ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿಯಲ್ಲಿ ಇಲ್ಲಿನ ತೋಟಗಾರಿಕೆ ಕಚೇರಿಯಲ್ಲಿ ಬುಧವಾರ ಅಡಿಕೆ ಎಲೆಚುಕ್ಕೆ ರೋಗ ಹಾಗೂ ಕಾಳುಮೆಣಸು ಸೊರಗು ರೋಗಕ್ಕೆ ಅರ್ಕಾ ಮೈಕ್ರೋಬಿಯಲ್ ಕನ್ಸೋರ್ಷಿಯಂ ಎಎಂಸಿ ಎಂಬ ಔಷಧವನ್ನು ಆಸಕ್ತ ರೈತರಿಗೆ ಉಚಿತವಾಗಿ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಕುಮಟಾ

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿಯಲ್ಲಿ ಇಲ್ಲಿನ ತೋಟಗಾರಿಕೆ ಕಚೇರಿಯಲ್ಲಿ ಬುಧವಾರ ಅಡಿಕೆ ಎಲೆಚುಕ್ಕೆ ರೋಗ ಹಾಗೂ ಕಾಳುಮೆಣಸು ಸೊರಗು ರೋಗಕ್ಕೆ ಅರ್ಕಾ ಮೈಕ್ರೋಬಿಯಲ್ ಕನ್ಸೋರ್ಷಿಯಂ ಎಎಂಸಿ ಎಂಬ ಔಷಧವನ್ನು ಆಸಕ್ತ ರೈತರಿಗೆ ಉಚಿತವಾಗಿ ವಿತರಿಸಲಾಯಿತು.

ಸಾಂಕೇತಿಕವಾಗಿ ರೈತರಿಗೆ ಔಷಧ ವಿತರಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ನಮ್ಮ ರೈತರ ಜೀವನಾಡಿಯಾದ ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗದಂತಹ ಸಮಸ್ಯೆಯಿಂದ ಅಡಕೆ ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಎಲೆಚುಕ್ಕೆ ರೋಗಕ್ಕೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿಯಲ್ಲಿ ತೋಟಗಾರಿಕೆ ಇಲಾಖೆಯಿಂದ ಉಚಿತವಾಗಿ ಪರಿಣಾಮಕಾರಿ ಔಷಧ ವಿತರಿಸುತ್ತಿದ್ದು ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು.

ಅಡಿಕೆ ಬೆಳೆಗಳಿಗೆ ಎಲೆ ಚುಕ್ಕೆ ರೋಗದ ಬಗ್ಗೆ ಸ್ಥಳೀಯ ಅಧಿಕಾರಿಗಳು ಕಾಳಜಿ ವಹಿಸಿ ರೈತರಿಗೆ ಉಚಿತವಾಗಿ ಎಲೆಚುಕ್ಕೆ ರೋಗದ ಮೈಕ್ರೋಬಯಿಲ್ ಕನ್ಸೋರ್ಷಿಯಂ ಔಷಧ ವಿತರಿಸುವುದಕ್ಕೆ ವ್ಯವಸ್ಥೆ ಮಾಡಿದ್ದಾರೆ. ಇದು ಒಳ್ಳೆಯ ಕಾರ್ಯಕ್ರಮವಾಗಿದ್ದು ಎಲೆಚುಕ್ಕೆ ರೋಗದಿಂದ ಅಡಕೆ ತೋಟಗಳ ಉಳಿವಿಗೆ ಮತು ರೈತರಿಗೆ ಇನ್ನೂ ಹೆಚ್ಚಿನ ಅದಾಯ ಲಭ್ಯವಾಗುವಂತೆ ಸರ್ಕಾರ ಹೆಚ್ಚಿನ ಸೌಕರ್ಯ ಒದಗಿಸಬೇಕು. ಇದಲ್ಲದೇ ಇತರ ಯೋಜನೆಗಳ ಲಾಭವೂ ಪ್ರತಿಯೊಂದು ರೈತರಿಗೆ ನೀಡುವ ಬಗ್ಗೆಯೂ ತೋಟಗಾರಿಕೆ ಇಲಾಖೆ ಮುತುವರ್ಜಿ ವಹಿಸಬೇಕು ಎಂದರು.

ತೋಟಗಾರಿಕೆ ಸಹಾಯಕ ನಿರ್ದೇಶಕ ಲಿಂಗರಾಜ ಇಟ್ನಾಳ, ೨೦೨೫-೨೬ ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಅಡಿಕೆ ಬೆಳೆಗೆ ಎಲೆ ಚುಕ್ಕೆ ಹಾಗೂ ಕಾಳು ಮೆಣಸು ಸೊರಗು ರೋಗದ ನಿಯಂತ್ರಣಕ್ಕಾಗಿ ದ್ರವರೂಪದ ಅರ್ಕಾ ಮೈಕ್ರೋಬಿಯಲ್ ಕನ್ಸೋರ್ಷಿಯಂ ಎಎಂಸಿ ಔಷಧವನ್ನು ತೋಟಗಾರಿಕೆ ಇಲಾಖೆಯ ಮೂಲಕ ನೀಡಲಾಗುತ್ತಿದೆ. ಭರ್ತಿ ಮಾಡಿದ ಅರ್ಜಿ ಹಾಗೂ ದಾಖಲೆ ನೀಡಿ ತಾಲೂಕಿನ ಔಷಧ ಅಗತ್ಯವುಳ್ಳ ರೈತರು ಔಷಧವನ್ನು ಉಚಿತವಾಗಿ ಪಡೆದುಕೊಳ್ಳಬಹುದು ಎಂದು ವಿನಂತಿಸಿದರು.

ಕೃಷಿಕ ಸಮಾಜದ ತಾಲೂಕಾಧ್ಯಕ್ಷ ನಾರಾಯಣ ಎಸ್. ಹೆಗಡೆ, ಆತ್ಮ ಯೋಜನೆ ತಾಲೂಕಾಧ್ಯಕ್ಷ ಪ್ರದೀಪಕುಮಾರ ಹೆಗಡೆ ಮತ್ತು ರೈತರಿದ್ದರು.