ಸಾರಾಂಶ
ಗೋಕರ್ಣ: ಮಹಾ ಶಿವರಾತ್ರಿಯಂದು ಹಿಂದಿನ ವರ್ಷದಂತೆ ಜಿಲ್ಲಾಡಳಿತ ವತಿಯಿಂದ ಕಾರ್ಯಕ್ರಮ ನಡೆಸುವುದಿದ್ದರೆ ಅದು ಗೋಕರ್ಣದಲ್ಲೇ ಆಗಬೇಕು. ಬೇರೆ ಸ್ಥಳದಲ್ಲಿ ನಡೆಯಬಾರದು. ಪರಶಿವನ ಮೂಲ ತಾಣದಲ್ಲಿಯೇ ನಡೆಯಬೇಕು ಎಂದು ಕುಮಟಾ- ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ತಿಳಿಸಿದರು.ಶನಿವಾರ ಸಂಜೆ ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ನೇತೃದಲ್ಲಿ ನಡೆದ ಶಿವರಾತ್ರಿ ಮಹೋತ್ಸವದ ಸಿದ್ದತಾ ಸಭೆಯಲ್ಲಿ ಮಾತನಾಡಿದರು. ಹಿಂದಿನ ವರ್ಷ ಮುರುಡೇಶ್ವರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಬಾರಿ ನನ್ನ ಕ್ಷೇತ್ರ ಪವಿತ್ರ ಸ್ಥಳದಲ್ಲೇ ಆಗಬೇಕು ಎಂದಾಗ ಇದಕ್ಕೆ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಸಹಮತ ಸೂಚಿಸಿ ಅದರಂತೆ ಸಭೆಯಲ್ಲಿ ನಿರ್ಣಯ ಕೈಗೊಂಡು ಠರಾವು ಮಾಡಲಾಯಿತು. ಫೆ. ೨೧ರಿಂದ ಫೆ. ೨೮ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಶಿವರಾತ್ರಿಗೆ ಬರುವ ಭಕ್ತರಿಗೆ ವಿವಿಧ ಕಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಬಗ್ಗೆ ಚರ್ಚೆ ನಡೆಯಿತು. ಕೋಟಿತೀರ್ಥ ಕಟ್ಟೆ, ರಥಬೀದಿ ಸೇರಿದಂತೆ ಪ್ರಮುಖ ಸ್ಥಳದಲ್ಲಿ ಕುಡಿಯುವ ನೀರನ್ನು ಇಡುವಂತೆ ಸೂಚಿಸಲಾಯಿತು.
ಬಸ್ ನಿಲ್ದಾಣದಲ್ಲಿ ನೀರು ಕಲುಷಿತಗೊಂಡಿರುವುದು, ಇಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿರುವುದು ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸೂಕ್ತ ಕ್ರಮಕ್ಕೆ ತಿಳಿಸಲಾಯಿತು. ಬಸ್ ನಿಲ್ದಾಣ, ಮುಖ್ಯ ಕಡಲತೀರ ಸೇರಿದಂತೆ ವಿವಿಧೆಡೆಯ ಸ್ವಚ್ಛತೆಯ ಬಗ್ಗೆ ನಿಗಾ ವಹಿಸಲು ಸೂಚಿಸಲಾಯಿತು. ಪ್ಲಾಸ್ಟಿಕ್ ನಿಷೇಧಿಸಲು ಉಪವಿಭಾಗಾಧಿಕಾರಿ ಸೂಚಿಸಿದಲ್ಲದೆ, ಬಳಕೆ ಕಂಡರೆ ದಂಡ ವಿಧಿಸಲು ತಿಳಿಸಿದರು.ಸಭೆಯಲ್ಲಿ ತಹಸೀಲ್ದಾರ್ ಸತೀಶ ಗೌಡ, ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ, ಉಪಾಧ್ಯಕ್ಷೆ ನಾದಿಲ್ ರೆಬೆಲ್ಲೂ ದಿನ್ನಿ, ಪಿಐ ವಸಂತ ಆಚಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಮೋಹನ ನಾಯ್ಕ, ಕರಾವಳಿ ಕಾವಲು ಪೊಲೀಸ್ ಪಡೆಯ ಪೊಲೀಸ್ ನಿರೀಕ್ಷಕರಾದ ಸಂಪತ್ ಇ.ಸಿ., ಗ್ರಾಪಂ ಸದಸ್ಯ ಮೋಹನ ಮೂಡಂಗಿ, ಪಾರ್ವತಿ ರಾಯ್ಕರ್, ರಮೇಶ ಪ್ರಸಾದ, ಸುಜಯ ಶೆಟ್ಟಿ, ಪ್ರಭಾಕರ ಪ್ರಸಾದ, ಮಹಾಬಲೇಶ್ವರ ಗೌಡ ಮತ್ತಿತರರು ಮಾತನಾಡಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಾಲಚಂದ್ರ ಪಟಗಾರ, ಕಾರ್ಯದರ್ಶಿ ಮಂಜುನಾಥ, ವಿನಾಯಕ ಸಿದ್ದಾಪುರ ನಿರ್ವಹಿಸಿದರು.
ಪ್ರವೇಶ ಪಾಸ್ ಇಲ್ಲಮಹಾಬಲೇಶ್ವರ ಮಂದಿರದಲ್ಲಿ ಶಿವರಾತ್ರಿಯಂದು ದೇವರ ದರ್ಶನಕ್ಕೆ ಯಾವುದೇ ಪಾಸ್ ನೀಡದಿರಲು ಸಭೆಯಲ್ಲಿ ನಿರ್ಣಯಿಸಲಾಗಿದ್ದು, ಕಳೆದ ವರ್ಷದಂತೆ ದರ್ಶನದ ವ್ಯವಸ್ಥೆ ಇರುತ್ತದೆ.