ಇನಾಂವೀರಾಪುರದಲ್ಲಿ ನಡೆದಿದ್ದ ಮರ್ಯಾದಾ ಹತ್ಯೆಯಿಂದಾಗಿ ಮನೆಯ ಮಾಲೀಕ ಪ್ರಕಾಶಗೌಡ ಪಾಟೀಲ ಹಾಗೂ ಆ ಮನೆಯ ಗಂಡಸರೆಲ್ಲರೂ ಜೈಲು ಪಾಲಾಗಿದ್ದಾರೆ. ಹೆಣ್ಮಕ್ಕಳು ಹಾಗೂ ಮಕ್ಕಳು ಊರು ಬಿಟ್ಟು ನೆಂಟರಿಷ್ಟರ ಮನೆ ಸೇರಿದ್ದಾರೆ. ಇದರಿಂದಾಗಿ ಅವರ ಮನೆಯಲ್ಲಿನ ಜಾನುವಾರುಗಳಿಗೆ ಕತ್ತಲ ಕೋಣೆಯೇ ದಿಕ್ಕಾಗಿತ್ತು.
ಹುಬ್ಬಳ್ಳಿ:
ಮರ್ಯಾದಾ ಹತ್ಯೆ ನಂತರ ಕತ್ತಲ ಕೋಣೆಯಲ್ಲಿದ್ದ ಜಾನುವಾರುಗಳಿಗೆ ಇದೀಗ ಮೇವು-ನೀರು ಸಮರ್ಪಕ ಸಿಗುವಂತೆ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿದೆ.ಇನಾಂವೀರಾಪುರದಲ್ಲಿ ನಡೆದಿದ್ದ ಮರ್ಯಾದಾ ಹತ್ಯೆಯಿಂದಾಗಿ ಮನೆಯ ಮಾಲೀಕ ಪ್ರಕಾಶಗೌಡ ಪಾಟೀಲ ಹಾಗೂ ಆ ಮನೆಯ ಗಂಡಸರೆಲ್ಲರೂ ಜೈಲು ಪಾಲಾಗಿದ್ದಾರೆ. ಹೆಣ್ಮಕ್ಕಳು ಹಾಗೂ ಮಕ್ಕಳು ಊರು ಬಿಟ್ಟು ನೆಂಟರಿಷ್ಟರ ಮನೆ ಸೇರಿದ್ದಾರೆ. ಇದರಿಂದಾಗಿ ಅವರ ಮನೆಯಲ್ಲಿನ ಜಾನುವಾರುಗಳಿಗೆ ಕತ್ತಲ ಕೋಣೆಯೇ ದಿಕ್ಕಾಗಿತ್ತು.
2 ಹಸು, 2 ಎತ್ತು, 2 ಕರು ಸೇರಿದಂತೆ 6 ಜಾನುವಾರು ಆ ಮನೆಯಲ್ಲಿವೆ. ದನದ ಕೊಟ್ಟಿಗೆಯ ಬಾಗಿಲಿಗೆ ಬೀಗ ಜಡಿಯಲಾಗಿತ್ತು. ಕತ್ತಲ ಕೋಣೆಯಲ್ಲಿದ್ದ ಆ ಜಾನುವಾರುಗಳಿಗೆ ದೇಖರೇಕಿಗೆ ಯಾರೊಬ್ಬರೂ ಇರಲಿಲ್ಲ. ಹೀಗಾಗಿ ಜೈಲಲ್ಲಿ ಮಾಲೀಕ, ಕತ್ತಲಲ್ಲಿ ಜಾನುವಾರು! ಎಂಬ ಶೀರ್ಷಿಕೆಯಲ್ಲಿ ಕನ್ನಡಪ್ರಭ ಜ. 8ರಂದು ವಿಶೇಷ ವರದಿ ಪ್ರಕಟಿಸಿತ್ತು.ಇದನ್ನು ಗಮನಿಸಿದ ಜಿಲ್ಲಾಡಳಿತವು ತಹಸೀಲ್ದಾರ ಮಜ್ಜಗಿ, ತಾಪಂ ಇಒ ರಾಮಚಂದ್ರ ಹೊಸಮನಿ ಹಾಗೂ ಪಶುಸಂಗೋಪನೆ ಹಾಗೂ ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ. ಎಸ್.ವಿ.ಸಂತಿ ಅವರಿಗೆ ಕ್ರಮಕೈಗೊಳ್ಳಲು ಸೂಚನೆ ನೀಡಿತ್ತು. ಒಂದು ಜಾನುವಾರಿಗೆ ಆರೋಗ್ಯ ಸರಿಯಿರಲಿಲ್ಲ. ಅದಕ್ಕೆ ಪಶು ವೈದ್ಯಕೀಯ ಇಲಾಖೆಯಿಂದ ಅಗತ್ಯ ಔಷಧೋಪಚಾರ ಮಾಡಲಾಗಿದೆ.
ದ್ಯಾಮಣ್ಣ ನೇಮಕ:ಬಳಿಕ ಮನೆ ಮಾಲೀಕ ಪ್ರಕಾಶಗೌಡ ಪಾಟೀಲ ಅವರ ಸಂಬಂಧಿಕರ ಸಲಹೆ ಮೇರೆಗೆ ಅದೇ ಊರಿನ ದ್ಯಾಮಣ್ಣ ವಾಲೀಕಾರ ಅವರಿಗೆ ಜಾನುವಾರುಗಳ ದೇಖರೇಕಿಗೆ ನೇಮಿಸಲಾಗಿದೆ. ಅಗತ್ಯ ಸಂಬಳ ನೀಡಲಾಗುವುದು ಎಂದು ಅಧಿಕಾರಿ ವರ್ಗ ತಿಳಿಸಿದೆ. ಅದರಂತೆ ಅವರು ಒಪ್ಪಿಕೊಂಡಿದ್ದಾರೆ. ಒಂದು ವೇಳೆ ಅವರಿಗೆ ನೋಡಿಕೊಳ್ಳಲು ಸಾಧ್ಯವಾಗದಿದ್ದಲ್ಲಿ ಮದನಬಾವಿಯಲ್ಲಿರುವ ಸರ್ಕಾರಿ ಗೋಶಾಲೆಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಪಂ ಪಿಡಿಒಗೂ ಆಗಾಗ ಜಾನುವಾರುಗಳ ಪರಿಸ್ಥಿತಿ ಅವಲೋಕಿಸುವಂತೆ ಸೂಚನೆ ನೀಡಿದೆ ಜಿಲ್ಲಾಡಳಿತ.ಜಾನುವಾರು ನೋಡಿಕೊಳ್ಳಲು ಸ್ಥಳೀಯರು ತಯಾರಾಗಿದ್ದರು. ಆದರೆ, ಅವರಲ್ಲಿ ಭಯವಿತ್ತು. ಜಿಲ್ಲಾಡಳಿತ ಅವರೊಂದಿಗೆ ಮಾತನಾಡಿ ಅವರಲ್ಲಿದ್ದ ಭಯ ಹೋಗಲಾಡಿಸಿದೆ. ಜಾನುವಾರು ನೋಡಿಕೊಳ್ಳಲು ಒಬ್ಬರನ್ನು ನೇಮಿಸಲಾಗಿದೆ.
ದಿವ್ಯಪ್ರಭು, ಜಿಲ್ಲಾಧಿಕಾರಿ