷಿಕ ಸಮಾಜದ ಸದಸ್ಯರು ಹಾಗೂ ಕೃಷಿ ಇಲಾಖೆಯ ಸಿಬ್ಬಂದಿ ಇದ್ದರು.ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ

ಹಿರೇಕೆರೂರು: 2025- 26ನೇ ಸಾಲಿನ ಮುಂಗಾರು ಪ್ರಾರಂಭವಾಗಿರುವುದರಿಂದ ಬಿತ್ತನೆ ಚುರುಕಾಗಿದೆ. ರೈತರಿಗೆ ಅವಶ್ಯವಿರುವ ಮೆಕ್ಕೆಜೋಳ, ಸೋಯಾಅವರೆ, ಶೇಂಗಾ, ಹೆಸರು, ತೊಗರಿ, ಅಲಸಂದೆ ಹಾಗೂ ಇತರೆ ಬಿತ್ತನೆ ಬೀಜಗಳ ದಾಸ್ತಾನು ಮಾಡಲಾಗಿದೆ ಎಂದು ಕೃಷಿಕ ಸಮಾಜದ ಅಧ್ಯಕ್ಷ ಜಿ. ಶಿವನಗೌಡ್ರ ತಿಳಿಸಿದರು.

ಪಟ್ಟಣದಲ್ಲಿ ಬಿತ್ತನೆ ಬೀಜ ವಿತರಣಾ ಕಾರ‍್ಯಕ್ರಮವನ್ನು ಚಾಲನೆ ನೀಡಿ ಮಾತನಾಡಿ, ಕೃಷಿ ಇಲಾಖೆಯಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳು ದೊರೆಯುತ್ತವೆ. ರೈತರು ಇದರ ಸದುಪಯೋಗ ಮಾಡಿಕೊಂಡು ಗುಣಮಟ್ಟದ ಇಳುವರಿ ಪಡೆಯಬೇಕೆಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಹಿತೇಂದ್ರ ಬಿ. ಗೌಡಪ್ಪಳವರ ಮಾತನಾಡಿ, ರೈತರು ಮುಂಗಾರು ಹಂಗಾಮಿನ ಬಿತ್ತನೆಗಾಗಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಆದ್ಯತೆಯ ಮೇರೆಗೆ ಬಿತ್ತನೆ ಬೀಜ ಖರೀದಿಸುವುದು ಉತ್ತಮ. ಬೀಜ ಖರೀದಿಸುವಾಗ ರೈತರು ಬಿತ್ತನೆ ಬೀಜಗಳನ್ನು ಖರೀದಿಸಿದ ರಶೀದಿಯನ್ನು ಕಾಯ್ದಿಟ್ಟುಕೊಳ್ಳಬೇಕು. ರಶೀದಿಯಲ್ಲಿ ಲಾಟ್ ನಂಬರ್ ಹಾಗೂ ಮಾರಾಟ ಬೆಲೆ ವಿವರ ನಮೂದಿಸಿರುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದರು.ಕೃಷಿ ಇಲಾಖೆಯ ಉಪನಿರ್ದೇಶಕ- 2 ಕರಿಯಲ್ಲಪ್ಪ ಡಿ. ಕೊರಚರ ಮಾತನಾಡಿ, ರೈತರು ಕೇವಲ ಒಂದು ಅಥವಾ ಎರಡು ಪೋಷಕಾಂಶ ಒದಗಿಸುವ ಯೂರಿಯಾ ಹಾಗೂ ಡಿಎಪಿ ರಸಗೊಬ್ಬರವನ್ನು ರೂಢಿಗತವಾಗಿ ಬಳಸುತ್ತಿದ್ದು, ಇವುಗಳಲ್ಲಿ ಸಾರಜನಕ ಮತ್ತು ರಂಜಕದ ಅಂಶ ಮಾತ್ರವಿರುತ್ತದೆ. ಆದರೆ ಬೆಳೆಗಳಿಗೆ ಬರ ಮತ್ತು ರೋಗನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅತ್ಯಂತ ಅವಶ್ಯಕವಾಗಿರುವ ಪೋಟ್ಯಾಷ್ ಅಂಶ ಇರಲ್ಲ. ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರಗಳನ್ನು ಬಳಸಬೇಕೆಂದು ತಿಳಿಸಿದರು.

ಕೃಷಿ ಅಧಿಕಾರಿಗಳಾದ ರಾಮಗೌಡ ಹಾದಿಮನಿ, ಫಕ್ಕೀರಪ್ಪ ಪಟ್ಟಣ, ಕೃಷಿ ಇಲಾಖೆಯ ಸಿಬ್ಬಂದಿ ಇದ್ದರು.