ಹಿಂದೂ ಮಹಾಗಣಪತಿ ವಿಸರ್ಜನೆಗೆ ಜಿಲ್ಲಾಡಳಿತ ಕಟ್ಟುನಿಟ್ಟು ಕ್ರಮ

| Published : Sep 03 2025, 01:00 AM IST

ಹಿಂದೂ ಮಹಾಗಣಪತಿ ವಿಸರ್ಜನೆಗೆ ಜಿಲ್ಲಾಡಳಿತ ಕಟ್ಟುನಿಟ್ಟು ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಗಣೇಶ ವಿಸರ್ಜನಾ ದಿನ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ನಗರದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿ ವಿಸರ್ಜನೆ ಸೆ.13 ರಂದು ನೆರವೇರಲಿದ್ದು, ನಡೆಯಲಿರುವ ಶೋಭಾಯಾತ್ರೆಯಲ್ಲಿ 4 ಲಕ್ಷಕ್ಕೂ ಹೆಚ್ಚಿನ ಜನ ಸೇರುವ ನಿರೀಕ್ಷೆ ಇರುವುದರಿಂದ ಪರಿಸ್ಥಿತಿಯನ್ನು ನಿಭಾಯಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿಂದೂ ಮಹಾಗಣಪತಿ ವಿಸರ್ಜನೆ ಕಾರ್ಯ ಸುಗಮ ಹಾಗೂ ವ್ಯವಸ್ಥಿತ ರೀತಿಯಲ್ಲಿ ಜರುಗುವಂತಾಗಬೇಕು, ಯಾವುದೇ ಅವಘಡಗಳಿಗೆ ಅವಕಾಶವಾಗದಂತೆ ಸಂಬಂಧಿಸಿದ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.

ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಜತೆಗೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲು ಅಗ್ನಿಶಾಮಕ, ಆರೋಗ್ಯ, ಬೆಸ್ಕಾಂ, ನಗರಸಭೆ, ಗೃಹರಕ್ಷಕದಳ ಮತ್ತಿತರ ಅಗತ್ಯ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ತುರ್ತು ಸ್ಪಂದನಾ ತಂಡವನ್ನು ನೇಮಿಸಲಾಗುವುದು. ಇವರ ಜೊತೆಗೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಹಾಗೂ ವಿವಿಧ ತಾಲೂಕುಗಳ ತಹಸೀಲ್ದಾರರನ್ನು ಕೂಡ ಸಮನ್ವಯಕ್ಕಾಗಿ ನಿಯೋಜಿಸಲಾಗುವುದು. ಯಾವುದೇ ಅವಘಡಗಳು ಸಂಭವಿಸದಂತೆ ಪೂರ್ವ ಮುನ್ನೆಚ್ಚರಿಕಾ ಕ್ರಮಗಳನ್ನು ಈ ತಂಡ ಕೈಗೊಳ್ಳಬೇಕು, ಇದರ ಜತೆಗೆ ಒಂದು ವೇಳೆ ಯಾವುದೇ ವಿಪತ್ತಿನ ಪರಿಸ್ಥಿತಿ ಬಂದರೂ, ನಿರ್ವಹಣೆಗೆ ಸಿದ್ಧರಿರುವ ರೀತಿ ಕಾರ್ಯ ಯೋಜನೆ ರೂಪಿಸಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಡಿಜೆ ಸೌಂಡ್ ಸಿಸ್ಟಂ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ನಿಗದಿತ ಡೆಸಿಬಲ್ ಸಾಮರ್ಥ್ಯ ಮೀರಿದ ಧ್ವನಿ ವರ್ಧಕಗಳ ಬಳಕೆಗೆ ಅವಕಾಶವಿಲ್ಲ. ಪೊಲೀಸ್ ಇಲಾಖೆಯವರು ಎಚ್ಚರಿಕೆ ವಹಿಸಿ, ಉಲ್ಲಂಘನೆ ಕಂಡುಬಂದಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.

