ಸಾರಾಂಶ
ಚಿಂಚಾ ಪಾನಕ, ಸೊಗಡೆ ಬೇರಿನ ಪಾನಕ ಸೇರಿದಂತೆ ಆಯುಷ್ ಇಲಾಖೆಯಿಂದ ವಿವಿಧ ರೀತಿಯ ಆರೋಗ್ಯಕರವಾದ ಪಾನೀಯವನ್ನು ತಯಾರಿಸಲಾಗುತ್ತದೆ. ಏ.20ರಂದು ತಾಲೂಕುವಾರು ನಡೆಯುವ ಎ.ಪಿ.ಆರ್.ಓ. ತರಬೇತಿಯಲ್ಲಿ ಭಾಗವಹಿಸುವ ಸಿಬ್ಬಂದಿಗೆ ವಿತರಣೆ ಮಾಡಿ.
ಕನ್ನಡಪ್ರಭ ವಾರ್ತೆ ಮಂಡ್ಯ
ಸಾರ್ವತ್ರಿಕ ಲೋಕಸಭಾ ಚುನಾವಣೆಯ ಕೆಲಸಗಳಲ್ಲಿ ನಿರತರಾಗಿರುವ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ಬೇಸಿಗೆ ಸಮಯದಲ್ಲಿ ಅನುಕೂಲವಾಗುವಂತೆ ಆಯುಷ್ ಇಲಾಖೆಯಿಂದ ನೀಡಲಾದ ಚಿಂಚಾ ಪಾನಕ ವಿತರಣಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಶುಕ್ರವಾರ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ರಾಜ್ಯಾದ್ಯಂತ ಇತ್ತೀಚಿನ ದಿನಗಳಲ್ಲಿ ತಾಪಮಾನ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಬೇಸಿಗೆಯ ಸುಡು ಬಿಸಿಲಿನ ದಿನಗಳಲ್ಲಿ ಸಾರ್ವಜನಿಕರಿಗೆ ಹಾಗೂ ಸಿಬ್ಬಂದಿಗೆ ಆರೋಗ್ಯಕರ ಚಿಂಚಾ ಪಾನಕದ ಬಗ್ಗೆ ಜಾಗೃತಿ ಮೂಡಿಸಲು ಆಯುಷ್ ಇಲಾಖೆಯಿಂದ ಆಯುಷ್ ಪಾನೀಯ ಪರಿಚಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಹುಣಸೆಹಣ್ಣು, ಬೆಲ್ಲದ ಪುಡಿ, ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಸೈಂದವ ಲವಣಗಳಿಂದ ತಯಾರಿಸಿದ ಚಿಂಚಾ ಪಾನಕವು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಮಲಬದ್ಧತೆ ನಿವಾರಿಸುವುದು. ಶರೀರದ ದಾಹ ಹಾಗೂ ಬಾಯಾರಿಕೆಯನ್ನು ನೀಗಿಸುತ್ತದೆ ಎಂದರು.ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು ಮಾತನಾಡಿ, ಚಿಂಚಾ ಪಾನಕ, ಸೊಗಡೆ ಬೇರಿನ ಪಾನಕ ಸೇರಿದಂತೆ ಆಯುಷ್ ಇಲಾಖೆಯಿಂದ ವಿವಿಧ ರೀತಿಯ ಆರೋಗ್ಯಕರವಾದ ಪಾನೀಯವನ್ನು ತಯಾರಿಸಲಾಗುತ್ತದೆ. ಏ.20ರಂದು ತಾಲೂಕುವಾರು ನಡೆಯುವ ಎ.ಪಿ.ಆರ್.ಓ. ತರಬೇತಿಯಲ್ಲಿ ಭಾಗವಹಿಸುವ ಸಿಬ್ಬಂದಿಗೆ ವಿತರಣೆ ಮಾಡುವಂತೆ ತಿಳಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ.ಎಸ್.ಸೀತಾಲಕ್ಷ್ಮಿ ಮಾತನಾಡಿ, ಹುಣಸೆ ಹಣ್ಣನ್ನು ಅಗತ್ಯ ಪ್ರಮಾಣದ ನೀರಿನಲ್ಲಿ ಇಡೀ ರಾತ್ರಿ ನೆನೆಸಿಟ್ಟು ಮರುದಿನ ಬೆಳಗ್ಗೆ ಅದನ್ನು ಶುದ್ಧವಾದ ಕೈಗಳಿಂದ ಚೆನ್ನಾಗಿ ಹಿಸುಕಿ ಸೋಸಿಕೊಳ್ಳಬೇಕು (ಗಾಡವಾದ ಹುಣಸೆ ಮಿಶ್ರಣ ಬಾಟಲಿಗಳಲ್ಲಿ ತುಂಬಿಸಿಕೊಂಡು ಪಾನಕ ತಯಾರಿಸುವಾಗ ಬೇಕಾದಷ್ಟನ್ನು ಬಳಸಿ). ಅಗತ್ಯ ಪ್ರಮಾಣದಷ್ಟು ನೀರನ್ನು ಪಾತ್ರೆಗೆ ಹಾಕಿಕೊಳ್ಳಿ. ಅಗತ್ಯ ಪ್ರಮಾಣದಷ್ಟು ಹುಣಸೆ ಹಣ್ಣಿನ ಮಿಶ್ರಣವನ್ನು ನೀರಿನ ಪಾತ್ರೆಗೆ ಹಾಕಿದ ನಂತರ ಬೆಲ್ಲದ ಪುಡಿಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕರಗಿಸಿ ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಸೈಂದವ ಲವಣವನ್ನು ಸೇರಿಸಬೇಕು ಎಂದರು.ಚಿಂಚಾ ಪಾನಕವನ್ನು ತಯಾರಿಸುವಾಗ ಹುಣಸೆಹಣ್ಣು-100 ಗ್ರಾಂ, ಬೆಲ್ಲದ ಪುಡಿ - 400 ಮಿಲಿ, ಜೀರಿಗೆ ಪುಡಿ - 10 ಗ್ರಾಂ, ಕಾಳು ಮೆಣಸಿನಪುಡಿ - 5 ಗ್ರಾಂ, ಸೈಂದವ ಲವಣ - 5 ಗ್ರಾಂ ಹಾಕಬೇಕು. 50 ರಿಂದ 100 ಮಿಲಿ ಸೇವನೆ ಮಾಡುವುದು ಉತ್ತಮ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಶೇಕ್ ತನ್ವೀರ್ ಆಸಿಫ್, ಜಿಲ್ಲಾ ಆಯುಷ್ ಇಲಾಖೆಯ ಡಾ.ಮಧುಮಾಲತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.)
;Resize=(128,128))
;Resize=(128,128))