ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ರಾಜ್ಯ ಸರಕಾರದ, ಜಿಲ್ಲಾಡಳಿತದ ಸಹಕಾರ ಅಗತ್ಯ.
ಕನ್ನಡಪ್ರಭ ವಾರ್ತೆ ಭಟ್ಕಳ
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ರಾಜ್ಯ ಸರಕಾರದ, ಜಿಲ್ಲಾಡಳಿತದ ಸಹಕಾರ ಅಗತ್ಯ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಕುರಿತು ಈಗಾಗಲೇ ಅನೇಕ ಬಾರಿ ಸಂಚರಿಸಿ ಅಲ್ಲಿನ ಕುಂದು ಕೊರತೆ ತಿಳಿದುಕೊಂಡಿದ್ದೇನೆ. ಈಗಾಗಲೇ ಭಟ್ಕಳದಲ್ಲಿ ಎರಡು ಕಡೆ ಹಾಗೂ ಅಂಕೋಲದ ವಿಠಲಘಾಟ್‌ನಲ್ಲಿ ಒಂದು ಕಡೆ ಅಂಡರ್‌ಪಾಸ್ ಕೇಂದ್ರ ಸರಕಾರಕ್ಕೆ ವಿಶೇಷ ಮನವಿ ಮಾಡಿ ನಿರ್ಮಾಣಕ್ಕೆ ಹಣ ಮಂಜೂರಿಯಾಗಿದ್ದು ಕಾಮಗಾರಿ ಪ್ರಾರಂಭವಾಗಿದೆ. ಗೋಕರ್ಣ ಕ್ರಾಸ್‌ನಲ್ಲಿ ಕೂಡಾ ಬೇಡಿಕೆ ಇದೆ ಅದನ್ನು ಸಹ ಮಂಜೂರಿ ಮಾಡಿಸುವ ಭರವಸೆ ಇದೆ. ಶರಾವತಿಯ ಹಳೆಯ ಸೇತುವೆಯನ್ನು ತೆಗೆದು ಹೊಸ ಸೇತುವೆ ನಿರ್ಮಾಣಕ್ಕೆ ಈಗಾಗಲೇ ಪ್ರಸ್ತಾವನೆ ಹೋಗಿದೆ. ಕಾಳಿ ನದಿಯ ಬಿದ್ದು ಹೋದ ಸೇತುವೆಯ ಅವಶೇಷ ತೆಗೆದು ಹೊಸ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಭಟ್ಕಳ ತಾಲೂಕಿನಲ್ಲಿಯೂ ಕೂಡಾ ವೆಂಕಟಾಪುರದಲ್ಲಿ ಶಿಥಿಲವಾದ ಹಳೆಯ ಸೇತುವೆಯನ್ನು ತೆಗೆದು ಹೊಸ ಸೇತುವೆ ನಿರ್ಮಾಣ ಮಾಡಲಾಗುವುದು. ಬಸ್ತಿಯಲ್ಲಿ ಹೊಸ ಸೇತುವೆ ನಿರ್ಮಾಣ ಕಾರ್ಯ ನಡೆದಿದೆ ಎಂದರು.
ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಗಳು, ಪುರಸಭೆಯೂ ಸೇರಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಇನ್ನಷ್ಟು ತ್ವರಿತವಾಗಿ ಸ್ಪಂದಿಸಬೇಕಾಗಿದೆ. ಜಿಲ್ಲಾಡಳಿತ, ತಾಲೂಕಾ ಆಡಳಿತ, ಪುರಸಭೆಯವರಿಂದಾಗಿ ವಿಳಂಬವಾಗುತ್ತಿದೆ. ಪ್ರಮುಖವಾಗಿ ಭಟ್ಕಳದಲ್ಲಿ ಗಟಾರ ಸಮಸ್ಯೆ ಅನಾವಶ್ಯಕವಾಗಿ ತರಲಾಗುತ್ತಿದ್ದು ಪುರಸಭೆಯ ಇದನ್ನು ತಕ್ಷಣ ಸರಿಪಡಿಸಕೊಡಬೇಕು. ಆಡಳಿತಾತ್ಮಕ ಕಾರ್ಯವನ್ನು ತ್ವರಿತವಾಗಿ ಮಾಡಿಕೊಟ್ಟರೆ ಹೆದ್ದಾರಿ ಕಾಮಗಾರಿ ಸುಗಮವಾಗಿ ನಡೆಯಲಿದೆ ಎಂದರು.ಭಟ್ಕಳದಲ್ಲಿ ರೈಲ್ವೆ ನಿಲ್ದಾಣದಲ್ಲಿ ₹೫೭ ಲಕ್ಷ ವೆಚ್ಚದಲ್ಲಿ ೨ನೇ ಪ್ಲಾಟ್‌ಫಾರಂ ಅಭಿವೃದ್ಧಿ ಕಾರ್ಯ ಆಗುತ್ತಿದೆ. ಮುರ್ಡೇಶ್ವರದಲ್ಲಿ ಶೌಚಾಲಯ ಅಭಿವೃದ್ಧಿಗೆ ₹೧೦ ಲಕ್ಷ ಮಂಜೂರಿಯಾಗಿದೆ. ಕೊಂಕಣ ರೈಲ್ವೆಗೆ ಅದರದ್ದೇ ಆದ ಸಮಸ್ಯೆ ಇದ್ದರೂ ಕೂಡಾ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್, ಸೋಮಣ್ಣ ಅವರ ಸಹಕಾರದಿಂದ ಹೆಚ್ಚಿನ ಅಭಿವೃದ್ಧಿ ಮಾಡಲಾಗುವುದು. ಒಂದೇ ಭಾರತ್ ರೈಲನ್ನು ಗೋವಾದಿಂದ ಬೆಂಗಳೂರಿಗೆ ಬಿಡುವ ಕುರಿತೂ ಬೇಡಿಕೆ ಇಡಲಾಗಿದ್ದು ಶೀಘ್ರ ಈಡೇರುವ ಭರವಸೆ ಇದೆ ಎಂದರು.
ಈ ಸಂದರ್ಭ ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ಎಸ್. ಹೆಗಡೆ, ಮಾಜಿ ಶಾಸಕ ಶಿವಾನಂದ ನಾಯ್ಕ, ಮಂಡಳ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಬಿಜೆಪಿ ಮಹಿಳಾ ಮೊರ್ಚಾ ಜಿಲ್ಲಾ ಅಧ್ಯಕ್ಷೆ ಶಿವಾನಿ ಶಾಂತಾರಾಮ, ಜಿಲ್ಲಾ ಕಾರ್ಯದರ್ಶಿ ಹಾಗೂ ಉತ್ಸವ ಸಮಿತಿ ಸಂಚಾಲಕ ಶ್ರೀಕಾಂತ ನಾಯ್ಕ ಮುಂತಾದವರಿದ್ದರು.