ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಕಳುಹಿಸಿ ಕೊಟ್ಟ ನೂತನ ದೇಗುಲದಲ್ಲಿ ಬಾಲರಾಮನ ಪ್ರತಿಷ್ಠಾಪನೆಗೆಂದು ಸೃಜಿಸಲಾದ ಮಂತ್ರಾಕ್ಷತೆಗಳನ್ನು ಶ್ರೀರಾಮ ಸೇನೆ ಜಿಲ್ಲಾ ಘಟಕದಿಂದ ನಗರದಲ್ಲಿ ವಿತರಿಸಲಾಯಿತು.ಶಹಾಪೂರ ಪೇಟೆ, ಶರಣನಗರ, ವಾರ್ಡ್ ನಂ.4ರಲ್ಲಿನ ಏಕದಂಡಗಿಮಠದಿಂದ ಪ್ರಾರಂಭಿಸಲಾದ ವಿತರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಶಶಾಂಕ ನಾಯಕ ಪಾಲ್ಗೊಂಡು ಮಂತ್ರಾಕ್ಷತೆ ಹಾಗೂ ಶ್ರೀರಾಮ ಜನ್ಮಭೂಮಿ ಕರಪತ್ರಗಳನ್ನು ನೀಡಿ, 500 ವರ್ಷಗಳ ನಂತರ ದೇಶದ 140 ಕೋಟಿ ಜನರ ಕನಸು ನನಸಾಗುವ ವೇಳೆ ಎಲ್ಲರೂ ಸಂಭ್ರಮಿಸಬೇಕು ಎಂದು ಮನವಿ ಮಾಡಿ ಮಂತ್ರಾಕ್ಷತೆ ವಿತರಿಸಿದರು. ಜ. 22ರಂದು ಜರುಗುವ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ವೇಳೆ ಎಲ್ಲರೂ ಮನೆ ಮನೆಗಳಲ್ಲಿ ವಿಶೇಷ ಪೂಜೆ, ದೀಪಗಳು ಬೆಳಗಿಸಿ, ದಾನ ಧರ್ಮ ಮಾಡಬೇಕೆಂದು ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳ ಕರೆಯನ್ನು ಪಾಲಿಸೋಣ ಎಂದು ಹೇಳಿದರು. ವಾರ್ಡ್‌ನ ಸರ್ವ ಸಮುದಾಯದವರಿಗೂ ಮಂತ್ರಾಕ್ಷತೆ ವಿತರಿಸಲಾಯಿತು ಎಂದು ಶಶಾಂಕ ನಾಯಕ ಮಾಧ್ಯಮಗಳಿಗೆ ತಿಳಿಸಿದರು. ಈ ವೇಳೆ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ಮಹೇಂದ್ರಕರ್, ನಗರಾಧ್ಯಕ್ಷ ಹಣಮಂತ್ರಾಯ ಪಾಟೀಲ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ರಘುರಾಮ್, ರಾಕೇಶ ನಾಯಕ, ಆಕಾಶ ಚವ್ಹಾಣ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.