ಸಾರಾಂಶ
ಪಿರಿಯಾಪಟ್ಟಣ : ರಾಜ್ಯಾದ್ಯಂತ ಇರುವ ಕುರಿಗಾಹಿಗಳನ್ನು ಗುರುತಿಸಿ, ಅವರಿಗೆ ಐಡಿ ಕಾರ್ಡ್ ನೀಡುವ ಮೂಲಕ ಕುರಿಗಾಹಿಗಳಿಗೆ ಸೂಕ್ತ ಸವಲತ್ತುಗಳನ್ನು ಪಡೆಯಲು ಅನುಕೂಲ ಮಾಡಿಕೊಡುವ ಐಡಿ ಕಾರ್ಡ್ ವಿತರಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶನಿವಾರ ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ಚಾಲನೆ ನೀಡಿದರು. ಈ ವೇಳೆ, ಉತ್ತರ ಕರ್ನಾಟಕದಿಂದ ಬಂದ ಅನೇಕ ಕುರಿಗಾಹಿಗಳು ಕಂಬಳಿ ತೊಟ್ಟು ಸಿದ್ದರಾಮಯ್ಯ ಅವರಿಂದ ಗುರುತಿನ ಚೀಟಿ ಪಡೆದುಕೊಂಡರು.
ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು, ₹439.88 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು. ಈ ವೇಳೆ ಮಾತನಾಡಿ, ರಾಜ್ಯದಲ್ಲಿ ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ನೀಡಿ ಕೃಷಿ ಉತ್ಪನ್ನವನ್ನು ಹೆಚ್ಚಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ, ಇದು ನಿಜವಾದ ರೈತಪರ ಸರ್ಕಾರ ಎಂದರು. ರಾಜ್ಯ ಸರ್ಕಾರ ಇಂದು 380 ರೈತರಿಗೆ 3 ಕೋಟಿಗೂ ಅಧಿಕ ಸಹಾಯಧನದಲ್ಲಿ ಕೃಷಿ ಪರಿಕರಗಳನ್ನು ವಿತರಿಸಿದೆ. ಈ ಬಾರಿ ಹವಾಮಾನ ಇಲಾಖೆ ಉತ್ತಮ ಮುಂಗಾರು ಮಳೆಯಾಗಲಿದೆ ಎಂಬ ವರದಿ ನೀಡಿವೆ. ರೈತರಿಗೆ ಇದು ಅನುಕೂಲವಾಗಲಿದೆ ಎಂದರು.
ಗ್ಯಾರಂಟಿ ನಿಲ್ಲೋಲ್ಲ :
ಮುಂದಿನ ತಿಂಗಳಿಗೆ ನಾವು ಅಧಿಕಾರಕ್ಕೆ ಬಂದು ಎರಡು ವರ್ಷಗಳು ತುಂಬುತ್ತವೆ. ನಾವು ನೀಡಿದ ಗ್ಯಾರಂಟಿ ಭರವಸೆಗಳನ್ನು ಎಲ್ಲವನ್ನು ಈಡೇರಿಸಿ, ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತಿದ್ದೇವೆ. ಇದನ್ನು ಸಹಿಸದ ಬಿಜೆಪಿ ಮತ್ತು ಜೆಡಿಎಸ್ ನವರು ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಗ್ಯಾರಂಟಿ ಬಹಳ ದಿನ ಇರಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ, ನಾವು ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ದಿ ಯೋಜನೆಗಳನ್ನೂ ಮಾಡುತ್ತಾ ಇದ್ದೇವೆ ಎಂದು ತಿಳಿಸಿದರು.
ಈ ಹಿಂದೆ ನೀಡುತ್ತಿದ್ದ 5 ಕೆ.ಜಿ ಅಕ್ಕಿ ಜೊತೆಗೆ 5 ಕೆಜಿ ಸೇರಿ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. 200 ಯುನಿಟ್ ಗಳವರೆಗೆ ಉಚಿತವಾಗಿ ವಿದ್ಯುತ್ ನ್ನು ನೀಡಲಾಗುತ್ತಿದೆ. 1.22 ಕೋಟಿ ಕುಟುಂಬಗಳ ಮನೆ ಯಜಮಾನಿಯರಿಗೆ ಎರಡು ಸಾವಿರ ರು.ಗಳನ್ನು ನೀಡಲಾಗುತ್ತಿದೆ. ಯುವ ನಿಧಿ ಯೋಜನೆಯಡಿ ಪದವಿ ಹೊಂದಿದ ನಿರುದ್ಯೋಗಿಗಳಿಗೆ 3 ಸಾವಿರ ಹಾಗೂ ಡಿಪ್ಲೊಮಾ ಪಡೆದವರಿಗೆ 1,500 ರು. ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ 50,018 ಕೋಟಿಗಳನ್ನು ಮೀಸಲು ಇಡಲಾಗಿದೆ. ಆಸ್ತಿ ಸೃಜನೆ ಯೋಜನೆಗಳಿಗೆ 83 ಸಾವಿರ ಕೋಟಿಗಳನ್ನು ಮೀಸಲು ಇಡಲಾಗಿದೆ ಎಂದು ಮಾಹಿತಿ ನೀಡಿದರು.