ಮರಳು ಸಾಗಾಟ ಅವ್ಯಾಹತ-ಗಪ್‌ಚುಪ್‌ ಕುಳಿತ ಜಿಲ್ಲಾಡಳಿತ

| Published : Nov 20 2024, 12:32 AM IST

ಮರಳು ಸಾಗಾಟ ಅವ್ಯಾಹತ-ಗಪ್‌ಚುಪ್‌ ಕುಳಿತ ಜಿಲ್ಲಾಡಳಿತ
Share this Article
  • FB
  • TW
  • Linkdin
  • Email

ಸಾರಾಂಶ

ಹೂವಿನಹಡಗಲಿ ತಾಲೂಕಿನ ತುಂಗಭದ್ರಾ ನದಿಯಲ್ಲಿ ಮರಳು ತೆರೆದ ಖಜಾನೆಯಂತಿದೆ. ಇದನ್ನರಿತ ಅಕ್ರಮ ಮರಳು ದಂಧೆಕೋರರು ಜಿಲ್ಲೆಗಳ ಗಡಿ ಮೀರಿ, ನಿರಂತರ ಮರಳು ಲೂಟಿಗೆ ನಿಂತಿದ್ದಾರೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ:ತಾಲೂಕಿನ ತುಂಗಭದ್ರಾ ನದಿಯಲ್ಲಿ ಮರಳು ತೆರೆದ ಖಜಾನೆಯಂತಿದೆ. ಇದನ್ನರಿತ ಅಕ್ರಮ ಮರಳು ದಂಧೆಕೋರರು ಜಿಲ್ಲೆಗಳ ಗಡಿ ಮೀರಿ, ನಿರಂತರ ಮರಳು ಲೂಟಿಗೆ ನಿಂತಿದ್ದಾರೆ. ಮರಳು ಸಾಗಾಟ ಅವ್ಯಾಹತವಾಗಿ ನಡೆದರೂ ವಿಜಯನಗರ ಮತ್ತು ಹಾವೇರಿ ಜಿಲ್ಲಾಡಳಿತ ಮಾತ್ರ ಜಂಟಿ ದಾಳಿಗೆ ಮುಂದಾಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ನದಿ ತುಂಬೆಲ್ಲ ಬಂಬುಗಳಿಂದ ಮಾಡಿರುವ ತೆಪ್ಪಗಳು, ಮರಳು ತುಂಬಿ ನದಿ ದಡಕ್ಕೆ ಸಾಗಿಸಲು 100ಕ್ಕೂ ಹೆಚ್ಚು ಕಬ್ಬಿಣದ ತೆಪ್ಪಗಳಿವೆ. ನೂರಾರು ಕಾರ್ಮಿಕರು ಎಡದಂಡೆ (ಹಾವೇರಿ ಜಿಲ್ಲೆ) ಭಾಗದಲ್ಲಿ ಈ ಹಿಂದೆ ಮರಳು ಲೂಟಿ ಮಾಡಿ ದೊಡ್ಡ ಪ್ರಮಾಣದ ಗುಂಡಿಗಳನ್ನು ನಿರ್ಮಾಣ ಮಾಡಿದ್ದಾರೆ. ಇದರಿಂದ ಮರಳಿನ ಪ್ರಮಾಣ ಕಡಿಮೆ ಇದೆ. ಆದರೆ, ಬಲದಂಡೆ (ವಿಜಯನಗರ ಜಿಲ್ಲೆ) ಭಾಗದಲ್ಲಿ ಸಾಕಷ್ಟು ಮರಳು ಸಂಗ್ರಹವಾಗಿದೆ. ಜಿಲ್ಲೆಗಳ ಗಡಿ ಮೀರಿ ಲೂಟಿಗೆ ಮುಂದಾಗಿದ್ದಾರೆ.

