ಮೃತ ಹಾಲು ಉತ್ಪಾದಕರಿಗೆ ತಲಾ ₹೧೫ ಸಾವಿರ ಚೆಕ್‌ ವಿತರಣೆ

| Published : Oct 05 2024, 01:32 AM IST

ಸಾರಾಂಶ

ಗುಂಡ್ಲುಪೇಟೆ ಚಾಮುಲ್‌ ಕಚೇರಿಯಲ್ಲಿ ಮರಣ ಹೊಂದಿದ ಹಾಲು ಉತ್ಪಾದಕರ ಕುಟುಂಬಕ್ಕೆ ಚಾಮುಲ್‌ ನಿರ್ದೇಶಕರಾದ ಎಚ್.ಎಸ್.ನಂಜುಂಡಪ್ರಸಾದ್‌, ಎಂಪಿ ಸುನೀಲ್‌ ಚೆಕ್‌ ವಿತರಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ೨೦ ಮಂದಿ ಸಾವನ್ನಪ್ಪಿದ ಹಾಲು ಉತ್ಪಾದಕ ಸದಸ್ಯರ ವಾರಸುದಾರರಿಗೆ ತಲಾ ೧೫ ಸಾವಿರ ರುಪಾಯಿಯ ಚೆಕ್‌ಗಳನ್ನು ಚಾಮುಲ್‌ ನಿರ್ದೇಶಕರಾದ ಎಚ್.ಎಸ್. ನಂಜುಂಡಪ್ರಸಾದ್‌, ಎಂಪಿ ಸುನೀಲ್‌ ವಿತರಿಸಿದರು.

ಪಟ್ಟಣದ ಚಾಮುಲ್‌ ಉಪ ಕಚೇರಿಯಲ್ಲಿ ನಡೆದ ಸರಳ ಸಭೆಯಲ್ಲಿ ಚೆಕ್‌ ವಿತರಣೆ ಬಳಿಕ ಒಕ್ಕೂಟದ ವಾರ್ಷಿಕ ಉಡುಗೊರೆಗಳನ್ನು ಸಂಘದ ಸಿಇಒಗಳಿಗೂ ಎಚ್‌.ಎಸ್. ನಂಜುಂಡಪ್ರಸಾದ್‌, ಎಂ.ಪಿ.ಸುನೀಲ್‌ ಹಸ್ತಾಂತರಿಸಿದರು. ಬಳಿಕ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್ ಮಾತನಾಡಿ, ಮರಣ ಹೊಂದಿದ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರ ವಾರಸುದಾರರಿಗೆ ಒಕ್ಕೂಟ ಪರಿಹಾರ ನೀಡುತ್ತಿದ್ದು, ಪರಿಹಾರದ ಹಣವನ್ನು ಮೃತರ ಕುಟುಂಬಸ್ಥರು ಸದುಪಯೋಗ ಪಡಿಸಿಕೊಳ್ಳಿ ಎಂದರು.

೫೮ ವರ್ಷ ಒಳಪಟ್ಟ ಸಂಘದ ಸದಸ್ಯರಿಗೆ ಸಂಘಗಳಲ್ಲಿ ವಿಮೆ ಸೌಲಭ್ಯಗಳು ಲಭ್ಯವಿದೆ. ರಾಸುಗಳಿಗೆ ತುರ್ತು ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಇದೆ. ರೈತರು ಸದುಪಯೋಗ ಮಾಡಿಕೊಳ್ಳಿ ಎಂದರು. ಚಾಮುಲ್ ನಿರ್ದೇಶಕ ಎಂಪಿ ಸುನಿಲ್ ಮಾತನಾಡಿ, ಸಹಕಾರ ಸಂಸ್ಥೆಗಳು ಸದಸ್ಯರ ಸಂಸ್ಥೆಗಳಾಗಿವೆ. ಇಲ್ಲಿ ಸಿಗುವ ಸೌಲಭ್ಯಗಳು ಖಾಸಗಿ ಡೈರಿಗಳಲ್ಲಿ ಸಿಗುವುದಿಲ್ಲ. ಖಾಸಗಿ ಡೈರಿಗಳ ಆಮಿಷಕ್ಕೆ ಒಳಗಾಗದೆ ಸಹಕಾರ ಸಂಘಕ್ಕೆ ಹಾಲು ಸರಬರಾಜು ಮಾಡಿ ಎಂದರು. ಸಂಘದಲ್ಲಿ ರಾಸುಗಳಿಗೆ ಅವಶ್ಯವಿರುವ ಜಂತುಹುಳ ಮಾತ್ರೆಗಳನ್ನು ಸಂಘದಲ್ಲಿ ವಿತರಿಸುತ್ತಿದೆ. ರಾಸುಗಳಿಗೆ ತಪ್ಪದೇ ಆರು ತಿಂಗಳಿಗೊಮ್ಮೆ ನೀಡಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಚಾಮುಲ್‌ನ ಗುಂಡ್ಲುಪೇಟೆ ಸಹಾಯಕ ವ್ಯವಸ್ಥಾಪಕ ಜಿ.ಪ್ರಭು, ವಿಸ್ತರಣಾಧಿಕಾರಿಗಳಾದ ಎಚ್. ಪ್ರಕಾಶ್, ರಂಜಿತಾ, ಸಿದ್ದಲಿಂಗೇಶ್, ಮುದ್ದಪ್ಪ, ಉದಯ್, ಮಂಜೇಶ್ ಹಾಗೂ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಸಿಇಒಗಳು ಫಲಾನುಭವಿಗಳಿದ್ದರು.