ಸಾರಾಂಶ
ಹಳೇಬೀಡು: ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗಾಗಿ ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ ವಾರದ ಎಲ್ಲಾ ದಿನಗಳಲ್ಲಿ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ ಎಂದು ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎಸ್ ಸೋಮಶೇಖರ್ ತಿಳಿಸಿದರು.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ವಾರದಲ್ಲಿ ಪ್ರತಿದಿನ ಬೇಯಿಸಿದ ಮೊಟ್ಟೆ ಪೂರೈಸಲು ಶಾಲಾ ಶಿಕ್ಷಣ ಇಲಾಖೆಯೊಂದಿಗೆ ‘ಅಜೀಂ ಪ್ರೇಮ್‌ಜೀ ಫೌಂಡೇಷನ್’ ಕೈಜೋಡಿಸಿದೆ. ಅವರಿಗೆ ಶಾಲೆಯ ಪರವಾಗಿ ಕೃತಜ್ಞತೆಗಳು ಎಂದರು.ಪ್ರೌಢಶಾಲೆ ವಿಭಾಗದ ಉಪಪ್ರಾಂಶುಪಾಲ ಮುಳ್ಳಯ್ಯ ಮಾತನಾಡುತ್ತ, ನಮ್ಮ ಶಾಲೆಯಲ್ಲಿ ೩೧೮ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಜಾ ದಿನಗಳನ್ನು ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲೂ ಮೊಟ್ಟೆ ವಿತರಿಸಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಅದರಲ್ಲಿ ೪ ದಿನಗಳು ವಿಪ್ರೊ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಸಂಸ್ಥೆಯಿಂದ ಇನ್ನು ೨ ದಿನಗಳಿಗೆ ಸರ್ಕಾರದಿಂದ ವಿತರಣೆ ಮಾಡಲಾಗುತ್ತಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಕಡ್ಲೆ ಮಿಠಾಯಿ, ಬಾಳೆಹಣ್ಣು ನೀಡಲಾಗುತ್ತದೆ. ಒಂದು ಮೊಟ್ಟೆಗೆ ೬ ರು. ನಿಗದಿ ಮಾಡಲಾಗಿದೆ. ಈ ಹಣವನ್ನು ಶಾಲಾ ಶಿಕ್ಷಣ ಇಲಾಖೆ ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಜಂಟಿ ಖಾತೆಗೆ ಹಾಕುತ್ತದೆ. ಅದರಲ್ಲಿ ಮೊಟ್ಟೆ ಬೇಯಿಸಲು ಇಂಧನ ವೆಚ್ಚ ೩೦ ಪೈಸೆ, ಮೊಟ್ಟೆಯ ಸಿಪ್ಪೆ ಸುಲಿದು ಕೊಡುವ ಬಿಸಿಯೂಟ ತಯಾರಕರು ಮತ್ತು ಸಹಾಯಕರಿಗೆ ೩೦ ಪೈಸೆ, ಸಾಗಣೆ ವೆಚ್ಚ ೨೦ ಪೈಸೆ ನೀಡಲಾಗುತ್ತಿದೆ. ಮೊಟ್ಟೆಗೆ ತಗುಲುವ ಒಟ್ಟು ವೆಚ್ಚದಲ್ಲಿ ಇನ್ನು ಮುಂದೆ ಮೂರನೇ ಎರಡು ಭಾಗವನ್ನು ಅಜೀಂ ಪ್ರೇಮ್‌ಜಿ ಫೌಂಡೇಷನ್ ಭರಿಸಲಿದೆ ಎಂದು ತಿಳಿಸಿದರು.
ಪ್ರಾಥಮಿಕ ಶಾಲೆಯ ವಿಭಾಗದ ಮುಖ್ಯ ಶಿಕ್ಷಕ ನಾಗರಾಜ್ ಮಾತನಾಡುತ್ತ, ನಮ್ಮ ಶಾಲೆಯಲ್ಲಿ ಒಟ್ಟು ೫೦೮ ವಿದ್ಯಾರ್ಥಿಗಳು ಹೊಂದಿದ್ದು, ಅದರಲ್ಲಿ ೧ರಿಂದ೭ನೇ ತರಗತಿವರೆಗೆ ೪೪೮ ಮಕ್ಕಳು, ಎಲ್.ಕೆ.ಜಿ.ಮತ್ತು ಯು.ಕೆ.ಜಿ.೬೦ ಇದ್ದು ಅದರಲ್ಲಿ ಮೊಟ್ಟೆ ನಿರಾಕರಿಸಿದ ಮಕ್ಕಳಿಗೆ ಶೇಂಗಾ ಚಿಕ್ಕಿ, ಬಾಳೆಹಣ್ಣು ನೀಡಲಾಗಿತ್ತು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಮಿತಿ ಖಜಾಂಚಿ ಹುಲಿಕೆರೆ ಅಶೋಕ್, ನಿವೃತ್ತ ಶಿಕ್ಷಕ ಬಸವರಾಜ್ ಮತ್ತು ಎಲ್ಲಾ ಶಿಕ್ಷಕರು ಹಾಜರಿದ್ದರು.