ಹಳೆಬೀಡಿನಲ್ಲಿ ಮೃತ ಮಕ್ಕಳ ಕುಟುಂಬಕ್ಕೆ ಪರಿಹಾರದ ಚೆಕ್‌ ವಿತರಣೆ

| Published : Jun 25 2024, 12:30 AM IST

ಸಾರಾಂಶ

ಹಳೆಬೀಡು ಸಮೀಪದ ನರಸೀಪುರ ಗ್ರಾಮದಲ್ಲಿ ಮೇ ೩೧ ರ ಶುಕ್ರವಾರ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಜಯಣ್ಣ ಎಂಬುವವರ ಮಕ್ಕಳಾದ ನಿತ್ಯಶ್ರೀ, ದೀಕ್ಷಾನ್, ಹಾಗೂ ಮಠದ ಹೊಸಳ್ಳಿ ಗ್ರಾಮದ ಹಾಲಪ್ಪ ಎಂಬುವವರ ಮಗಳಾದ ಕುಸುಮ ಕುಟುಂಬದವರಿಗೆ ರಾಜ್ಯ ಸರ್ಕಾರದ ಗೃಹ ಸಚಿವ ಜಿ ಪರಮೇಶ್ವರ್‌ ಪರಿಹಾರದ ಚೆಕ್‌ ನೀಡಿದರು.

ಮೇ 31 ರಂದು ಸರಸೀಪುರದಲ್ಲಿ ನೀರು ಪಾಲಾಗಿದ್ದ ಮಕ್ಕಳು । ಸಾವಿನ ಶಂಕೆ ವ್ಯಕ್ತಪಡಿಸಿದ ಪೋಷಕರು । ತಲಾ ₹2 ಲಕ್ಷ ಪರಿಹಾರ

ಕನ್ನಡಪ್ರಭ ವಾರ್ತೆ ಹಳೆಬೀಡು

ಸಮೀಪದ ನರಸೀಪುರ ಗ್ರಾಮದಲ್ಲಿ ಮೇ ೩೧ ರ ಶುಕ್ರವಾರ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಜಯಣ್ಣ ಎಂಬುವವರ ಮಕ್ಕಳಾದ ನಿತ್ಯಶ್ರೀ, ದೀಕ್ಷಾನ್, ಹಾಗೂ ಮಠದ ಹೊಸಳ್ಳಿ ಗ್ರಾಮದ ಹಾಲಪ್ಪ ಎಂಬುವವರ ಮಗಳಾದ ಕುಸುಮ ಕುಟುಂಬದವರಿಗೆ ರಾಜ್ಯ ಸರ್ಕಾರದ ಗೃಹ ಸಚಿವ ಜಿ ಪರಮೇಶ್ವರ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಬೇಲೂರು ಶಾಸಕ ಸುರೇಶ್, ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮೃತ ಕುಟುಂಬಕ್ಕೆ ತಲಾ ೨ ಲಕ್ಷ ರು.ನಂತೆ ೩ ಮಕ್ಕಳಿಗೆ ಒಟ್ಟು ಆರು ಲಕ್ಷ ರು. ಪರಿಹಾರ ಚೆಕ್ ವಿತರಣೆ ಮಾಡಿದರು.

ಮೇ ೩೧ ಶುಕ್ರವಾರ ಈಜಲು ಹೋಗಿದ್ದ ೩ ಮಕ್ಕಳು ಜಲಸಮಾಧಿಯಾಗಿದ್ದು ಪೋಷಕರಿಗೆ ಅನುಮಾನ ಮೂಡಿದೆ. ಇದರ ಸಂಬಂದಪಟ್ಟಂತೆ ಮೃತಪಟ್ಟ ಮಕ್ಕಳ ತಂದೆ-ತಾಯಿ ಹಾಸನ ಜಿಲ್ಲಾ ಪೋಲಿಸ್ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ಅನುಮಾನಾಸ್ಪದವಾಗಿದೆ ಎಂದು ದೂರನ್ನು ಸಲ್ಲಿಸಿದ್ದಾರೆ.

