ಪ್ರಸ್ತುತ ಬ್ಯಾರೇಜ್‌ನಲ್ಲಿ ಸಂಗ್ರಹವಾಗಿರುವ ನೀರು ಕುಡಿಯಲು ನೀರನ್ನು ಸಂರಕ್ಷಿಸುವ ಉದ್ದೇಶದಿಂದ ಈಗಾಗಲೇ ಎಡದಂಡೆ ಮತ್ತು ಬಲದಂಡೆ ಎರಡೂ ಭಾಗದಲ್ಲಿರುವ ಕಾಲುವೆಗಳಿಗೆ ಮತ್ತು ಕೆರೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ.
ಹೂವಿನಹಡಗಲಿ: ತಾಲೂಕಿನಲ್ಲಿ ಬರ ಬಂದಿರುವ ಕಾರಣ ಕುಡಿವ ನೀರಿನ ಸಮಸ್ಯೆ ಎದುರಾಗದಂತೆ ತುಂಗಭದ್ರ ನದಿ ತೀರ ಪ್ರದೇಶ ವ್ಯಾಪ್ತಿಯ ಹಳ್ಳಿಗಳಲ್ಲಿ ರೈತರು ನದಿ ನೀರಿನಿಂದ ಭತ್ತ ಬೆಳೆಯದಂತೆ ಜಿಲ್ಲಾಡಳಿತ ನಿಷೇಧ ಹೊರಡಿಸಿದೆ.
ಹೌದು,ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್ ಹಿನ್ನೀರನ್ನು ಬಳಕೆ ಮಾಡಿಕೊಂಡು ಯಾವ ರೈತರು ಭತ್ತದ ಸಸಿ ಬೆಳೆಸಿ ನಾಟಿ ಮಾಡುವಂತಿಲ್ಲ, ಎಲ್ ನಿನೋ ಪರಿಣಾಮದಿಂದ ವಾಡಿಕೆಯಷ್ಟು ಮಳೆ ಬಾರದಿರುವ ಹಿನ್ನೆಲೆಯಲ್ಲಿ ಬ್ಯಾರೇಜ್‌ಗೆ ಒಳ ಹರಿವು ಶೂನ್ಯವಾಗಿದೆ. ಆದರಿಂದ ನದಿ ನೀರು ಕುಡಿಯಲು ಮಾತ್ರ ಬಳಕೆಗೆ ಮೀಸಲು ಇಡಲಾಗಿದೆ ಎಂದು ಜಿಲ್ಲಾಡಳಿತ ಆದೇಶದಲ್ಲಿ ಸೂಚಿಸಿದೆ.ಪ್ರಸ್ತುತ ಬ್ಯಾರೇಜ್‌ನಲ್ಲಿ ಸಂಗ್ರಹವಾಗಿರುವ ನೀರು ಕುಡಿಯಲು ನೀರನ್ನು ಸಂರಕ್ಷಿಸುವ ಉದ್ದೇಶದಿಂದ ಈಗಾಗಲೇ ಎಡದಂಡೆ ಮತ್ತು ಬಲದಂಡೆ ಎರಡೂ ಭಾಗದಲ್ಲಿರುವ ಕಾಲುವೆಗಳಿಗೆ ಮತ್ತು ಕೆರೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಸದ್ಯ ಬ್ಯಾರೇಜ್‌ನಲ್ಲಿ 2.3 ಟಿಎಂಸಿ ನೀರು ಸಂಗ್ರಹವಾಗಿದೆ. ಈ ನೀರು ಕೇವಲ 4 ತಿಂಗಳಿಗೆ ಕುಡಿಯಲು ಮಾತ್ರ ಲಭ್ಯ ಇರಲಿದೆ. ಆದರೆ ಬೇಸಿಗೆ ಮುನ್ನವೇ ನೀರು ಸಮಸ್ಯೆ ಎದುರಾಗದಂತೆ ರೈತರು ಯಾವುದೇ ಕಾರಣಕ್ಕೂ ಭತ್ತದ ನಾಟಿ ಸೇರಿದಂತೆ ಇನ್ನಿತರ ಬೆಳೆ ಬೆಳೆಯಲು ನದಿ ನೀರನ್ನು ಬಳಕೆ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಬ್ಯಾರೇಜ್‌ನಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕುಸಿತ ಕಂಡಿದೆ. ನದಿ ತೀರದಲ್ಲಿ ರೈತರು ಅನಧಿಕೃತವಾಗಿ ಮೋಟಾರ್ ಅಳವಡಿಸಿಕೊಂಡು ನೀರನ್ನು ಎತ್ತುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಆದರಿಂದ ಸಾರ್ವಜನಿಕರ ಹಿತದೃಷ್ಠಿಯಿಂದ ಕುಡಿವ ನೀರಿನ ಅಗತ್ಯತೆ ಪರಿಗಣಿಸಿ ರೈತರು ಅನಧಿಕೃತ ಮೋಟಾರ್ ಅಳವಡಿಸಿಕೊಂಡು ನೀರೆತ್ತುವುದನ್ನು ತಕ್ಷಣದಿಂದಲೇ ನಿಲ್ಲಿಸಬೇಕು, ಆಯಾ ವ್ಯಾಪ್ತಿಯ ಸಂಬಂಧಪಟ್ಟ ಗ್ರಾಪಂ ಪಿಡಿಒ, ಜೆಸ್ಕಾಂ ಅಧಿಕಾರಿ, ತಾಲೂಕಾಡಳಿತವು ಕುಡಿವ ನೀರಿನ ವಿಚಾರ ತುರ್ತು ಎಂದು ಪರಿಗಣಿಸಿ ಕ್ರಮ ವಹಿಸಬೇಕಿದೆ ಎಂದು ಸೂಚಿಸಲಾಗಿದೆ.ಬರ ಬಂದಿರುವ ಹಿನ್ನೆಲೆ ಕುಡಿವ ನೀರಿನ ಹಾಹಾಕಾರ ಎದುರಾಗದಂತೆ ಮುನ್ನಚ್ಚರಿಕೆ ಕ್ರಮವಾಗಿ ಸಿಂಗಟಾಲೂರು ಬ್ಯಾರೇಜ್ ಹಿನ್ನೀರು ಬಳಸಿಕೊಂಡು ರೈತರು ಭತ್ತದ ನಾಟಿ ಮಾಡದಂತೆ ನಿಷೇಧಿಸಲಾಗಿದೆ. ಅನಧಿಕೃತ ಮೋಟಾರ್‌ಗಳಿಂದ ನೀರು ಎತ್ತುವುದನ್ನು ಸ್ಥಗಿತಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.
ತುಂಗಭದ್ರ ನದಿ ಪ್ರಾಂತ್ಯದ ಹಳ್ಳಿಗಳಲ್ಲಿ ಜನ ಜಾನುವಾರುಗಳಿಗೆ ಕುಡಿವ ನೀರಿನ ಸಮಸ್ಯೆ ಎದುರಾಗದಂತೆ ರೈತರು ಯಾವುದೇ ಕಾರಣಕ್ಕೂ ಭತ್ತ ಸೇರಿದಂತೆ ಇನ್ನಿತರ ಬೆಳೆ ಬೆಳೆಯಲು ನದಿ ನೀರು ಬಳಕೆ ನಿಷೇಧಿಸಲಾಗಿದೆ ಎಂದು ಹೂವಿನಹಡಗಲಿ ತಹಸೀಲ್ದಾರ್ ಕೆ.ಎಂ. ಗುರುಬಸವರಾಜ ತಿಳಿಸಿದ್ದಾರೆ.ಜಿಲ್ಲಾಧಿಕಾರಿಗಳ ಆದೇಶದಂತೆ ಈಗಾಗಲೇ ನದಿ ನೀರು ಬಳಸಿ ಭತ್ತದ ನಾಟಿ ಮಾಡದಂತೆ ಗ್ರಾಪಂ ಕಸ ವಿಲೇವಾರಿ ಮಾಡುವ ವಾಹನಗಳಲ್ಲಿ ರೈತರಿಗೆ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಿ ಜಾಗೃತಿ ಮಾಡಿಸಲಾಗುತ್ತಿದೆ. ಜತೆಗೆ ತಾಲೂಕು ಮಟ್ಟದ ಅಧಿಕಾರಿಗಳು ನದಿ ತೀರಕ್ಕೆ ಹೋಗಿ ರೈತರು ಅನಧಿಕೃತವಾಗಿ ಮೋಟಾರ್‌ಗಳಿಂದ ನೀರೆತ್ತದಂತೆ ಕ್ರಮ ವಹಿಸುವ ಕೆಲಸ ಮಾಡುತ್ತೇವೆ ಎಂದು ಹೂವಿನಹಡಗಲಿ ತಾಪಂ ಇಒ ಜಿ.ಪರಮೇಶ್ವರ ತಿಳಿಸಿದ್ದಾರೆ.