ಸಾರಾಂಶ
ಶ್ರೀರಾಂಪುರ ಉಪ ವಿಭಾಗದ ಬೆಲಗೂರಿನಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಹಣ ಕಟ್ಟಿದ ರೈತರಿಗೆ ವಿದ್ಯುತ್ ಪರಿವರ್ತಕಗಳನ್ನು ಶಾಸಕ ಬಿ.ಜಿ.ಗೋವಿಂದಪ್ಪ ವಿತರಣೆ ಮಾಡುವ ಮೂಲಕ ಅಕ್ರಮ ಸಕ್ರಮ ಯೋಜನೆಗೆ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಹೊಸದುರ್ಗ
ಅಕ್ರಮ ಸಕ್ರಮಕ್ಕೆ ಹಣ ಕಟ್ಟಿರುವವರು ಯಾರೂ ಭಯ ಪಡುವುದು ಬೇಡ. ಎಲ್ಲರಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.ತಾಲೂಕಿನ ಶ್ರೀರಾಂಪುರ ಹಾಗೂ ಹೊಸದುರ್ಗ ಉಪ ವಿಭಾಗಗಳಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಹಣ ಪಾವತಿಸಿದ ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ಉದ್ಘಾಟಿಸಿ ಮಾತನಾಡಿದರು.ಹಣ ಕಟ್ಟಿರುವ ಎಲ್ಲರಿಗೂ ತಾವು ಹಣ ಕಟ್ಟಿದ ಸೀನಿಯಾರಿಟಿ ಮೇರೆಗೆ ಕೆಲಸ ಮಾಡುತ್ತಾರೆ. ಯಾರದೇ ಶಿಫಾರಸ್ಸು ಪತ್ರ ತಂದರೂ ನಡೆಯುವುದಿಲ್ಲ . ಕೆಲಸ ಕ್ಕಾಗಿ ಯಾರೂ ಅಲೆದಾಡುವುದು ಬೇಡ. ರಾಜ್ಯದಲ್ಲಿ ಅಕ್ರಮ ಸಕ್ರಮ ಸಂಪರ್ಕಕ್ಕಾಗಿ ರಾಜ್ಯ ಸರ್ಕಾರ 6 ಸಾವಿರ ಕೋಟಿ ರು. ಬಿಡುಗಡೆ ಮಾಡಿದೆ. ಇದರಲ್ಲಿ ಭದ್ರಾ ಯೋಜನೆಯಲ್ಲಿ ಶುದ್ಧ ಕುಡಿಯುವ ನೀರಿನ ಸಂಪರ್ಕಕ್ಕಾಗಿ 126 ಪಂಪ್‌ಹೌಸ್ ನಿರ್ಮಿಸಲಾಗುತ್ತಿದ್ದು, ಅವುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು 25 ಮೆಗಾವ್ಯಾಟ್ ವಿದ್ಯುತ್ ಬೇಕಾಗಿದ್ದು, ತಾಲೂಕಿನ ಎಲ್ಲಾ ವಿತರಣಾ ಕೇಂದ್ರಗಳಿಗೆ ಹೆಚ್ಚುವರಿ ಟಿಸಿ ಅಳವಡಿಸಲಾಗಿದೆ ಎಂದರು. ಬೆಸ್ಕಾಂ ಎಇ ಜಯಣ್ಣ ಮಾತನಾಡಿ, ಹೊಸದುರ್ಗ ಉಪ ವಿಭಾಗದಲ್ಲಿ ಅಕ್ರಮ ಸಕ್ರಮದಲ್ಲಿ ಹಣಕಟ್ಟಿರುವಂತಹ 1030 ಐಪಿ ಸೆಟ್‌ಗಳಿದ್ದು, ಅವುಗಳಿಗೆ ಇಂದಿ ನಿಂದ ಸಂಪರ್ಕ ಕಲ್ಪಿಸಲಾಗುವುದು. ಈ ಯೋಜನೆಗೆ ಕರ್ದ ಸರ್ಕಾರದ ಅವಧಿಯಲ್ಲಿಯೇ ಅನುಮೋದನೆ ಆಗಿತ್ತು ಆದರೆ ಹಣ ಬಿಡುಗಡೆಯಾಗಿರಲಿಲ್ಲ. ಮಾನ್ಯ ಶಾಸಕರ ಇಚ್ಛಾಶಕ್ತಿಯಿಂದ ಹೊಸದುರ್ಗ ಉಪ ವಿಭಾಗಕ್ಕೆ 7 ಕೋಟಿ, ಶ್ರೀರಾಂಪುರ ಉಪ ವಿಭಾಗಕ್ಕೆ 3-60 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು, ತಾಲೂಕಿನ ಸುಮಾರು 1650 ರೈತರಿಗೆ ಅನುಕೂಲವಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಆಯಾ ಭಾಗದ ಬೆಸ್ಕಾಂ ಅಧಿಖಾರಿಗಳು, ಮುಖಂಡರುಗಳು ಹಾಗೂ ರೈತರು ಭಾಗವಹಿಸಿದ್ದರು.