ಗೃಹ ಸಚಿವ ಜಿ ಪರಮೇಶ್ವರ ಮಾಧ್ಯಮದೊಂದಿಗೆ ಮಾತನಾಡಿ, ‘ಈ ಘಟನೆ ಸಂಭವಿಸಿರುವುದು ತುಂಬ ದುರದೃಷ್ಟಕರ. ಘಟನೆ ಬಗ್ಗೆ ನನಗೆ ಬಾರೀ ಬೇಸರವಾಗಿದೆ. ಪೋಷಕರು ಮಕ್ಕಳ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಪೋಲಿಸ್ ಇಲಾಖೆಗೆ ಆದೇಶ ನೀಡಿದ್ದೇನೆ. ಇಲಾಖೆಗೆ ಎಫ್‌ಎಸ್‌ಎಲ್‌ ವರದಿ ಬಂದಿಲ್ಲ ಎಂದು ತಿಳಿದು ಬಂದಿದೆ. ತಕ್ಷಣವೇ ಇದರ ಸಂಬಂಧಪಟ್ಟಂತೆ ಸೂಕ್ತ ಕ್ರಮ ತೆಗೆದುಕೊಂಡು ಮುಂದಿನ ತನಿಖೆ ನೆಡೆಸಬೇಕು. ಇದರ ವಿಚಾರವಾಗಿ ಹಾಸನ ಜಿಲ್ಲಾ ಕಛೇರಿಯಲ್ಲಿ ಮಾಹಿತಿಯನ್ನು ಸಂಗ್ರಹಿಸಿ ತುರ್ತು ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಮೃತ ಮಕ್ಕಳ ಕುಟುಂಬಕ್ಕೆ ಧೈರ್ಯ ಹೇಳಿ ತನಿಖೆ ನಂತರ ಕಾನೂನು ಪ್ರಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಂಡು ಈ ಕುಟುಂಬಕ್ಕೆ ಜೀವ ಬೆದರಿಕೆಯ ಬಗ್ಗೆ ತಕ್ಷಣವೇ ರಕ್ಷಣೆ ನೀಡುತ್ತೇವೆ. ಇದರ ವಿಚಾರವಾಗಿ ಸರ್ಕಾರದ ಭದ್ದತೆ ಇರುತ್ತದೆ ಎಂದು ತಿಳಿಸಿದರು.

ಬೇಲೂರು ಶಾಸಕ ಸುರೇಶ್, ಜಿಲ್ಲಾಧಿಕಾರಿ ಸತ್ಯಭಾಮ, ಸಿಒ ಪೂರ್ಣಿಮಾ, ಎ.ಸಿ. ಶೃತಿ, ಮಾಜಿ ಸಚಿವ ಶಿವರಾಂ, ತಹಸೀಲ್ದಾರ್ ಮಮತ, ಕಾಂಗ್ರೆಸ್ ಮುಖಂಡರಾದ ವೈ.ಎನ್.ಕೃಷ್ಣೇಗೌಡ, ಗ್ರಾನೈಟ್ ರಾಜಶೇಖರ್, ಪೋಲಿಸ್ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು.

ನನ್ನ ಮಕ್ಕಳ ಸಾವಿಗೆ ನ್ಯಾಯ ಸಿಗಬೇಕು

‘ನನಗೆ ಹಣದ ಅವಶ್ಯಕತೆ ಇಲ್ಲ. ನನ್ನ ಮಕ್ಕಳ ಸಾವಿಗೆ ನ್ಯಾಯ ಬೇಕು. ನನ್ನ ಮಕ್ಕಳು ನೀರಿಗೆ ಬಿದ್ದು ಮುಳುಗಿರುವ ವಿಚಾರ ಸತ್ಯಕ್ಕೆ ದೂರವಾದ ವಿಚಾರ. ಈ ಗ್ರಾಮದ ಮಕ್ಕಳಿಗೆ ನನ್ನ ಮಕ್ಕಳಂತೆ ತೊಂದರೆಯಾಗಬಾರದು. ಇಲ್ಲಿ ಕೆಲವರ ಪಿತೂರಿಯಿಂದ ನನ್ನ ಮಕ್ಕಳು ಮೃತಪಟ್ಟಿದ್ದಾರೆ. ನೈಜವಾಗಿ ನನ್ನ ಮಗಳು ನಿತ್ಯಾ ಸ್ನಾನ ಮಾಡುವಾಗ ಬಟ್ಟೆಯನ್ನು ಹಾಕಿಕೊಂಡು ಸ್ನಾನ ಮಾಡುತ್ತಾಳೆ. ಆದರೆ ಮೃತಪಟ್ಟ ಸಂದರ್ಭದಲ್ಲಿ ಬಟ್ಟೆ ಇಲ್ಲದೆ ಇರುವುದು ನನಗೆ ಅನುಮಾನ ತಂದಿದೆ’ ಎಂದು ಮೃತ ಮಕ್ಕಳ ತಂದೆಯಾದ ಜಯಣ್ಣ ಹೇಳಿದ್ದಾರೆ.