ರಾಮನಗರ: 77ನೇ ಗಣರಾಜ್ಯೋತ್ಸವ ಅಂಗವಾಗಿ ಹಾಗೂ ಮಹಾತ್ಮ ಗಾಂಧೀಜಿರವರ ಉಪ್ಪಿನ ಸತ್ಯಾಗ್ರಹ ನೆನಪಿಗಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸಾರ್ವಜನಿಕರಿಗೆ ಉಪ್ಪನ್ನು ಹಂಚಿದರು
ರಾಮನಗರ: 77ನೇ ಗಣರಾಜ್ಯೋತ್ಸವ ಅಂಗವಾಗಿ ಹಾಗೂ ಮಹಾತ್ಮ ಗಾಂಧೀಜಿರವರ ಉಪ್ಪಿನ ಸತ್ಯಾಗ್ರಹ ನೆನಪಿಗಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸಾರ್ವಜನಿಕರಿಗೆ ಉಪ್ಪನ್ನು ಹಂಚಿದರು.
ನಗರದ ಐಜೂರು ವೃತ್ತದಲ್ಲಿ ಸಾರೋಟಿನಲ್ಲಿದ್ದ ಮಹಾತ್ಮ ಗಾಂಧೀಜಿರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ವಾಟಾಳ್ ನಾಗರಾಜ್ ಸಾರೋಟಿನಲ್ಲಿಯೇ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಉಪ್ಪಿನ ಪ್ಯಾಕೆಟ್ ಗಳನ್ನು ಹಂಚಿ ಉಪ್ಪಿನ ಸತ್ಯಾಗ್ರಹದ ಮಹತ್ವ ತಿಳಿಸಿದರು.ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ದೇಶದಲ್ಲಿ ಬಡವರು ಬಡವರಾಗುತ್ತಿದ್ದರೆ, ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ. ಯಾರೂ ಬಡವರ ಕಲ್ಯಾಣ ಮಾಡುತ್ತಿಲ್ಲ. ಒಂದು ಹೊತ್ತಿನ ಊಟವೂ ಇಲ್ಲದೆ ಹಸಿವಿನಿಂದ ಬಳಲುತ್ತಿದ್ದಾರೆ. ಇದು ಕರ್ನಾಟಕ ಮಾತ್ರವಲ್ಲ ದೇಶಾದ್ಯಂತ ಇಂತಹದೇ ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಚುನಾವಣೆ ಅಂದರೆ ಭ್ರಷ್ಟಾಚಾರ. ಚುನಾವಣಾ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕಾಗಿದ್ದು, ಇದಕ್ಕಾಗಿ ಚುನಾವಣಾ ಕಾಯ್ದೆ ಜಾರಿಯಾಗಲೇ ಬೇಕಿದೆ. ಆಗ ಕರ್ನಾಟಕದ ಬಿಜೆಪಿ -ಜೆಡಿಎಸ್ , ಕಾಂಗ್ರೆಸ್‌ನಲ್ಲಿ 10 ಮಂದಿ ಶಾಸಕರು ಮಾತ್ರ ಉಳಿಯಬಹುದು. ಉಳಿದವರೆಲ್ಲರು ಅಧಿಕಾರ ಕಳೆದುಕೊಳ್ಳುತ್ತಾರೆ. ಶಾಸಕ, ಸಚಿವ ಹಾಗೂ ಮುಖ್ಯಮಂತ್ರಿಯಾಗಲು ಹಣ ಬೇಕಾಗಿದೆ. ಇದು ಗಣತಂತ್ರ ವ್ಯವಸ್ಥೆಗೆ ಅಪಾಯಕಾರಿ ಎಂದು ಎಚ್ಚರಿಸಿದರು.ಈಗ ಒಂದು ವಿಧಾನಸಭಾ ಕ್ಷೇತ್ರಕ್ಕೆ 20ರಿಂದ 100 ಕೋಟಿ, ವಿಧಾನ ಪರಿಷತ್ ನ ಶಿಕ್ಷಕರ ಕ್ಷೇತ್ರ ಚುನಾವಣೆಗೆ 25 ಕೋಟಿ, ಪದವೀಧರ ಕ್ಷೇತ್ರ ಚುನಾವಣೆಗೆ 25 ಕೋಟಿ ಖರ್ಚು ಮಾಡಲಾಗುತ್ತಿದೆ. ಈ ಅಕ್ರಮಗಳಿಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿರುವ ಚುನಾವಣಾ ಆಯೋಗ ಮೂಲೆ ಗುಂಪಾಗಿದೆ. ಕೇಂದ್ರ ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಏಜೆಂಟ್ ಆಗಿದೆ. ಚುನಾವಣಾ ಕಾಯ್ದೆ ಜಾರಿಗೆ ತಂದು ಚುನಾವಣಾ ವ್ಯವಸ್ಥೆಯಲ್ಲಿ ಬದಲಾವಣೆ ಮಾಡದಿದ್ದರೆ ಚುನಾವಣೆ ವಿರುದ್ದವೇ ಜನರು ಬೀದಿಗಿಳಿಯುವ ಕಾಲ ದೂರ ಉಳಿದಿಲ್ಲ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.
