ಸಚಿವರಿಂದ ಯುವಕರಿಗೆ ನೇಮಕಾತಿ ಆದೇಶ ವಿತರಣೆ

| Published : Jan 28 2025, 12:47 AM IST

ಸಾರಾಂಶ

ಭೂ ಮಂಜೂರಾತಿ ಪೋಡಿ ದುರಸ್ತಿ ದಾಖಲೆ ಮತ್ತು ಪಹಣಿ ವಿತರಣೆ, ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ದಿಬ್ಬೂರು ಗ್ರಾಮದಲ್ಲಿ ಅರ್ಹ ಫಲಾನುಭವಿಗಳಿಗೆ ಮನೆಗಳ ಹಕ್ಕು ಪತ್ರಗಳ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ.ಪರಮೇಶ್ವರ ಅವರು ಉದ್ಯೋಗ ಮೇಳದಲ್ಲಿ ಆಯ್ಕೆಯಾದ 150 ಕ್ಕೂ ಹೆಚ್ಚು ನಿರುದ್ಯೋಗಿ ಯುವಕರಿಗೆ ಸಾಂಕೇತಿಕವಾಗಿ ನೇಮಕಾತಿ ಆದೇಶ ವಿತರಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಎಂಪ್ರೆಸ್ ಬಾಲಕಿಯರ ಕಾಲೇಜಿನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಭೂ ಮಂಜೂರಾತಿ ಪೋಡಿ ದುರಸ್ತಿ ದಾಖಲೆ ಮತ್ತು ಪಹಣಿ ವಿತರಣೆ, ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ದಿಬ್ಬೂರು ಗ್ರಾಮದಲ್ಲಿ ಅರ್ಹ ಫಲಾನುಭವಿಗಳಿಗೆ ಮನೆಗಳ ಹಕ್ಕು ಪತ್ರಗಳ ವಿತರಿಸಿ ಮಾತನಾಡಿದರು.

ಕಳೆದ ಜನವರಿ 9 ರಂದು ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಿದ್ದ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಆಯ್ಕೆಯಾದ ಅಭ್ಯರ್ಥಿಗಳಿಗೆ ಸಾಂಕೇತಿಕವಾಗಿ ನೇಮಕಾತಿ ಆದೇಶ ವಿತರಣೆ ಮಾಡಿದರು

ಪ್ರತಿ ವರ್ಷ ಲಕ್ಷಾಂತರ ಯುವಕರು ಪದವಿ ಪೂರ್ಣಗೊಳಿಸುತ್ತಿದ್ದಾರೆ. ಅಂಥವರಿಗೆ ಉದ್ಯೋಗ ಸಿಗುತ್ತಿಲ್ಲ. ಬಿ.ಎ.ಪದವಿ ಮಾಡಿದವರಿಗೆ ತಾಂತ್ರಿಕ ಉದ್ಯೋಗ ದೊರೆಯುವುದಿಲ್ಲ. ಇದು ಜಾಗತಿಕವಾಗಿ ಅತಿದೊಡ್ಡ ಸಮಸ್ಯೆಯಾಗಿದೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲು ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ 5 ಸಾವಿರ ಯುವಕರು ಭಾಗವಹಿಸಿದ್ದರು. ಅದರಲ್ಲಿ 1700 ಯುವಕರಿಗೆ ಉದ್ಯೋಗ ದೊರೆತಿದೆ ಎಂದು ತಿಳಿಸಿದರು.

ತುಮಕೂರಿನ ವಸಂತನರಸಾಪುರದಲ್ಲಿ 20 ಸಾವಿರ ಎಕರೆ ವ್ಯಾಪ್ತಿಯ ಕೈಗಾರಿಕಾ ಪ್ರದೇಶ, ಬಾಂಬೆ-ಚೆನ್ನೈ ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣದಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯ ಯುವಕರಿಗೆ ಹೆಚ್ಚು ಉದ್ಯೋಗಗಳು ಸಿಗುತ್ತವೆ ಎಂದು ಹೇಳಿದರು.

ಭಾರತದ ಸಂವಿಧಾನ ಇಡೀ ವಿಶ್ವದಲ್ಲೇ ಅತ್ಯಂತ ಅರ್ಥಗರ್ಭಿತವಾಗಿದ್ದು, ದೇಶದ ಜನಸಮುದಾಯಕ್ಕೆ ನ್ಯಾಯ ಒದಗಿಸುವಂತಹ ಸಂವಿಧಾನವನ್ನು 1950 ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿದ್ದಾರೆ. ಸಂವಿಧಾನದಲ್ಲಿ ಪ್ರತಿಯೊಬ್ಬ ಭಾರತೀಯನಿಗೆ ನ್ಯಾಯ, ಸ್ವಾಭಿಮಾನದ ಬದುಕು ನೀಡಬೇಕು ಎಂಬುದನ್ನು ಉಲ್ಲೇಖಿಸಿ ಕಾನೂನು ರೂಪಿಸಲಾಗಿದ್ದು, 14 ವರ್ಷದೊಳಗಿನ ಎಲ್ಲ ಮಕ್ಕಳು ಶಿಕ್ಷಣ ಪಡೆಯಬೇಕು, ಹಸಿವಿನಿಂದ ಬಳಲಬಾರದು ಎಂದು ಆಹಾರ ಕಾಯ್ದೆಯನ್ನು ಜಾರಿ ಮಾಡಲಾಗಿದೆ ಎಂದರು.

ರೈತರಿಗೆ ಭೂ ದಾಖಲೆಯ ಪಹಣಿ, ಹಕ್ಕುಪತ್ರ ನೀಡಲು ರಾಜ್ಯ ಮಟ್ಟದಲ್ಲಿ ಬೃಹತ್ ಕಾರ್ಯಕ್ರಮ ಏರ್ಪಡಿಸಲು ಎಂಬುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಚಿಂತನೆ ನಡೆಸಿದ್ದು, ಕಾರ್ಯಕ್ರಮದಲ್ಲಿ ಜಿಲ್ಲೆಯ 1 ಸಾವಿರ ಜನರಿಗೆ ಭೂ ದಾಖಲೆಯ ಹಕ್ಕು ಪತ್ರಗಳನ್ನು ವಿತರಿಸಲು ಉದ್ದೇಶಿಸಲಾಗಿದೆ ಎಂದರು

ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಮಾತನಾಡಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಅಧಿಕಾರಿ/ಸಿಬ್ಬಂದಿಗಳ ತಂಡದ ಶ್ರಮದಿಂದ ಜಿಲ್ಲೆಯ ರೈತರಿಗೆ ಭೂ ಮಂಜೂರಾತಿ ಪೋಡಿ ದುರಸ್ತಿ ದಾಖಲೆ ಮತ್ತು ಪಹಣಿ ಪತ್ರಗಳ ವಿತರಣೆ, ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ದಿಬ್ಬೂರು ಗ್ರಾಮದಲ್ಲಿ ಅರ್ಹ ಫಲಾನುಭವಿಗಳಿಗೆ ಮನೆಗಳ ಹಕ್ಕು ಪತ್ರಗಳ ವಿತರಣೆ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಜಿಲ್ಲಾಡಳಿತದಿಂದ ಜಿಲ್ಲೆಯ ಜನತೆಗೆ ಉತ್ತಮ ಸೇವೆ ನೀಡಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶ್ ಬಾಬು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಮಹಾನಗರ ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ ಅವರು ಉಪಸ್ಥಿತರಿದ್ದರು.