ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಾಯಕ ಸಮುದಾಯದ ಬಹು ವರ್ಷಗಳ ಬೇಡಿಕೆಯಾದ ಮಹರ್ಷಿ ಶ್ರೀವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಜಿಲ್ಲಾಡಳಿತ ಅ.17 ರಂದು ಭೂಮಿಪೂಜೆ ಮಾಡಬೇಕು ಹಾಗೂ ಯಳಂದೂರಿನ ಹಳೆಯ ಪಟ್ಟಣ ಪಂಚಾಯಿತಿ ಕಚೇರಿ ಜಾಗದಲ್ಲಿ ವಾಲ್ಮೀಕಿ ಪುತ್ಥಳಿ, ಗ್ರಂಥಾಲಯ ನಿರ್ಮಾಣ ಮಾಡಬೇಕು ಎಂದು ಯಳಂದೂರು ತಾಲೂಕು ನಾಯಕರ ಸಂಘ ಆಗ್ರಹಿಸಿದೆ.ನಗರದ ಪತ್ರಿಕಾಗೋಷ್ಠಿಯಲ್ಲಿ ಯಳಂದೂರು ತಾಲೂಕು ನಾಯಕ ಮಂಡಳಿ ಅಧ್ಯಕ್ಷ ಮುರಳಿಕೃಷ್ಣ ಮಾತನಾಡಿ, ಶ್ರೀರಾಮ ಚರಿತ್ರೆಯನ್ನು ತಮ್ಮ ರಾಮಾಯಣದ ಮೂಲಕ ಪ್ರಚಂಚಕ್ಕೆ ಮನದಟ್ಟು ಮಾಡಿಕೊಟ್ಟ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಜಿಲ್ಲಾಡಳಿತ ತಾರತಮ್ಯ ಮಾಡುತ್ತಿದೆ. ಅದೇ ರೀತಿಯ ಯಳಂದೂರಿನ ಹಳೆಯ ಪಟ್ಟಣ ಪಂಚಾಯಿತಿ ಕಚೇರಿ ಜಾಗದಲ್ಲಿ ವಾಲ್ಮೀಕಿ ಪುತ್ಥಳಿ, ಗ್ರಂಥಾಲಯ ನಿರ್ಮಾಣಕ್ಕೆ ಪಟ್ಟಣ ಪಂಚಾಯಿತಿಯಲ್ಲಿ ಅನುಮೋದನೆಗೊಂಡಿದೆ. ಅಂದಿನ ಶಾಸಕ ಎನ್.ಮಹೇಶ್ ಅವರ ವಿಶೇಷ ಅನುದಾನದಲ್ಲಿ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು. ಇಂದಿನ ಕ್ಷೇತ್ರದ ಶಾಸಕ ಎ.ಅರ್. ಕೃಷ್ಣಮೂರ್ತಿ ನಿರ್ಲಕ್ಷ್ಯ ತೋರುತ್ತಿರುವುದು ಖಂಡನೀಯವಾಗಿದೆ ಎಂದರು.
ಜಿಲ್ಲಾಡಳಿತ 17ರಂದು ವಾಲ್ಮೀಕಿ ಜಯಂತಿ ದಿನದಂದು ಶಂಕುಸ್ಥಾಪನೆ ಮಾಡದಿದ್ದರೆ ಜಿಲ್ಲಾಡಳಿತ ನಡೆಸುವ ವಾಲ್ಮೀಕಿ ಸರ್ಕಾರಿ ಕಾರ್ಯಕ್ರಮವನ್ನು ಬಹಿಷ್ಕರಿಸಿ, ಅಂದು ಸಮುದಾಯದ ಮುಖಂಡರು ಸಾವಿರಾರು ಸಂಖ್ಯೆಯಲ್ಲಿ ಸಮಾವೇಶಗೊಂಡು ನಗರದ ಪ್ರವಾಸಿಮಂದಿರದಿಂದ ನಾಯಕರ ವಿದ್ಯಾರ್ಥಿ ನಿಲಯದವರೆಗೆ ವಾಲ್ಮೀಕಿ ಭಾವಚಿತ್ರವನ್ನು ಅದ್ಧೂರಿ ಮೆರವಣಿಗೆ ಮಾಡಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಗುವುದು. ತದನಂತರ ಜಿಲ್ಲಾಡಳಿತ ಭವನಕ್ಕೆ ತೆರಳಿ ಸಮುದಾಯದಿಂದಲೇ ಗುದ್ದಲಿಪೂಜೆ ಮಾಡುತ್ತದೆ. ಜಿಲ್ಲೆಯ ನಾಯಕ ಸಮುದಾಯ, ಯಳಂದೂರು ತಾಲೂಕು ನಾಯಕರ ಸಂಘದ ಬೇಡಿಕೆ ಇದಾಗಿದ್ದು, ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಹಾಗೂ ಯಳಂದೂರಿನಲ್ಲಿ ವಾಲ್ಮೀಕಿ ಪುತ್ಥಳಿ, ನಿರ್ಮಾಣ ಮಾಡುವ ತನಕ ಸಮುದಾಯ ನಿರಂತರ ಹೋರಾಟ ಮಾಡಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಯಳಂದೂರು ಟೌನ್ ಎಂಟು ಬೀದಿಯ ಯಜಮಾನ ಎನ್. ಮೂರ್ತಿ, ಅಗರ ಐದು ಬೀದಿ ಯಜಮಾನ ನಾರಾಯಣಸ್ವಾಮಿ, ಟಿಎಪಿಸಿಎಂಎಸ್ ನಿರ್ದೇಶಕ ಕಂದಹಳ್ಳಿ ಮಹೇಶ್ ಕುಮಾರ್, ಅಬ್ಕಾರಿ ನಿವೃತ್ತ ಅಧಿಕಾರಿ ಸೂರ್ಯನಾರಾಯಣ್, ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಭೀಮಪ್ಪ, ಮಾಜಿ ಸದಸ್ಯ ಉಮಾಶಂಕರ್, ಯಜಮಾನ ಮಣಿಗಾರ್ ರಂಗನಾಥ್ ಹಾಜರಿದ್ದರು.