ಸಾವಿನ ಜತೆ ಕಾರ್ಮಿಕರ ಸರಸ

ತುತ್ತಿನ ಚೀಲ ತುಂಬಿಸಿಕೊಳ್ಳಲು ದೂರದ ಬಿಹಾರ ಹಾಗೂ ಉತ್ತರ ಪ್ರದೇಶ ರಾಜ್ಯಗಳಿಂದ ನೂರಾರು ಕೂಲಿ ಕಾರ್ಮಿಕರನ್ನು ಕರೆ ತಂದು ಅಕ್ರಮ ಮರಳು ದಂಧೆಕೋರರು ಹಾಡುಹಗಲೇ ಮರಳು ಲೂಟಿ ಮಾಡಿ ದಿಢೀರ್‌ ಶ್ರೀಮಂತರಾಗುತ್ತಿದ್ದಾರೆ. ಈ ಹಿಂದೆ ಮರಳು ಟಾಸ್ಕ್‌ಪೋರ್ಸ್‌ ಸಮಿತಿಯ ಅಧಿಕಾರಿಗಳು ದಾಳಿ ಮಾಡಿದಾಗ, ಕೂಲಿ ಕಾರ್ಮಿಕರು ತಪ್ಪಿಸಿಕೊಳ್ಳಲು ಆಗದೇ ನೀರಲ್ಲೇ ಸಾವನ್ನಪ್ಪಿರುವ ಘಟನೆಗಳಿವೆ. ಸದ್ಯ ನದಿಯಲ್ಲಿ ಭಾರಿ ಪ್ರಮಾಣದ ನೀರಿದೆ. ಸಾಕಷ್ಟು ಆಳವಿರುವ ಕಡೆಗಳಲ್ಲಿ ನದಿ ನೀರಿನಲ್ಲಿ ಮುಳುಗಿ, ತಳದಲ್ಲಿರುವ ಮರಳನ್ನು ಎತ್ತುವ ಸಾಹಸ ಮಾಡುತ್ತಿರುವ ಕಾರ್ಮಿಕರು, ಸಾವಿನ ಜತೆಗೆ ಸರಸವಾಡುತ್ತಿದ್ದಾರೆ.

ಅಧಿಕಾರಿಗಳಿಗೂ ಅಪಾಯ

ಮರಳು ಅಕ್ರಮ ಸಾಗಾಟದ ಮೇಲೆ ಈ ಹಿಂದೆ ಅಧಿಕಾರಿಗಳು ದಾಳಿ ಮಾಡಿದ್ದರು. ಕಾರ್ಮಿಕರು ತೆಪ್ಪದಲ್ಲಿ ನದಿ ನಡುಮಧ್ಯೆ ನಿಂತಿದ್ದರು. ಪೊಲೀಸರು ಹಾಗೂ ಈಜುಗಾರರು ಅವರನ್ನು ಹಿಡಿಯಲು ಹೋದಾಗ ಕಲ್ಲು ತೂರಾಟ ಮಾಡಿ ಹಲ್ಲೆ ಮಾಡಿದ್ದರು. ನದಿಯಲ್ಲಿ ನೀರಿನ ಆಳ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರಾಣಾಪಾಯದ ಭಯದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ನದಿಯಲ್ಲಿ ಇಳಿಯಲು ಹಿಂದೇಟು ಹಾಕುತ್ತಿದ್ದಾರೆ.

ನದಿ ಪಾತ್ರದಲ್ಲಿ ಮರಳು ಲೂಟಿಯಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ದಾಳಿಗೆ ಮುಂದಾಗಿಲ್ಲ. ಇದರಿಂದ ನದಿ ತೀರದ ಜನರು ಅಧಿಕಾರಿಗಳ ಮೇಲೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ.

