ಕೆಎಂಸಿಆರ್‌ಐಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಭಾನುವಾರ ಭೇಟಿ ನೀಡಿದರು. ಆಸ್ಪತ್ರೆಯ ಹಳೆಯ ಕಟ್ಟಡದ ಮಕ್ಕಳ ತೀವ್ರ ನಿಗಾ ಘಟಕ, ಪ್ರಸೂತಿ, ಸ್ತ್ರೀರೋಗ ಮತ್ತು ಮಕ್ಕಳ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹುಬ್ಬಳ್ಳಿ: ಇಲ್ಲಿನ ಕೆಎಂಸಿಆರ್‌ಐಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಭಾನುವಾರ ಭೇಟಿ ನೀಡಿದರು. ಆಸ್ಪತ್ರೆಯ ಹಳೆಯ ಕಟ್ಟಡದ ಮಕ್ಕಳ ತೀವ್ರ ನಿಗಾ ಘಟಕ, ಪ್ರಸೂತಿ, ಸ್ತ್ರೀರೋಗ ಮತ್ತು ಮಕ್ಕಳ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಬೇರೆ ಬೇರೆ ಕಡೆಯಿಂದ ಬಂದ ರೋಗಿಗಳ ಸಂಬಂಧಿಕರು ಡಾ. ನಾಗಲಕ್ಷ್ಮೀ ಚೌಧರಿ ಅವರ ಎದುರು ಅಳಲು ತೋಡಿಕೊಂಡು, ಹೆರಿಗೆಯಾದ ರೋಗಿಗಳಿಗೆ ಬಿಸಿನೀರು ವ್ಯವಸ್ಥೆ ಇಲ್ಲ. ಒಂದೇ ಬೆಡ್ ಮೇಲೆ ಇಬ್ಬರು ರೋಗಿಗಳನ್ನು ಮಲಗಿಸುತ್ತಾರೆ. ಬೆಡ್ ಇಲ್ಲ ಎಂದು ಅಲೆದಾಡಿಸುತ್ತಾರೆ. ಸಿಬ್ಬಂದಿ ವರ್ತನೆ ಸರಿಯಿಲ್ಲ ಎಂದು ಆರೋಪಿಸಿದರು.

ಇದನ್ನು ಆಲಿಸಿದ ಡಾ. ನಾಗಲಕ್ಷ್ಮೀ ಚೌಧರಿ ಕೆಎಂಸಿಆರ್‌ಐ ನಿರ್ದೇಶಕ ಡಾ. ಈಶ್ವರ ಹೊಸಮನಿ ಹಾಗೂ ವೈದ್ಯರಿಗೆ, ಬಿಸಿನೀರು ವ್ಯವಸ್ಥೆ ಮಾಡುವಂತೆ, ಸಿಬ್ಬಂದಿ ರೋಗಿಗಳು ಹಾಗೂ ಸಂಬಂಧಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ, ರೋಗಿಗಳನ್ನು ಅಲೆದಾಡಿಸದಂತೆ ಸೂಚನೆ ನೀಡಿದರಲ್ಲದೆ, 15 ದಿನದೊಳಗೆ ಸಮಸ್ಯೆ ಬಗೆಹರಿಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಕೆಎಂಸಿಆರ್‌ಐ ನಿರ್ದೇಶಕ ಡಾ. ಈಶ್ವರ ಹೊಸಮನಿ, ಡಾ. ಈಶ್ವರ ಹಸಬಿ, ಡಾ. ರಾಮಲಿಂಗಪ್ಪ ಅಂಟರತಾನಿ ಸೇರಿದಂತೆ ವೈದ್ಯರು, ಅಧಿಕಾರಿಗಳು ಇದ್ದರು.ಕೆಎಂಸಿಆರ್‌ಐಗೆ ಅನುದಾನ ಹೆಚ್ಚಿಸುವ ಕುರಿತು ಚರ್ಚೆ: ನಾಗಲಕ್ಷ್ಮೀ

ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ರೋಗಿಗಳು ಹಾಗೂ ಅವರ ಸಂಬಂಧಿಕರು ವೈದ್ಯರು ಚೆನ್ನಾಗಿ ಚಿಕಿತ್ಸೆ ನೀಡುತ್ತಾರೆ ಎಂದು ಬಹಳಷ್ಟು ಜನ ಹೇಳಿದ್ದಾರೆ. ಸಿಬ್ಬಂದಿ ಕೊರತೆ, ಬೆಡ್ ವ್ಯವಸ್ಥೆ ಸರಿ ಪಡಿಸುವ ಹಾಗೂ ಕೆಎಂಸಿಆರ್‌ಐಗೆ ಅನುದಾನ ಹೆಚ್ಚಿಸುವ ಕುರಿತು ಸರ್ಕಾರದ ಗಮನಕ್ಕೆ ತರುವುದಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು.

ಕೆಎಂಸಿಆರ್‌ಐಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತಾಯಿ ಮತ್ತು ಮಗುವಿನ ಆಸ್ಪತ್ರೆಯಲ್ಲಿ ತಿಂಗಳಿಗೆ 1500ಕ್ಕೂ ಅಧಿಕ ಹೆರಿಗೆಯಾಗುತ್ತದೆ. ದಾವಣಗೆರೆ ಸೇರಿ ಸುತ್ತಮುತ್ತಲಿನ ಜಿಲ್ಲೆಯಿಂದ ಇಲ್ಲಿ ಜನರು ಚಿಕಿತ್ಸೆಗೆ ಬರುತ್ತಾರೆ ಎಂದು ತಿಳಿಯಿತು. ಇಲ್ಲಿ ಅತ್ಯುತ್ತಮ ವ್ಯವಸ್ಥೆ ಇದೆ. ಆದರೆ, ಒತ್ತಡ ಜಾಸ್ತಿಯಾಗಿದೆ. ಒಂದು ತಿಂಗಳಿಗೆ ಸುಮಾರು 8-9 ತಾಯಂದಿರ ಸಾವಾಗುತ್ತಿದೆ. ಇದರ ವರದಿ ಕೇಳಿದ್ದೇನೆ. ಶೂನ್ಯ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಏನು ಕ್ರಮ ಕೈಗೊಂಡಿದೆ ಎಂಬುದನ್ನು ಸಭೆಯಲ್ಲಿ ಚರ್ಚಿಸಿ ವರದಿ ಪಡೆಯುತ್ತೇನೆ ಎಂದರು.

ಸಾರ್ವಜನಿಕರು ಸಿಬ್ಬಂದಿ, ಕೆಲವೊಂದು ಸಮಸ್ಯೆ ಹೇಳಿದ್ದಾರೆ ಅವುಗಳನ್ನು ತಪ್ಪಿಸಲು ನಿರ್ದೇಶಕರಿಗೆ ಸೂಚಿಸಲಾಗಿದೆ. ಸಿಬ್ಬಂದಿ ಕೂಡ ಇದನ್ನು ಅರ್ಥ ಮಾಡಿಕೊಳ್ಳಬೇಕು. ರೋಗಿಗಳ ಸಂಖ್ಯೆ ಜಾಸ್ತಿಯಾಗಿರುವುದರಿಂದ ಬೆಡ್‌ಗಳ ಕೊರತೆಯಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಆದ್ಯತೆಯ ಮೇಲೆ ಹೆಚ್ಚಿನ ಬೆಡ್ ವ್ಯವಸ್ಥೆ ಮಾಡಲು ಮುಖ್ಯಮಂತ್ರಿಗಳಿಗೆ, ಮಂತ್ರಿಗಳಿಗೆ ಭೇಟಿ ಮಾಡಿ ಚರ್ಚಿಸುವೆ. ಜಿಲ್ಲಾಡಳಿತದ ಸಭೆಯಲ್ಲಿ ಚರ್ಚಿಸುತ್ತೇನೆ. ಕೆಎಂಸಿಆರ್‌ಐಗೆ ಅನುದಾನ ಹೆಚ್ಚಿಸುವ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.