ಹಾನಗಲ್ಲದ ನವೋದಯ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ವಸ್ತುಗಳನ್ನು ದಾನ ನೀಡುವ ಮೂಲಕ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಜನ್ಮ ದಿನವನ್ನು ಆಚರಿಸಲಾಯಿತು.

ಹಾನಗಲ್ಲ: ನವೋದಯ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ವಸ್ತುಗಳನ್ನು ದಾನ ನೀಡುವ ಮೂಲಕ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಜನ್ಮ ದಿನವನ್ನು ಆಚರಿಸಲಾಯಿತು.

ಹಾನಗಲ್ಲಿನ ನವೋದಯ ಅಂಗವಿಕಲರ ಕಲ್ಯಾಣ ಸಂಸ್ಥೆಯ ನವೋದಯ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ನೌಕರರು ತಮ್ಮ ವಂತಿಗೆ ಹಣದಲ್ಲಿ ತಟ್ಟೆ ಲೋಟಗಳು ಹಾಗೂ ಹಣ್ಣು ಹಂಪಲಗಳನ್ನು ಮಕ್ಕಳಿಗೆ ವಿತರಿಸಿದರು.

ಈ ವೇಳೆ ಮಾತನಾಡಿದ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ರಘುರಾಮ, ನಮ್ಮ ಸಂಘದ ಕಾರ್ಯಕರ್ತರು ಡಾ. ವೀರೇಂದ್ರ ಹೆಗ್ಗಡೆ ಅವರ ಶ್ರೇಯಸ್ಸಿಗೆ ತಕ್ಕುದಾಗಿ ಅವರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಸೇವೆಯಲ್ಲಿದ್ದಾರೆ. ಅವರ ಆರೋಗ್ಯ, ಆಯಷ್ಯ ವೃದ್ಧಿಸಲಿ, ಸಮಾಜಕ್ಕೆ ಅವರ ಕೊಡುಗೆ ಇನ್ನೂ ಬಹುಕಾಲ ಇರಲಿ ಎಂದು ಭಗವಂತನಲ್ಲಿ ಬೇಡಿಕೊಂಡು ದಾನ ಕಾರ್ಯಕ್ಕೆ ಮುಂದಾಗಿದ್ದಾರೆ. ವೀರೇಂದ್ರ ಹೆಗ್ಗಡಯವರು ಎಲ್ಲರನ್ನೂ ಸ್ವಾವಲಂಬಿಯಾಗಲು ಪ್ರೇರಣೆಯಾಗಿದ್ದಾರೆ. ಸೇವಾ ಕಾರ್ಯದ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಪರಶುರಾಮ ಖಂಡೂನವರ ಮಾತನಾಡಿ, ಸೇವೆಯೇ ಮನುಷ್ಯನ ಧರ್ಮವಾಗಬೇಕು. ದುರ್ಬಲರಿಗೆ ಸೇವೆ ಸಲ್ಲಿಸುವುದೇ ನಿಜವಾದ ಸೇವೆ. ಅಂಗವಿಕಲರು ಬುದ್ಧಿ ಮಾಂದ್ಯರ ಸೇವೆ ಮಾಡಿದರೆ ಭಗವಂತ ಮೆಚ್ಚುತ್ತಾನೆ. ಸಮಾಜದಲ್ಲಿ ಒಳ್ಳೆಯದಕ್ಕಾಗಿ ಕಾಲ ನಿಡಬೇಕೇ ಹೊರತು ಸಮಾಜಕ್ಕೆ ತೊಂದರೆಯಾಗುವ ಕೆಲಸಗಳಿಗೆ ಸಹಕಾರಿಯಾಗುವುದು ಬೇಡ. ಒಳ್ಳೆಯ ಕೆಲಸ ಮಾಡಲು ಸಾಕಷ್ಟು ಅವಕಾಶಗಳಿವೆ. ಅಂತಹ ಸೇವೆ ಮೂಲಕ ಭಗವಂತನೆ ಕೃಪೆಗೆ ಪಾತ್ರರಾಗೋಣ ಎಂದರು.

ಹಾವೇರಿ ನವೋದಯ ಅಂಗವಿಕಲರ ಕಲ್ಯಾಣ ಸಂಸ್ಥೆ ಅಧ್ಯಕ್ಷ ದೀಪಕ ಹಿರೇಮಠ, ಕಾರ್ಯದರ್ಶಿ ಮಂಜುನಾಥಸ್ವಾಮಿ ಹಿರೇಮಠ, ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾನಗಲ್ಲ ವಲಯದ ಮೇಲ್ವಿಚಾರಕಿ ನೇತ್ರಾವತಿ ಮಂಡಿಗನಾಳ, ಕಲ್ಮೇಶ, ಸುಮಂಗಲಾ ಹಿರೇಮಠ, ನಾಗೇಂದ್ರ ಚಕ್ರಸಾಲಿ, ಪೂಜಾ ಮರಿಗೌಡ್ರ, ಕಾವ್ಯಾ ಅರಳೇಶ್ವರ, ಮಲ್ಲನಗೌಡ ಮರಿಗೌಡ್ರ, ಚಂದನ ಕಂಬಳಿ, ಲಕ್ಷ್ಮೀ ಜಾಧವ ಪಾಲ್ಗೊಂಡಿದ್ದರು.