ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ಪಟ್ಟಣದ ಹೊರವಲಯದ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ತಾಲೂಕು ಉಪಕಚೇರಿ ಆವರಣದಲ್ಲಿ ರೈತರಿಗೆ ಕೃಷಿ ಪರಿಕರ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಒಕ್ಕೂಟದ ಜಿಲ್ಲಾ ನಿರ್ದೇಶಕರಾದ ಬೆಳ್ಳಿಬಟ್ಟಲು ಚಂದ್ರಶೇಖರ್ ರೆಡ್ಡಿ ಅವರು ಅಧ್ಯಕ್ಷತೆ ವಹಿಸಿ, ಸಮಾರಂಭದಲ್ಲಿ ಒಟ್ಟು 65 ಲಕ್ಷ ರು.ಮೌಲ್ಯದ ವಿವಿಧ ಉಪಕರಣಗಳನ್ನು ರೈತ ಫಲಾನುಭವಿಗಳಿಗೆ ವಿತರಿಸಿದರು.ಬಳಿಕ ತುಮುಲ್ ನಿರ್ದೇಶಕ ಸಿ.ಎಸ್.ರೆಡ್ಡಿ ಮಾತನಾಡಿ, ತುಮುಲ್ ಅಧ್ಯಕ್ಷರಾದ ಇಲ್ಲಿನ ಶಾಸಕ ಎಚ್.ವಿ.ವೆಂಕಟೇಶ್ ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ ಅವರ ಸಹಕಾರ ಹಾಗೂ ಮಾರ್ಗದರ್ಶನದ ಮೇರೆಗೆ ಸುಮಾರು 50 ಲಕ್ಷ ರು. ಮೌಲ್ಯದ ಸಹಾಯಧನದಲ್ಲಿ 24 ಮಂದಿ ರೈತರಿಗೆ ರೈತ ಮರಣ ಪರಿಹಾರ, 100 ರಾಸುಗಳ ಮರಣ ಪರಿಹಾರ, 32 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಚೆಕ್‌ಗಳನ್ನು ನೀಡಿರುವುದಾಗಿ ಹೇಳಿದರು.
ರೈತರ ಉಪಯೋಗಕ್ಕಾಗಿ ಶೇ.50ರಷ್ಟು ರಿಯಾಯಿತಿಯ ದರದಲ್ಲಿ 15 ಲಕ್ಷ ರು. ಮೌಲ್ಯದ ಹುಲ್ಲು ಕಟಾವು ಯಂತ್ರ ಮತ್ತು ಹಾಲು ಕರಿಯುವ ಯಂತ್ರಗಳನ್ನು ಒಟ್ಟು 90 ರೈತರಿಗೆ ವಿತರಣೆ ಮಾಡಲಾಗಿದ್ದು. ಇದೇ ಸಂದರ್ಭದಲ್ಲಿ ಮೂವರು ರೈತರಿಗೆ ಆರೋಗ್ಯ ವೆಚ್ಚ ಪರಿಹಾರದ ಚೆಕ್ ವಿತರಿಸಲಾಯಿತು.ಕಾರನಾಗನಹಟ್ಟಿ ಸೇರಿ ಹಲವು ಕಡೆಗಳಲ್ಲಿ ಸಂಭವಿಸಿದ ಬೆಂಕಿ ಅವಘಡಗಳಲ್ಲಿ ಹುಲ್ಲು ಬಣವೆ ಹಾನಿಗೊಳಗಾದ ರೈತರಿಗೆ ಸಹಾನುಭೂತಿಯಿಂದ ಪರಿಹಾರ ಚೆಕ್‌ಗಳನ್ನು ನೀಡಲಾಯಿತು. ರೈತರು ಕೃಷಿಯಲ್ಲಿ ಮುನ್ನಡೆಸಲು ಅವರಿಗೆ ಅಗತ್ಯ ನೆರವು ದೊರಕುವಂತೆ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನೆರವಾಗಿದೆ. ಜೋಳವನ್ನು ಶೇ. 50ರಷ್ಟು ರಿಯಾಯಿತಿಯಲ್ಲಿ ಒದಗಿಸುವ ತಾಲೂಕಿನ 12 ಬಿಎಂಸಿಗಳಿಗೆ ತಲಾ ಒಂದರಂತೆ ಹಸು ಲಿಪ್ಪಿಂಗ್ ಯಂತ್ರ, ಮ್ಯಾಟ್ ವ್ಯವಸ್ಥೆ ಮಾಡಲಾಗಿದ್ದು, ಈ ಮೂಲಕ ಹಾಲು ಉತ್ಪಾದಕರ ಅಭ್ಯೂದಯಕ್ಕೆ ಒಕ್ಕೂಟ ಬದ್ಧವಾಗಿದೆ. ಕಳೆದ ಜನವರಿಯಲ್ಲಿ ಪಾವಗಡದಲ್ಲಿ ಹಾಲು ಉತ್ಪಾದನೆ 33 ಸಾವಿರ ಲೀಟರ್ ಗಳಷ್ಟು ಇತ್ತು. ಇದೀಗ ಅದು 44 ಸಾವಿರ ಲೀಟರ್‌ಗೆ ಹೆಚ್ಚಳವಾಗಿದೆ. ತಾಲೂಕಿನಲ್ಲಿ 68 ಡೈರಿಗಳು ಈವರೆಗೆ ಸ್ಥಾಪಿತವಾಗಿದ್ದು, ಹೊಸ ಡೈರಿಗಳನ್ನು ಆರಂಭಿಸುವ ಪ್ರಕ್ರಿಯೆ ಸಾಗುತ್ತಿದೆ. ಈ ಹಿನ್ನೆಲೆ ಮುಖ್ಯಮಂತ್ರಿಗಳ ಗಮನ ಸೆಳೆದರೆ 15 ಸಾವಿರ ಲೀಟರ್ ಸಾಮರ್ಥ್ಯದ ಮೆಗಾ ಡೈರಿಯನ್ನು ನಿರ್ಮಿಸಲು ನೆರವು ದೊರಕಬಹುದು ಎಂದು ನಿರೀಕ್ಷೆಯಿದೆ. ರೈತ ಸಮಾಜಕ್ಕೆ ಬೆನ್ನೆಲುಬಾಗಿ ನಿಲ್ಲುವ ಈ ಯೋಜನೆಗಳು ಮುಂದಿನ ಐದು ವರ್ಷಗಳ ಕಾಲ ಸಹಕಾರ ಬೆಳೆಸಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ಉಸ್ತುವಾರಿ ಅಧಿಕಾರಿ ಮಮತ, ಮಾಜಿ ನಿರ್ದೇಶಕ ವೇಣುಗೋಪಾಲ್ ರೆಡ್ಡಿ, ಹಾಲು ಉತ್ಪಾದಕ ಸಂಘಗಳ ತನಿಖಾಧಿಕಾರಿಗಳಾದ ನಂದೀಶ್ , ದಯಾನಂದ್, ವರ್ಷಿಣಿ, ಸತೀಶ್ ಸೇರಿ ಹಲವರು ಉಪಸ್ಥಿತರಿದ್ದರು.