ಹೈಕೋರ್ಟಿನಲ್ಲಿ ವಕೀಲರ ಶುಲ್ಕ ಬಡ್ಡಿಯಂತಿದ್ದರೆ, ಸುಪ್ರೀಂ ಕೋರ್ಟಿನಲ್ಲಿ ವಕೀಲರ ಶುಲ್ಕ ಮೀಟರ್ ಬಡ್ಡಿಯಂತೆ ಹೆಚ್ಚಾಗುತ್ತಿದೆ. ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ನ್ಯಾಯಾಂಗದ ಮೊರೆ ಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಟ್ಟಕಡೆಯ ವ್ಯಕ್ತಿಯೂ ನ್ಯಾಯಾಲಯಕ್ಕೆ ಹೋಗುವ ಶಕ್ತಿ ಬರುವಂತಾಗಬೇಕು. ಆಡಳಿತ ರಂಗದಲ್ಲಿ ಬದಲಾವಣೆ ಆಗಬೇಕಿದೆ ಎಂದರು.ಈ ಸಂದರ್ಭದಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್, ರಾಜ್ಯ ಉಸ್ತುವಾರಿ ಅಧ್ಯಕ್ಷ ವಿ.ಎನ್.ಗಂಗಾಧರ್, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಲಕ್ಷ್ಮಿ, ತಾಲೂಕು ಅಧ್ಯಕ್ಷೆ ಭಾಗ್ಯ ಸುಧಾ, ತಾಲೂಕು ಉಪಾಧ್ಯಕ್ಷ ವೆಂಕಟಲಕ್ಷ್ಮಿ, ದಲಿತ ಘಟಕ ಜಿಲ್ಲಾಧ್ಯಕ್ಷ ಕೆ.ಜಯರಾಮು, ತಾಲೂಕು ಉಪಾಧ್ಯಕ್ಷ ವಿಜಯ ಕುಮಾರ್, ಕಾರ್ಯಾಧ್ಕ್ಷ ಕುಮಾರ್, ಕಾರ್ಯದರ್ಶಿ ಶಿವಮೂರ್ತಿ, ಕೊತ್ತಿಪುರ ಪಿ.ಸುರೇಶ್, ಗೌರವಾಧ್ಯಕ್ಷ ಕೆಂಪರಾಜು, ಮುಖಂಡ ಮಹದೇವ್ ಇತರರಿದ್ದರು.
26ಕೆಆರ್ ಎಂಎನ್ 4.ಜೆಪಿಜಿರಾಮನಗರದಲ್ಲಿ 77ನೇ ಗಣರಾಜ್ಯೋತ್ಸವ ಅಂಗವಾಗಿ ಹಾಗೂ ಮಹಾತ್ಮ ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹದ ಸ್ಮರಣಾರ್ಥ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸಾರ್ವಜನಿಕರಿಗೆ ಉಪ್ಪು ಹಂಚಿದರು.