ಹೊಸದಾಗಿ ನೇಮಕಗೊಂಡ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನೇಮಕಾತಿ ಆದೇಶ ಪತ್ರ ವಿತರಣೆ ಹಾಗೂ ವಿವಿಧ ಇಲಾಖಾ ಸವಲತ್ತುಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಯಾವುದೇ ಶಿಫಾರಸ್ಸು, ರಾಜಕೀಯ ಒತ್ತಡ ಇಲ್ಲದೆ ಅವರು ಪಡೆದ ಅಂಕಗಳು ಹಾಗೂ ಅರ್ಹತೆಗಳನ್ವಯ ಜಿಲ್ಲೆಯಲ್ಲಿ ಇಂದು 31 ಅಂಗನವಾಡಿ ಕಾರ್ಯಕರ್ತೆಯರು, 163 ಸಹಾಯಕಿಯರಿಗೆ ನೇಮಕಾತಿ ಆದೇಶ ಪತ್ರಗಳನ್ನು ವಿತರಣೆ ಮಾಡಿರುವುದು ಅಭಿನಂದನಾರ್ಹವಾದ ವಿಚಾರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಜಿಲ್ಲಾ ಕನ್ನಡ ಭವನದಲ್ಲಿ ಆಯೋಜಿಸಿದ್ದ ಹೊಸದಾಗಿ ನೇಮಕಗೊಂಡ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನೇಮಕಾತಿ ಆದೇಶ ಪತ್ರ ವಿತರಣೆ ಹಾಗೂ ವಿವಿಧ ಇಲಾಖಾ ಸವಲತ್ತುಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಂಗನವಾಡಿ ಸಿಬ್ಬಂದಿ ನೇಮಕದ ಬಗ್ಗೆ ಈ ಹಿಂದೆ ಬಹಳ ತತ್ಸಾರ ಇತ್ತು. ಆ ಕೆಲಸವನ್ನು ನಾವೇಕೆ ಮಾಡಬೇಕು ಎಂಬ ಭಾವನೆ ಇತ್ತು. ಪ್ರಸ್ತುತ ಆ ಭಾವನೆ ಬದಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಬಹಳ ಬೇಡಿಕೆ ಇದೆ, ಅದೇ ರೀತಿ ಸ್ಪರ್ಧೆಯು ಇದೆ. ಆಯ್ಕೆ ಬಯಸುವ ಅಭ್ಯರ್ಥಿಗಳು ಗಳಿಸಿದ ವಿದ್ಯಾರ್ಹತೆಯ ಅಂಕಗಳು ಹಾಗೂ ಸ್ಥಳೀಯ ವಾಸದ ಅರ್ಹತೆಯ ಆಧಾರದ ಮೇಲೆ ಜಿಲ್ಲಾಡಳಿತ ಇಂದು ಒಟ್ಟು 194 ಅಂಗನವಾಡಿ ಸಿಬ್ಬಂದಿಯನ್ನು ಜಿಲ್ಲಾ ಮಟ್ಟದಲ್ಲಿಯೆ ಆಯ್ಕೆ ಮಾಡಿ ನೇಮಕಾತಿ ಪತ್ರವನ್ನು ಬಹಳ ಪಾರದರ್ಶಕವಾಗಿ ಹಾಗೂ ಸಮರ್ಪಕವಾಗಿ ವಿತರಣೆ ಮಾಡಿದೆ ಎಂದರು.ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ 3ನೇ ವರ್ಷದಿಂದಲೇ ನರ್ಸರಿ ಮಾದರಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂಬ ವಿಚಾರದಲ್ಲಿ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ, ಇದರ ಭಾಗವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಯೋಗಿಕವಾಗಿ ಅಂಗನವಾಡಿಗಳನ್ನು ಉನ್ನತೀಕರಿಸಿ ಮಾಂಟೆಸೆರಿ ಹಾಗೂ ನರ್ಸರಿ ಮಾದರಿಯಲ್ಲಿ ಶಿಕ್ಷಣ ನೀಡುವ ಪ್ರಯತ್ನ ನಡೆಯುತ್ತಿದೆ. ಇದರ ಸಾಧಕ ಬಾಧಕಗಳ ಬಗ್ಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಪರಿಶೀಲಿಸುವ ಅಗತ್ಯವಿದೆ. ಈ ರೀತಿಯ ಶಿಕ್ಷಣ ಪದ್ದತಿ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಅಂಗನವಾಡಿಗಳ ಸ್ವರೂಪವೇ ಬದಲಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಟ್ಟರು.ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಉನ್ನತ ಜಾತಿಯವರು, ಕೆಳಜಾತಿಯವರ ಮನೆಗಳಿಗೆ ಪರಸ್ಪರ ಪ್ರವೇಶ ಮಾಡದಿರುವಂತಹ ಪರಿಸ್ಥಿತಿ ಇನ್ನೂ ಕೆಲವೆಡೆ ಜೀವಂತವಾಗಿದೆ. ಇಂತಹ ಅನಿಷ್ಟ ಜಾತಿ ಪದ್ಧತಿಯನ್ನು ತೊಡೆದು ಹಾಕಲು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಿಬ್ಬಂದಿ ಕಂಕಣ ಬದ್ದರಾಗಿ ಕೆಲಸ ಮಾಡಿ ಜಾತಿ ಪದ್ಧತಿಯನ್ನು ಕಿತ್ತೆಸೆಯುವಂತಹ ಕೆಲಸವನ್ನು ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ಅಂತರ್ಜಾತಿ ವಿವಾಹವಾದ 54 ಜೋಡಿಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರೋತ್ಸಾಹಧನ ವಿತರಣೆ ಮಾಡಲಾಯಿತು. ನೂತನ ಫಲಾನುಭವಿಗಳಿಗೆ ಪಡಿತರ ಚೀಟಿಗಳನ್ನು ಇತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು, ಜಿಪಂ ಸಿಇಒ ಡಾ.ವೈ.ನವೀನ್ ಭಟ್, ಎಸ್‌ಪಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ. ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ತಹಸೀಲ್ದಾರ್ ರಶ್ಮಿ ಇತರರು ಇದ್ದರು. ಸಿಕೆಬಿ-6 ಜಿಲ್ಲಾ ಕನ್ನಡ ಭವನದಲ್ಲಿ ಆಯೋಜಿಸಿದ್ದ ಹೊಸದಾಗಿ ನೇಮಕಗೊಂಡ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನೇಮಕಾತಿ ಆದೇಶ ಪತ್ರಗಳನ್ನು ವಿತರಣೆ ಹಾಗೂ ವಿವಿಧ ಇಲಾಖಾ ಸವಲತ್ತುಗಳ ವಿತರಣೆಯನ್ನು ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್ ವಿತರಿಸಿದರು.