ಹನುಮ ಜನಿಸಿದ ಸ್ಥಳ, ತಾಲೂಕಿನ ಅಂಜನಾದ್ರಿ ಬೆಟ್ಟದ ದೇಗುಲ ಈಗ ಮತ್ತೆ ಅರ್ಚಕ ವಿದ್ಯಾದಾಸ ಬಾಬಾ ಅವರಿಂದ ಜಿಲ್ಲಾಡಳಿತ ತನ್ನ ಸುಪರ್ದಿಗೆ ತೆಗೆದುಕೊಂಡಿದೆ.
ವಿದ್ಯಾದಾಸ ಬಾಬಾ ನೇಮಿಸಿದ ಸಿಬ್ಬಂದಿ ಹೊರಗೆ ಹಾಕಿದ ಜಿಲ್ಲಾಡಳಿತ
ಬಾಬಾ ಹಾಕಿದ ನಾಮಫಲಕಗಳ ತೆರವು, ಪೂಜೆಗೆ ಸೀಮಿತಗಂಗಾವತಿ: ಹನುಮ ಜನಿಸಿದ ಸ್ಥಳ, ತಾಲೂಕಿನ ಅಂಜನಾದ್ರಿ ಬೆಟ್ಟದ ದೇಗುಲ ಈಗ ಮತ್ತೆ ಅರ್ಚಕ ವಿದ್ಯಾದಾಸ ಬಾಬಾ ಅವರಿಂದ ಕೊಪ್ಪಳ ಜಿಲ್ಲಾಡಳಿತ ತನ್ನ ಸುಪರ್ದಿಗೆ ತೆಗೆದುಕೊಂಡಿದೆ.
ಉಚ್ಚ ನ್ಯಾಯಾಲಯ ತನ್ನ ಪರವಾಗಿ ಆದೇಶ ನೀಡಿದೆ ಎಂಬ ಕಾರಣಕ್ಕೆ ವಿದ್ಯಾದಾಸ ಬಾಬಾ ಅವರು ಜಿಲ್ಲಾಡಳಿತ ನೇಮಕ ಮಾಡಿದ್ದ ಸಿಬ್ಬಂದಿಯನ್ನು ಹೊರಹಾಕಿದ್ದಲ್ಲದೆ, ಕಚೇರಿಗೆ ಬೀಗ ಹಾಕಿ ದೇಗುಲವನ್ನು ತಮ್ಮ ನಿಯಂತ್ರಣಕ್ಕೆ ಪಡೆದಿದ್ದರು. ಅ. 13ರಂದು ದೇಗುಲಕ್ಕೆ ಅಪರ ಜಿಲ್ಲಾಧಿಕಾರಿ ಭೇಟಿ ನೀಡಿ, ನ್ಯಾಯಾಲಯ ಸೂಚನೆ ಪಾಲಿಸುವಂತೆ ಬಾಬಾ ಅವರಿಗೆ ತಿಳಿಸಿದ್ದರು. ಆದರೂ ಬಾಬಾ ಅವರು ದೇಗುಲ ಪ್ರವೇಶಿಸಿ ಅಲ್ಲಿರುವ 20ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊರಹಾಕಿ ಕಚೇರಿಗೆ ಬೀಗ ಹಾಕಿದ್ದರು.ವಿದ್ಯಾದಾಸ ಬಾಬಾ ನ್ಯಾಯಾಲಯ ಸೂಚನೆ ಪಾಲಿಸಿಲ್ಲ ಎಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ತಹಸೀಲ್ದಾರ್ ಪ್ರಕರಣ ದಾಖಲಿಸಿದ್ದರು.
ಕಳೆದ 15 ದಿನಗಳ ಹಿಂದೆ ದೇಗುಲದಲ್ಲಿ ವಿದ್ಯಾದಾಸ ಬಾಬಾ ನೇಮಕ ಮಾಡಿದ್ದ ಸಿಬ್ಬಂದಿಯನ್ನು ಈಗ ಜಿಲ್ಲಾಡಳಿತ ಹೊರಹಾಕಿ, ಪುನಃ ಈ ಹಿಂದೆ ಇದ್ದ ಸಿಬ್ಬಂದಿಯನ್ನು ಮುಂದುವರಿಸಿದೆ. ಅಲ್ಲದೇ ಕೆಲವೊಂದು ನಾಮಫಲಕಗಳನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. 15 ದಿನಗಳಿಂದ ಕೆಲಸ ಇಲ್ಲದೆ ಪರದಾಡುತ್ತಿದ್ದ ಸಿಬ್ಬಂದಿ ಈಗ ನಿಟ್ಟುಸಿರು ಬಿಟ್ಟಿದ್ದಾರೆ.ವಾಗ್ವಾದ: ವಿದ್ಯಾದಾಸ ಬಾಬಾ ನೇಮಕ ಮಾಡಿದ್ದ ಸಿಬ್ಬಂದಿಯನ್ನು ಹೊರಹಾಕಲು ಹೋಗಿದ್ದ ಅಧಿಕಾರಿಗಳ ಜತೆ ಬಾಬಾ ವಾಗ್ವಾದ ನಡೆಸಿದರು. ಉಚ್ಚ ನ್ಯಾಯಾಲಯ ಆದೇಶದಂತೆ ಸರ್ಕಾರ ನೇಮಕ ಮಾಡಿದ ಸಿಬ್ಬಂದಿ ಕಾರ್ಯ ನಿರ್ವಹಿಸಬೇಕು ಮತ್ತು ಕೇವಲ ನೀವು ಪೂಜೆ ಮತ್ತು ವಸತಿ ಸೌಕರ್ಯಕ್ಕೆ ಅರ್ಹರಿದ್ದೀರಿ ಎಂದು ಹೇಳುತ್ತಿದ್ದಂತೆಯೆ ಅಧಿಕಾರಿಗಳ ವಿರುದ್ಧ ಬಾಬಾ ಅಕ್ರೋಶ ವ್ಯಕ್ತಪಡಿಸಿದರು. .
ಪೂಜೆಗೆ ಸೀಮಿತ: ಅಂಜನಾದ್ರಿ ದೇಗುಲಕ್ಕೆ ಬುಧವಾರ ಸಹಾಯಕ ಆಯುಕ್ತ ಮೆಹಬೂಬ ಜಿಲಾನಿ, ತಹಸೀಲ್ದಾರ್ ವಿನಾಯಕ ಗೋಡಬೋಲೆ, ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡ, ಕಂದಾಯ ನಿರೀಕ್ಷಕ ಮಹೇಶ ದಲಾಲ್, ಸಿಪಿಐ ರಂಗಪ್ಪ ದೊಡ್ಮನಿ ಭೇಟಿ ನೀಡಿ, ವಿದ್ಯಾದಾಸ ಬಾಬಾ ಅವರಿಗೆ ಉಚ್ಚ ನ್ಯಾಯಾಲಯ ಆದೇಶ ಪಾಲಿಸಬೇಕು ಎಂದು ತಿಳಿಸಿದರು.ನಿಮಗೆ ಕೇವಲ ಪೂಜಾ ಕೈಂಕರ್ಯ ಮತ್ತು ವಸತಿ ವ್ಯವಸ್ಥೆಗೆ ಅವಕಾಶ ನೀಡಿದೆ ಎಂದು ತಿಳಿಸಿದ್ದಾರೆ. ಮೊದಲು ನೀಡಿದ ಉಚ್ಚ ನ್ಯಾಯಾಲಯ ಆದೇಶ ಪಾಲಿಸಬೇಕು ಮತ್ತು ನೀವು ನೇಮಕ ಮಾಡಿದ ಸಿಬ್ಬಂದಿಯನ್ನು ಹೊರಗೆ ಕಳುಹಿಸುವಂತೆ ತಿಳಿಸಿದ್ದಾರೆ.
ಅಂಜನಾದ್ರಿ ಆಂಜನೇಯಸ್ವಾಮಿ ದೇಗುಲವು ಈಗ ಜಿಲ್ಲಾಡಳಿತ ನಿಯಂತ್ರಣಕ್ಕೆ ಪಡೆದಿದ್ದು, ನಿತ್ಯ ಯಥಾ ಪ್ರಕಾರ ಪೂಜೆ, ಪ್ರಸಾದ ವಿತರಣೆ ಕಾರ್ಯ ನಡೆಯುತ್ತದೆ ಎಂದು ತಹಸೀಲ್ದಾರ್ ವಿನಾಯಕ ಗೋಡಬೋಲೆ ತಿಳಿಸಿದ್ದಾರೆ.