ಸಾರಾಂಶ
ಧಾರವಾಡ:
ಲೋಕಸಭಾ ಚುನಾವಣೆಯ ಪ್ರಯುಕ್ತ ಮತದಾನ ನಡೆಯುವ ದಿನ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಎಲ್ಲ ಮತದಾನ ಕೇಂದ್ರಗಳಿಗೆ 1268 ವೈದ್ಯಕೀಯ ತಂಡ ನಿಯೋಜಿಸಲಾಗಿದೆ. 1,850 ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ಅವಶ್ಯಕ ಔಷಧಿಗಳೊಂದಿಗೆ ಸಿದ್ಧಗೊಳಿಸಿ ಪೂರೈಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ಹೇಳಿದರು.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮೇ 7ರ ಮತದಾನ ದಿನ ಚುನಾವಣಾ ಕರ್ತವ್ಯನಿರತ ಸಿಬ್ಬಂದಿ ಹಾಗೂ ಮತದಾರರ ಆರೋಗ್ಯ ಕಾಳಜಿ, ಅಗತ್ಯವೆನಿಸಿದರೆ ಪ್ರಾಥಮಿಕ ಚಿಕಿತ್ಸೆ ನೀಡಲು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ ನೇತೃತ್ವದಲ್ಲಿ ಅಗತ್ಯ ಸಿದ್ಧತೆ, ಆರೋಗ್ಯ ಸಿಬ್ಬಂದಿಗಳ ನೇಮಕ ಮತ್ತು ಆ್ಯಂಬುಲೆನ್ಸ್ ನಿಯೋಜಿಸಲಾಗಿದೆ. ಪ್ರತಿ ಮತಗಟ್ಟೆಗಳ ವೈದ್ಯಕೀಯ ಮೇಲ್ವಚಾರಣೆಗಾಗಿ 55 ಸೆಕ್ಟರಲ್ ಅಧಿಕಾರಿ, 10 ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಅಂದು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೇಂದ್ರ ಸ್ಥಾನವಾಗಿಟ್ಟು ಒಟ್ಟು 29 ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ದಿನದಂದು ಎಂಟು ಕೇಂದ್ರಗಳಿಗೆ ವೈದ್ಯಕೀಯ ತಂಡಗಳೊಂದಿಗೆ ಆ್ಯಂಬುಲೆನ್ಸ್ ನಿಯೋಜಿಸಲಾಗಿದೆ. ಇನ್ನು, ಬಿಸಿಗಾಳಿಯಿಂದ ಉಂಟಾಗುವ ಅನಾರೋಗ್ಯ ನಿಯಂತ್ರಣಕ್ಕಾಗಿ ಮುಂಜಾಗೃತೆ ವಹಿಸುವ ಕುರಿತು ಚುನಾವಣಾ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಮತದಾನ ಕೇಂದ್ರಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಒಆರ್‌ಎಸ್ ಪಾಕೇಟ್ ನೀಡಲಾಗಿದೆ. ಉಷ್ಣತೆಯಿಂದ ಸಂಭವಿಸುವ ಕಾಯಿಲೆಗಳಿಗೆ ಅಗತ್ಯವಿರುವ ಔಷಧಿಗಳ ದಾಸ್ತಾನುಗಳನ್ನು ಎಲ್ಲ ಆರೋಗ್ಯ ಕೇಂದ್ರ ಮತ್ತು ತಾಲೂಕಾಸ್ಪತ್ರೆ, ಜಿಲ್ಲಾಸ್ಪತ್ರೆಯಲ್ಲಿ ಇಡಲಾಗಿದೆ. ವಿಶೇಷ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆ ಧಾರವಾಡದಲ್ಲಿ ಐದು ಹಾಸಿಗೆ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ತಲಾ ಎರಡು ಹಾಸಿಗೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ ಒಂದು ಹಾಸಿಗೆ ಕಾಯ್ದಿರಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ಮತದಾನ ಕೇಂದ್ರಕ್ಕೂ ಬಿಸಿಗಾಳಿ, ಬಿಸಲಿನಿಂದ ರಕ್ಷಿಸಿಕೊಳ್ಳಲು ಕೈಕೊಳ್ಳಬೇಕಾದ ಕ್ರಮಗಳ ಕುರಿತು ಹಾಗೂ ವಹಿಸಿಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ಕರಪತ್ರ ವಿತರಿಸಲಾಗಿದೆ. ಮತ್ತು ಸ್ವಿಪ್ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಲು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸೂಚಿಸಲಾಗಿದೆ. ದೈನಂದಿನ ಬಳಕೆಯ ಔಷಧಿ ಒಳಗೊಂಡ ವಿಶೇಷ ಆರೋಗ್ಯ ಕಿಟ್ ಸಿದ್ಧಪಡಿಸಿರುವ ಜಿಲ್ಲಾಡಳಿತ, ತುರ್ತು ಬಳಕೆಗೆ ಅವಶ್ಯಕವಿರುವ ಅಗತ್ಯ ಔಷಧ ಹೊಂದಿರುವ ಔಷಧಿ ಕಿಟ್‌ಗಳನ್ನೂ ಸಿದ್ಧಪಡಿಸಿ ನೀಡಿದೆ. ಪ್ರಸ್ತುತ ಉಷ್ಣ ವಾತಾವರಣ ಹೆಚ್ಚಾಗಿದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಮತಗಟ್ಟೆಗಳಿಗೆ ತಲುಪಿದ ಮೇಲೆ ಮತ್ತು ಮತದಾನದ ದಿನದಂದು ಯಾವುದೇ ಅನಾರೋಗ್ಯ ಸಮಸ್ಯೆಗಳಿಗೆ ಒಳಗಾಗದಂತೆ ಮುನ್ನೆಚ್ಚರಿಕೆಯಾಗಿ ಒಆರ್‌ಎಸ್ ಪಾಕೆಟ್, ಜ್ವರ, ತಲೆನೋವು, ಹೊಟ್ಟೆನೋವು, ವಾಂತಿ, ಆಸಿಡಿಟಿ ಮುಂತಾದ ಸಮಸ್ಯೆಗಳಿಗೆ ಒಳಗಾದಲ್ಲಿ ಅವುಗಳ ಪರಿಹಾರಕ್ಕಾಗಿ ಅಗತ್ಯವಿರುವ ಮಾತ್ರೆ, ಸ್ಯಾನಿಟೈಸರ್, ಸಣ್ಣ ಪುಟ್ಟ ಗಾಯಗಳಾದಲ್ಲಿ ಬ್ಯಾಂಡ್ ಏಡ್‌ನ್ನು ಒಳಗೊಂಡ ಕಿಟ್ ಸಿದ್ಧಪಡಿಸಿದೆ.