ಮೆರವಣಿಗೆ ಸಾಗುವ ದಾರಿಯಲ್ಲಿ ಅಂದು ಸಂಪೂರ್ಣವಾಗಿ ವಾಹನಗಳ ಸಂಚಾರ ನಿಷೇಧಿಸಲಾಗುವುದು. ಒಂದು ದಿನ ಮುಂಚಿತವಾಗಿಯೇ ಎಲ್ಲೆಡೆ ಬ್ಯಾರಿಕೇಡ್‍ಗಳನ್ನು ನಿರ್ಮಿಸಿಕೊಳ್ಳಬೇಕು. ಮೆರವಣಿಗೆ ಮಾರ್ಗದಲ್ಲಿನ ಮಾಧ್ಯಮಿಕ ಶಾಲಾ ಮೈದಾನ, ಪ್ರವಾಸಿ ಮಂದಿರ, ತ.ರಾಸು ರಂಗಮಂದಿರ, ಮತ್ತಿತರ ಸರ್ಕಾರಿ ಕಟ್ಟಡಗಳನ್ನು ಗುರುತಿಸಿ, ವಶಕ್ಕೆ ಪಡೆದುಕೊಂಡಿರಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ ಬಂಡಾರು ಮಾತನಾಡಿ, ಜನರ ದಟ್ಟಣೆಯಿಂದಾಗಿ ಕಾಲ್ತುಳಿತ, ವೈದ್ಯಕೀಯ ತುರ್ತು ಪರಿಸ್ಥಿತಿ, ವಿದ್ಯುತ್ ಅವಘಡ ಮತ್ತು ಅಗ್ನಿ ಅವಘಡಗಳು ಸೇರಿದಂತೆ ಅಹಿತಕರ ಘಟನೆಗಳು ಸಂಭವಿಸಿದ ಸಂದರ್ಭದಲ್ಲಿ ಪೊಲೀಸ್ ಇಲಾಖೆ, ಜಿಲ್ಲಾಡಳಿತ, ತುರ್ತು ಸೇವೆಯ ಇಲಾಖೆಗಳು ಹಾಗೂ ಸ್ವಯಂ ಸೇವಕರು, ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ತಂಡಗಳ ರಚನೆ ಮಾಡಿ ಈಗಾಗಲೇ ಅಗತ್ಯ ಪೂರ್ವ ಸಿದ್ಧತೆ ಕೈಗೊಳ್ಳಲಾಗುತ್ತಿದೆ.

ಹಿಂದೂ ಮಹಾಗಣಪತಿ ಮೆರವಣಿಗೆ ಸಾಗುವ ದಾರಿಯಲ್ಲಿನ ಪ್ರವಾಸಿ ಮಂದಿರ, ಎಸ್‍ಬಿಐ ಬ್ಯಾಂಕ್ ವೃತ್ತ, ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕನಕ ವೃತ್ತ ಸೇರಿದಂತೆ ಅಗತ್ಯ ಇರುವ ಕಡೆಗಳಲ್ಲಿ ತಾತ್ಕಾಲಿಕ ವೈದ್ಯಕೀಯ ಸೇವೆ ಕೇಂದ್ರ ತೆರೆಯಬೇಕು, ಇಲ್ಲಿ ತುರ್ತು ನಿರ್ವಹಣೆ ಹಾಗೂ ಪ್ರಾಥಮಿಕ ಚಿಕಿತ್ಸೆ ಲಭ್ಯವಾಗುವ ರೀತಿ ಆ್ಯಂಬುಲೆನ್ಸ್ ಸಹಿತ ವೈದ್ಯರು ಹಾಗೂ ಶುಶ್ರೂಷಕರನ್ನು ನಿಯೋಜಿಸಬೇಕು, ಸಾಕಷ್ಟು ಅಗತ್ಯ ಔಷಧಿ ಲಭ್ಯವಿರಬೇಕು. ಬ್ಯಾರಿಕೇಡ್ ಹಾಗೂ ವಾಚ್ ಟವರ್‌ಗಳನ್ನು ಲೋಕೋಪಯೋಗಿ ಇಲಾಖೆ ಪರಿಶೀಲಿಸಿ ದೃಢೀಕರಣ ನೀಡಬೇಕು. ನಗರಸಭೆ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಕೈಗೊಳ್ಳಬೇಕು. ಮೆರವಣಿಗೆ ಮಾರ್ಗದಲ್ಲಿ ಯಾವುದೇ ಕಟ್ಟಡ ಕಾಮಗಾರಿ ನಡೆಯುತ್ತಿದ್ದಲ್ಲಿ, ತಾತ್ಕಾಲಿವಾಗಿ ಅಲ್ಲಿನ ಕಲ್ಲು ಮತ್ತು ಮಣ್ಣನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು. ಚಂದ್ರವಳ್ಳಿ, ವಿಸರ್ಜನಾ ಸ್ಥಳಗಳಲ್ಲಿನ ರಸ್ತೆ ಅಕ್ಕಪಕ್ಕದ ಮರಗಳು ರಸ್ತೆಗೆ ಬಾಗುವಂತಿದ್ದಲ್ಲಿ, ರೆಂಬೆ ಕೊಂಬೆಗಳನ್ನು ತೆರವುಗೊಳಿಸಬೇಕು. ಕಡ್ಡಾಯವಾಗಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ, ಅದರ ಅನುಷ್ಠಾನ ಸಮರ್ಪಕವಾಗಿ ಆಗಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಶಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೇ ಸಿಂಘೆ, ಕೆಎಸ್‍ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್, ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಇದ್ದರು.