ಮಾಹಿತಿ ನೀಡಿದವರಿಗೆ ಧಮ್ಕಿ

ಮರಳು ಅಕ್ರಮ ದಂಧೆ ಬಹಳಷ್ಟು ಅಪಾಯಕಾರಿಯಾಗಿ ಬೆಳೆದು ನಿಂತಿದೆ. ತೆಪ್ಪದಲ್ಲಿ ಮರಳು ಲೂಟಿ ಮಾಡುವಾಗ, ನದಿ ತೀರಕ್ಕೆ ಹೋದವರಿಗೆ ಧಮ್ಕಿ ಹಾಕಿರುವ ಪ್ರಸಂಗವೂ ನಡೆದಿದೆ. ಅಕ್ರಮ ಮರಳು ದಂಧೆಕೋರರು ತಮ್ಮ ರಕ್ಷಣೆಗಾಗಿ ಕೆಲವರಿಗೆ ಹಣ ಕೊಟ್ಟು ರಸ್ತೆಯಲ್ಲಿ ಗಸ್ತು ತಿರುಗಿಸುತ್ತಿದ್ದಾರೆ. ಅಧಿಕಾರಿಗಳು ನದಿ ತೀರಕ್ಕೆ ಬಂದ ಕೂಡಲೇ ಮಾಹಿತಿ ರವಾನೆಯಾಗಿ ನದಿಯಿಂದ ತೆಪ್ಪಗಳು ಹಾಗೂ ಕಾರ್ಮಿಕರು ಪರಾರಿಯಾಗುತ್ತಿದ್ದಾರೆ.

ಟಾಸ್ಕ್‌ಫೋರ್ಸ್‌ ಹೆಸರಿಗೆ ಮಾತ್ರ

ಮರಳು ಅಕ್ರಮ ದಂಧೆಗೆ ಕಡಿವಾಣ ಹಾಕಲು ತಾಲೂಕು ಮಟ್ಟದಲ್ಲಿ ಟಾಸ್ಕ್‌ಫೋರ್ಸ್‌ ಸಮಿತಿ ಇದೆ. ಸಹಾಯಕ ಆಯುಕ್ತರು, ತಹಸೀಲ್ದಾರ್‌, ಗಣಿ ಮತ್ತು ಭೂ ವಿಜ್ಞಾನ, ಪೊಲೀಸ್‌ ಸೇರಿದಂತೆ 13 ಇಲಾಖೆಗಳ ಅಧಿಕಾರಿಗಳಿದ್ದಾರೆ. ಇಷ್ಟಿದ್ದರೂ ಅಕ್ರಮ ಮರಳು ದಂಧೆ ತಡೆಯಲು ಆಗುತ್ತಿಲ್ಲ, ಹೆಸರಿಗೆ ಮಾತ್ರ ಟಾಸ್ಕ್‌ಪೋರ್ಸ್‌ ಎನ್ನುವಂತಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು, ಬ್ಯಾಲಹುಣ್ಸಿ ಬಳಿ ನದಿ ತೀರಕ್ಕೆ ಹೋದಾಗ, ಕಾರ್ಮಿಕರು ತೆಪ್ಪಗಳ ಸಮೇತ ಹಾವೇರಿ ಕಡೆಗೆ ಪರಾರಿಯಾದರು. ವಿಜಯನಗರ-ಹಾವೇರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಹಾವೇರಿ ಭಾಗದ ಕಡೆಗೆ ದಾಳಿಗೆ ಮುಂದಾಗಿದ್ದಾರೆ. ದಾಳಿ

ಮೈಲಾರ ಸೇರಿದಂತೆ ಇನ್ನಿತರ ನದಿ ತೀರದ ಪ್ರದೇಶಕ್ಕೆ ಭೇಟಿ ನೀಡಿ, ಅಕ್ರಮ ಮರಳು ದಂಧೆ ಮೇಲೆ ಕ್ರಮ ವಹಿಸಲು ಮುಂದಾಗಿದ್ದೇವೆ. ಹಾವೇರಿ-ವಿಜಯನಗರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾವೇರಿ ಭಾಗದಿಂದ ದಾಳಿ ಮಾಡುತ್ತಿದ್ದಾರೆ.

ಸಂತೋಷಕುಮಾರ್‌, ತಹಸೀಲ್ದಾರ್‌, ಹೂವಿನಹಡಗಲಿ.