ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ದಸರಾ ಮಹೋತ್ಸವ ಜಂಬೂಸವಾರಿ ವೀಕ್ಷಣೆ ಮಾಡಲು ಮೈಸೂರು ಅರಮನೆ ಆವರಣದಲ್ಲಿ ಈ ಸಲ ಆಸನ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ಆಸನ ವ್ಯವಸ್ಥೆಯನ್ನು 65 ಸಾವಿರದಿಂದ 48 ಸಾವಿರಕ್ಕೆ ಇಳಿಸಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.ಮೈಸೂರು ಅರಮನೆ ಮಂಡಳಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಮಟ್ಟದ ದಸರಾ ಮಹೋತ್ಸವ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಜಂಬೂಸವಾರಿ ಹೆಚ್ಚಿನ ಜನ ನೋಡಲಿ ಎಂಬ ಕಾರಣಕ್ಕೆ ಕಳೆದ ಬಾರಿ 65 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಈ ಬಾರಿ 48 ಸಾವಿರ ಆಸನಗಳನ್ನು ಮಾತ್ರ ಕಲ್ಪಿಸಲಿದ್ದು, ಆಸನಕ್ಕೆ ತಕ್ಕಂತೆ ಗೋಲ್ಡ್ ಕಾರ್ಡ್, ಟಿಕೆಟ್ ಗಳು ಹಾಗೂ ಪಾಸ್ ಗಳನ್ನು ವಿತರಿಸಲಾಗುವುದು ಎಂದರು.
ಸ್ತಬ್ಧಚಿತ್ರಗಳ ಮುಂದೆ ಪ್ರದರ್ಶನ ನೀಡುವ ಕಲಾವಿದರು 15 ಜನರಿದ್ದರೆ, ಅವರನ್ನು ಹೊರತುಪಡಿಸಿ ಸಲಹೆ- ಸೂಚನೆ ನೀಡುವ 20 ಮಂದಿ ಮಧ್ಯೆ ಮಧ್ಯೆ ಓಡಾಡುವುದರಿಂದ ವೀಕ್ಷಣೆ ಮಾಡುವ ಜನರಿಗೂ ಸರಿಯಾಗಿ ಕಾಣುವುದಿಲ್ಲ. ಹೀಗಾಗಿ, ಈ ಬಾರಿ ಉಪ ಸಮಿತಿಗಳ ಸದಸ್ಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಿ, ಗೌರವಯುತವಾಗಿ ಅಲ್ಲಿಯೇ ಕೂರಬೇಕು. ಮೆರವಣಿಗೆ ಅಥವಾ ಸ್ತಬ್ದಚಿತ್ರ ಉಪ ಸಮಿತಿಯವರು ಮಧ್ಯದಲ್ಲಿ ಓಡಾಡಲೂ ಅವಕಾಶ ಕೊಡುವುದಿಲ್ಲ ಎಂದು ಅವರು ಹೇಳಿದರು.ಈ ಬಾರಿ ಸ್ತಬ್ಧಚಿತ್ರಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತಿದ್ದು, ಪ್ರತಿಯೊಂದು ಜಿಪಂ ಸೇರಿ ಪ್ರಮುಖ ಇಲಾಖೆ, ನಿಗಮಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಉಳಿದಂತೆ ಹೆಚ್ಚುವರಿಯಾಗಿ ಸೇರ್ಪಡೆ ಮಾಡುವುದಿಲ್ಲ. ಆಹಾರ ಮೇಳದಲ್ಲೂ ಬೇರೆ ಬೇರೆ ಜಿಲ್ಲೆಗಳ ತಿಂಡಿ, ತಿನಿಸುಗಳ ಪರಿಚಯಕ್ಕೆ ಒತ್ತು ನೀಡಲು ಮಳಿಗೆಗಳನ್ನು ಹಂಚುವಾಗ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ದಸರಾ ವೈವಿಧ್ಯಮಯಸೆ.22 ರಂದು ಚಾಮುಂಡಿಬೆಟ್ಟದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಲೇಖಕಿ ಬಾನು ಮುಷ್ತಾಕ್ ದಸರಾಗೆ ಚಾಲನೆ ನೀಡುವರು. ಅದೇ ದಿನ ವಸ್ತುಪ್ರದರ್ಶನ, ಫಲಪುಷ್ಪ ಪ್ರದರ್ಶನ, ಕುಸ್ತಿ, ಆಹಾರ ಮೇಳ, ವಿದ್ಯುತ್ ದೀಪಾಲಂಕಾರ, ಪುಸ್ತಕ ಮೇಳ ಮೊದಲಾದ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಸೇರಿದಂತೆ ಸಚಿವರು ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ಅ.2 ರಂದು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ನಂಧಿಧ್ವಜಕ್ಕೆ ಪುಷ್ಪಾರ್ಚನೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದರು.ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಮಳಿಗೆಗಳು 2- 3 ದಿನಗಳಲ್ಲಿ ಮುಗಿಯಲಿವೆ. ವಿವಿಧ ಜಿಲ್ಲೆಗಳ ಮಳಿಗೆಗಳು, ಸರ್ಕಾರಿ ಇಲಾಖೆಗಳ ಮಳಿಗೆಗಳಲ್ಲಿ ಎಲ್ಲ ಸಿದ್ಧತೆಗಳು ಮುಗಿದು, ಸೆ.22 ರಂದು ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುತ್ತದೆ ಎಂದು ಅವರು ಹೇಳಿದರು.
