ಶಾಸಕರ ಗಮನಕ್ಕೆ ತರದೇ ಸಲಕರಣೆ ವಿತರಣೆ, ಆರೋಪ

| Published : Mar 13 2024, 02:06 AM IST

ಸಾರಾಂಶ

ತಾಲೂಕಿನ ರೈತರು ಕಳೆದ ಬಾರಿ ಮುಂಗಾರು ಮತ್ತು ಹಿಂಗಾರು ಮಳೆಯಾಗದೇ ಯಾವುದೇ ಫಸಲು ಬರದೇ ತತ್ತರಿಸಿ ಹೋಗಿದ್ದಾರೆ. ಸರ್ಕಾರದ ಮಹತ್ವದ ಯೋಜನೆಗಳನ್ನು ಸರಿಯಾದ ಸಮಯಕ್ಕೆ ರೈತರಿಗೆ ತಲುಪಿಸದೇ ಮೋಸ ಮಾಡುತ್ತಿದ್ದೀರಿ. ಶಾಸಕರನ್ನೇ ಗಣನೆಗೆ ತೆಗೆದುಕೊಳ್ಳದ ನಿಮ್ಮಂತ ಅಧಿಕಾರಿಗಳಿಂದ ರೈತರು ಹೇಗೆ ಬದುಕಲು ಸಾಧ್ಯ

ಶಿರಹಟ್ಟಿ: ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ನಿಯಮಿತದ ಕೊಳವೆ ಬಾವಿ ಕೊರೆಸಿದ ೫ ಜನ ರೈತ ಫಲಾನುಭವಿಗಳಿಗೆ ಕದ್ದು-ಮುಚ್ಚಿ ಪಂಪ್‌ಸೆಟ್ ಹಾಗೂ ಇನ್ನಿತರ ಸಲಕರಣೆ ವಿತರಣೆ ಮಾಡುತ್ತಿದ್ದ ಸ್ಥಳಕ್ಕೆ ಶಾಸಕ ಡಾ. ಚಂದ್ರು ಲಮಾಣಿ ಆಗಮಿಸಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಮಂಗಳವಾರ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ (ಮ್ಯಾನೇಜರ್) ಆರ್.ಎಚ್.ನಾಯ್ಕರ ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅವರು, ನಾನು ಈ ಕ್ಷೇತ್ರದ ಶಾಸಕ ನನ್ನ ಗಮನಕ್ಕೆ ತರದೇ ಕದ್ದು- ಮುಚ್ಚಿ ಪಟ್ಟಣದ ಹೊರ ವಲಯದ ಹೈಸ್ಕೂಲ್‌ ಮೈದಾನಕ್ಕೆ ರೈತ ಫಲಾನುಭವಿಗಳನ್ನು ಕರೆಸಿ ಸಲಕರಣೆ ವಿತರಣೆ ಮಾಡುತ್ತಿದ್ದು, ಇದರಲ್ಲಿ ಮೋಸ ಅಡಗಿದೆ ಎಂದು ದೂರಿದರು.

ಕಳೆದ ೨೦೧೮-೧೯ನೇ ಸಾಲಿನಲ್ಲಿ ಗಂಗಾಕಲ್ಯಾಣ ಯೋಜನೆಯಡಿ ಆಯ್ಕೆಯಾದ ರೈತ ಫಲಾನುಭವಿಗಳಿಗೆ ಪಂಪ್‌ಸೆಟ್ ಹಾಗೂ ಇನ್ನಿತರ ಸಲಕರಣೆ ವಿತರಣೆಗೆ ೫ ವರ್ಷ ವಿಳಂಬ ಮಾಡಿದ್ದಾದರೂ ಏಕೆ? ನಿಮಗೆ ಹೇಳುವವರು ಕೇಳುವವರು ಯಾರೂ ಇಲ್ಲವೇ? ಕಳಪೆ ಗುಣಮಟ್ಟದ ಸಲಕರಣೆ ವಿತರಣೆ ಮಾಡುತ್ತಿದ್ದು, ಇದರಲ್ಲಿ ಗೋಲ್‌ಮಾಲ್ ನಡೆದಿದೆ ಎಂದು ಆರೋಪಿಸಿದರು.

ತಾಲೂಕಿನ ರೈತರು ಕಳೆದ ಬಾರಿ ಮುಂಗಾರು ಮತ್ತು ಹಿಂಗಾರು ಮಳೆಯಾಗದೇ ಯಾವುದೇ ಫಸಲು ಬರದೇ ತತ್ತರಿಸಿ ಹೋಗಿದ್ದಾರೆ. ಸರ್ಕಾರದ ಮಹತ್ವದ ಯೋಜನೆಗಳನ್ನು ಸರಿಯಾದ ಸಮಯಕ್ಕೆ ರೈತರಿಗೆ ತಲುಪಿಸದೇ ಮೋಸ ಮಾಡುತ್ತಿದ್ದೀರಿ. ಶಾಸಕರನ್ನೇ ಗಣನೆಗೆ ತೆಗೆದುಕೊಳ್ಳದ ನಿಮ್ಮಂತ ಅಧಿಕಾರಿಗಳಿಂದ ರೈತರು ಹೇಗೆ ಬದುಕಲು ಸಾಧ್ಯ ಎಂದು ದೂರಿದರು.

ನಂತರ ಅಧಿಕಾರಿ ಆರ್.ಎಚ್. ನಾಯ್ಕರ್ ಕ್ಷಮೆಯಾಚಿಸಿದರು. ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆಯಿಂದ ನಿಗಮದ ಮೇಲಧಿಕಾರಿಗಳ ಸೂಚನೆಯಂತೆ ರೈತ ಫಲಾನುಭವಿಗಳಿಗೆ ಸಲಕರಣೆ ವಿತರಣೆಗೆ ಮುಂದಾಗಿದ್ದು, ಇನ್ನು ಮುಂದೆ ನಿಮ್ಮ ಗಮನಕ್ಕೆ ತರದೇ ಈ ತರಹದ ಕೆಲಸ ಮಾಡುವುದಿಲ್ಲ ಎಂದು ಮನವಿ ಮಾಡಿದರು.

ಕೊನೆಗೆ ರೈತರಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಶಾಸಕರು ಸಲಕರಣೆ ವಿತರಣೆ ಮಾಡಿ ಅಧಿಕಾರಿಗಳ ವರ್ತನೆಗೆ ಛೀಮಾರಿ ಹಾಕಿ ನಿಮ್ಮ ವಿರುದ್ಧ ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು. ಮುಖಂಡ ಜಾನು ಲಮಾಣಿ ಹಾಗೂ ರೈತ ಫಲಾನುಭವಿಗಳು ಇದ್ದರು.