136 ರೈತರಿಗೆ ₹5.88 ಕೋಟಿ ಪರಿಹಾರ ಚೆಕ್‌ ವಿತರಣೆ

| Published : Jun 19 2024, 01:03 AM IST

ಸಾರಾಂಶ

ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆ ನಿರ್ಮಾಣ ಸೇರಿದಂತೆ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಕಳೆದುಕೊಂಡಿರುವ ರೈತರಿಗೆ ಪರಿಹಾರದ ಚೆಕ್‌ಗಳನ್ನು ಶಾಸಕ ಕೃಷ್ಣನಾಯ್ಕ ವಿತರಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆ ನಿರ್ಮಾಣ ಸೇರಿದಂತೆ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಕಳೆದುಕೊಂಡಿರುವ ರೈತರಿಗೆ ಪರಿಹಾರದ ಚೆಕ್‌ಗಳನ್ನು ಶಾಸಕ ಕೃಷ್ಣನಾಯ್ಕ ವಿತರಣೆ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಚೆಕ್‌ ವಿತರಣೆ ಮಾಡಿ ಮಾತನಾಡಿದ ಅವರು, ಸಿಂಗಟಾಲೂರು ಏತ ನೀರಾವರಿ ಯೋಜನೆಯ ವಿವಿಧ ಉದ್ದೇಶಗಳಿಗೆ ರೈತರು ಭೂಮಿ ಕಳೆದುಕೊಂಡಿದ್ದಾರೆ, ಭೂಮಿ ನೀಡಿರುವ ರೈತರು ಪರಿಹಾರಕ್ಕಾಗಿ 16 ವರ್ಷಗಳಿಂದ ಕಚೇರಿಗೆ ಅಲೆದು ಸುಸ್ತಾಗಿದ್ದಾರೆ. ಈ ಕುರಿತು ಅಧಿವೇಶನದಲ್ಲಿ ಚರ್ಚೆ ಮಾಡಿದ್ದು, ರೈತರಿಗೆ ಸೂಕ್ತ ಪರಿಹಾರ ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿ ನಿಯೋಜನೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದೆ ಎಂದರು.

ತಾಲೂಕಿನ ಮುದೇನೂರು, ನಂದಿಹಳ್ಳಿ, ಹೊಳಗುಂದಿ, ದಾಸರಹಳ್ಳಿ ಗ್ರಾಮಗಳ 136 ರೈತರಿಗೆ ₹5.88 ಕೋಟಿ ಪರಿಹಾರ ಬಿಡುಗಡೆಯಾಗಿದೆ. ಇದರಲ್ಲಿ ಸೂಕ್ತ ದಾಖಲೆಗಳು ಇರುವ 26 ರೈತರಿಗೆ, ₹1.31 ಕೋಟಿ ಪರಿಹಾರದ ಚೆಕ್‌ಗಳನ್ನು ನೀಡಲಾಗುತ್ತಿದೆ. ಉಳಿದ ರೈತರ ಪರಿಹಾರ ಹಂತ ಹಂತವಾಗಿ ಬಿಡುಗಡೆಯಾಗುತ್ತದೆ ಎಂದರು.

ಈ ಯೋಜನೆಗೆ ಭೂಮಿ ಕಳೆದುಕೊಂಡಿರುವ ರೈತರಿಗೆ ಪರಿಹಾರ ವಿತರಣೆ ಸಾಕಷ್ಟು ವಿಳಂಬವಾಗಿದೆ. ಇದನ್ನು ತಡೆಯಲು ರೈತರು ನೇರ ಖರೀದಿಗೆ ಒಪ್ಪಿದರ, ಈ ಕುರಿತು ಜಿಲ್ಲಾಧಿಕಾರಿಗಳ ಬಳಿ ಚರ್ಚಿಸುತ್ತೇನೆ. ಈ ವಿಚಾರವಾಗಿ ರೈತರು ಸಮ್ಮತಿ ಸೂಚಿಸಿದರ ಭೂಸ್ವಾಧೀನಾ ಪ್ರಕ್ರಿಯೆಯನ್ನು ನಡೆಸಿ ತ್ವರಿತಗತಿಯಲ್ಲಿ ಪರಿಹಾರ ವಿತರಣೆಗೆ ಕ್ರಮ ವಹಿಸಲಾಗುವುದು ಎಂದರು.

ರೈತರಿಗೆ ಬೇಗನೆ ಪರಿಹಾರ ನೀಡುವ ಉದ್ದೇಶ ಜತೆಗೆ, ಇಲ್ಲಿನ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಗೆ ಖಾಯಂ ವಿಶೇಷ ಭೂಸ್ವಾಧೀನಾಧಿಕಾರಿಯನ್ನು ನಿಯೋಜಿಸಬೇಕೆಂದು, ಈಗಾಗಲೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಕಂದಾಯ ಸಚಿವರಿಗೂ 2 ಬಾರಿ ಪತ್ರ ಬರೆಯಲಾಗಿದ್ದು, ಈ ಕುರಿತು ಸರ್ಕಾರದ ಮಟ್ಟದಲ್ಲಿ ಮತ್ತೊಮ್ಮೆ ಚರ್ಚಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ಅಂಬರೀಷ, ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯ ಶೆಕ್ಷಾವಲಿ, ಮಹಮದ್‌ ಬಾಷ, ಮಲ್ಲಿಕಾರ್ಜುನ ಸೇರಿದಂತೆ ಇತರರಿದ್ದರು.