ಯುವ ದಸರಾಉತ್ತನಹಳ್ಳಿ ಬಳಿ ಸೆ.23 ರಿಂದ 27 ರವರೆಗೆ ಯುವ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಹೆಸರಾಂತ ಹಾಲಿವುಡ್, ಬಾಲಿವುಡ್ ಗಾಯಕರು, ಸಂಗೀತ ನಿರ್ದೇಶಕರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸೆ.23 ರಂದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಉದ್ಘಾಟನೆ ದಿನ ಕಾರ್ಯಕ್ರಮ ನೀಡಲಿದ್ದಾರೆ. ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀಪ್ರಸಾದ್, ಬಾಲಿವುಡ್ ಗಾಯಕಿ ಸುನಿಧಿ ಚೌಹಣ್ ಮತ್ತಿತರರು ಕಾರ್ಯಕ್ರಮ ನೀಡಲಿದ್ದಾರೆ ಎಂದು ಅವರು ಹೇಳಿದರು.
ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 19 ಉಪ ಸಮಿತಿಗಳ ಉಪ ವಿಶೇಷಾಧಿಕಾರಿಗಳು, ಕಾರ್ಯಾಧ್ಯಕ್ಷರು, ಕಾರ್ಯದರ್ಶಿಗಳ ಸಭೆ ನಡೆಸಿ ಸವಿಸ್ತಾರವಾದ ವರದಿಯನ್ನು ಪಡೆಯಲಾಗಿದೆ. ಸಿದ್ಧತೆಗಳು ಅಂತಿಮ ಹಂತಕ್ಕೆ ಬಂದಿವೆ. ಶೀಘ್ರದಲ್ಲೇ ಸಮಿತಿಗಳಿಗೆ ಅಧಿಕಾರೇತರನ್ನು ನೇಮಿಸಲಾಗುವುದು ಎಂದರು.ಸೆಸ್ಕ್ ಅಧ್ಯಕ್ಷರಾದ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್, ಎಸ್ಪಿ ಎನ್. ವಿಷ್ಣುವರ್ಧನ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲರಾಜು ಮೊದಲಾದವರು ಇದ್ದರು.
----ಬಾಕ್ಸ್...
2 ದಿನ ಏರ್ ಶೋಈ ಬಾರಿ ಸೆ.27 ಮತ್ತು ಅ.1 ರಂದು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ವೈಮಾನಿಕ ಪ್ರದರ್ಶನ ನಡೆಯಲಿದೆ. ಸೆ.27 ರಂದು ರಿಹರ್ಸಲ್ ನಡೆದರೆ, ಅ.1 ರಂದು ವಿವಿಧ ವಿಮಾನಗಳು, ಜೆಟ್ ವಿಮಾನಗಳು ಸಾಹಸಮಯ ಪ್ರದರ್ಶನ ನೀಡಲಿವೆ. ಏರ್ ಶೋಗೆ ಟಿಕೆಟ್ ಇಲ್ಲ. ಪಾಸ್ ವಿತರಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.