ಸಾರಾಂಶ
ವಾಲ್ಮೀಕಿ ವೃತ್ತದಲ್ಲಿ ಅನಧಿಕೃತವಾಗಿ ರಾತ್ರೋ ರಾತ್ರಿ ರಾಯಣ್ಣ ಪುತ್ಥಳಿ ಸ್ಥಾಪಿಸಿದ್ದರಿಂದ ನಾಯಕ ಸಮಾಜವು ಕಳೆದ ೧೫ ದಿನದಿಂದ ನಿರಂತರ ಬೃಹತ್ ಪ್ರತಿಭಟನೆ, ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿರೋಧ ವ್ಯಕ್ತಪಡಿಸಿ ಜಿಲ್ಲಾಡಳಿತಕ್ಕೆ ಒತ್ತಡ ಹೇರಿತ್ತು. ಮೂರು ದಿನಗಳ ಹಿಂದೆ ಧರಣಿ ಸ್ಥಳದಲ್ಲಿನ ಕುರ್ಚಿ, ಅಂಬೇಡ್ಕರ್, ವಾಲ್ಮೀಕಿ ಭಾವಚಿತ್ರಗಳು ನಾಪತ್ತೆಯಾಗಿ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ಕೂಡಿತ್ತು.
ಮಲೇಬೆನ್ನೂರು: ಜಿಲ್ಲಾಡಳಿತ ಸೂಚನೆ ಮೇರೆಗೆ ಭಾನುವಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿಯ ಉಪವಿಭಾಗಾಧಿಕಾರಿ ದುರ್ಗಾಶ್ರೀ ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಮಂಗಳವಾರ ತೆರವುಗೊಳಿಸಲಾಯಿತು.
ವಾಲ್ಮೀಕಿ ವೃತ್ತದಲ್ಲಿ ಅನಧಿಕೃತವಾಗಿ ರಾತ್ರೋ ರಾತ್ರಿ ರಾಯಣ್ಣ ಪುತ್ಥಳಿ ಸ್ಥಾಪಿಸಿದ್ದರಿಂದ ನಾಯಕ ಸಮಾಜವು ಕಳೆದ ೧೫ ದಿನದಿಂದ ನಿರಂತರ ಬೃಹತ್ ಪ್ರತಿಭಟನೆ, ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿರೋಧ ವ್ಯಕ್ತಪಡಿಸಿ ಜಿಲ್ಲಾಡಳಿತಕ್ಕೆ ಒತ್ತಡ ಹೇರಿತ್ತು. ಮೂರು ದಿನಗಳ ಹಿಂದೆ ಧರಣಿ ಸ್ಥಳದಲ್ಲಿನ ಕುರ್ಚಿ, ಅಂಬೇಡ್ಕರ್, ವಾಲ್ಮೀಕಿ ಭಾವಚಿತ್ರಗಳು ನಾಪತ್ತೆಯಾಗಿ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ಕೂಡಿತ್ತು. ರಾಯಣ್ಣ ಮೂರ್ತಿ ತೆರವು ವಿರೋಧಿಸಿದ ಕುರುಬ ಸಮಾಜದವರು ಪೊಲೀಸರಿಗೆ ಧಿಕ್ಕಾರ ಕೂಗಿದರು. ಕುರುಬ ಸಮಾಜದವರು ಬೀರಲಿಂಗೇಶ್ವರ ದೇವಾಲಯದಲ್ಲಿ ಸಭೆ ಸೇರಿ ನಿಷೇಧಾಜ್ಞೆ ಮುಕ್ತಾಯದ ನಂತರ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.ಜಿಲ್ಲಾಡಳಿತ ಸೂಚನೆ ಮೇರೆಗೆ ಗ್ರಾಪಂ ಸಿಬ್ಬಂದಿ ರಾಯಣ್ಣ ಪುತ್ಥಳಿ ತೆರವುಗೊಳಿಸಿದರು. ಈ ಹಿನ್ನೆಲೆಯಲ್ಲಿ ಭಾನುವಳ್ಳಿಯಲ್ಲಿ ಜ.೨೫ರ ವರೆಗೆ ತಹಸೀಲ್ದಾರ್ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ ಎಂದು ಪಿಎಸ್‌ಐ ಪ್ರಭು ಕೆಳಗಿನಮನಿ ತಿಳಿಸಿದರು. ಸ್ಥಳದಲ್ಲಿ ಡಿವೈಎಸ್‌ಪಿ ಬಸವರಾಜ್, ವೃತ್ತ ನಿರೀಕ್ಷಕ ಸುರೇಶ್. ಗ್ರಾಮಲೆಕ್ಕಾಧಿಕಾರಿ ಶಿವಪ್ರಕಾಶ್, ಮೀಸಲು ಪೊಲೀಸ್ ತುಕಡಿ ಮೊಕ್ಕಾಂ ಹೂಡಿದೆ.