ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ವಿಶ್ವ ವಿದ್ಯಾಲಯ ಮುಚ್ಚುವುದು ಕೈಬಿಡಬೇಕು, ಸಿ ಅಂಡ್ ಡಿ ಗೊಂದಲ, ಪರಿಶಿಷ್ಟರ ಮೀಸಲು ಹಣ ಉಚಿತ ಭಾಗ್ಯಗಳಿಗೆ ಬಳಕೆ ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿಯಿಂದ ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಗುರುವಾರದಿಂದ ಅಹೋರಾತ್ರಿ ಪ್ರತಿಭಟನೆ ಆರಂಭವಾಗಿದೆ.ಕೊಡಗು ವಿವಿ ರದ್ದುಗೊಳಿಸುವ ಸರ್ಕಾರದ ನಿರ್ಧಾರ ಖಂಡನೀಯ, ಕೂಡಲೇ ಸಿ ಅಂಡ್ ಡಿ ಜಾಗದಲ್ಲಿನ ಗೊಂದಲ ಪರಿಹರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭ ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ ಕೊಡಗು ವಿಶ್ವ ವಿದ್ಯಾಲಯ ಒಂದೆರಡು ವರ್ಷದಲ್ಲಿ ಸಿಕ್ಕಿರುವುದು ಅಲ್ಲ. ನಾನು ಶಾಸಕನಾಗಿ ಆಯ್ಕೆಯಾದ ಸಂದರ್ಭದಲ್ಲಿ ನಮ್ಮ ಜಿಲ್ಲೆಗೆ ಒಂದು ವಿವಿ ಬೇಕೆಂದು ಅಂದೇ ಬೇಡಿಕೆ ಇಟ್ಟಿದ್ದೆ. ಸುಮಾರು 20 ವರ್ಷಗಳಿಂದ ಪ್ರಯತ್ನ ಮಾಡಿದ್ದೇವೆ. ನಾವು ಘೋಷಣೆ ಮಾಡಿದ ವಿವಿಯನ್ನು ಅನುದಾನದ ನೆಪದಲ್ಲಿ ಕಾಂಗ್ರೆಸ್ ಸರ್ಕಾರ ಮುಚ್ಚುವ ಹುನ್ನಾರ ನಡೆಸುತ್ತಿದ್ದು, ಮಾ.11ರಂದು ಕೊಡಗು ಬಂದ್ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದರು.ಇಡೀ ರಾಜ್ಯದಲ್ಲಿ ಕೊಡಗಿನಲ್ಲಿ ಮಾತ್ರ ವಿವಿಗೆ ಸ್ವಂತ ಜಾಗ, ಕಟ್ಟಡ ಸೇರಿ ಹಲವು ವ್ಯವಸ್ಥೆಗಳಿದೆ. ಬಡ ಮಕ್ಕಳು ಹೆಚ್ಚಾಗಿ ಕೊಡಗು ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಎರಡು ವರ್ಷವಾದರೂ ಕಾಂಗ್ರೆಸ್ ಸರ್ಕಾರದಿಂದ ಚಿಕ್ಕಾಸು ಹಣವನ್ನು ನೀಡಿಲ್ಲ. ನಾವು ಸಿ ಎಸ್ ಆರ್ ಫಂಡ್ ಮೂಲಕ ವಿವಿ ನಡೆಸುವ ಕೆಲಸ ಮಾಡುತ್ತಿದ್ದೇವೆ. ಬಡವರ ವಿದ್ಯೆಗೆ ಕುತ್ತು ತರುವ ಕೆಲಸ ಮಾಡಬೇಡಿ ಎಂದು ಒತ್ತಾಯಿಸಿದರು.
ಕೊಡಗು ವಿವಿಯಲ್ಲಿ ಸಾವಿರಾರು ಮಂದಿ ವಿದ್ಯಾರ್ಥಿಗಳು ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದಾರೆ. ರಾಜ್ಯದ ಎಲ್ಲ ವಿವಿಗಿಂತ ನಮ್ಮ ವಿವಿಯಲ್ಲಿ ಮೊದಲು ಫಲಿತಾಂಶ ಮಾಡಲಾಗಿದೆ. ರಾಜ್ಯದ ಹೊಸ ವಿಶ್ವ ವಿದ್ಯಾಲಯಕ್ಕೆ ಅನುದಾನ ನೀಡದ ಸರ್ಕಾರ ಆಡಳಿತದಲ್ಲಿ ಇರುವುದು ವ್ಯರ್ಥ ಎಂದು ಹೇಳಿದರು.ಕೊಡಗು ವಿವಿ ಬಗ್ಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಜಿಲ್ಲೆಯ ಶಾಸಕರು ಗಪ್ ಚುಪ್ ಆಗಿದ್ದಾರೆ. ಮಡಿಕೇರಿ ಶಾಸಕರು ಡಿಕೆ ಶಿವಕುಮಾರ್ ಅವರೊಂದಿಗೆ ಆತ್ಮೀಯರಾಗಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ. ಆದರೆ ವಿವಿ ಉಳಿಸುವ ಪ್ರಯತ್ನ ಕಾಣುತ್ತಿಲ್ಲ ಎಂದು ಆರೋಪಿಸಿದರು.
ಇದರಿಂದ ನಾವು ತಂದ ಕೊಡಗು ವಿವಿ ಸೇರಿದಂತೆ ಮುಂದಿನ ದಿನಗಳಲ್ಲಿ ಸೈನಿಕ ಶಾಲೆ, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು ಮುಚ್ಚುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.ಸಿ ಅಂಡ್ ಡಿ ಲ್ಯಾಂಡ್ ಜಾಗದಲ್ಲಿ ಬಡವರು ತೋಟ, ಮನೆ ಮಾಡಿಕೊಂಡಿದ್ದಾರೆ. ಆದರೆ ಈ ಜಾಗವನ್ನು ಅರಣ್ಯ ಎಂದು ಈಶ್ವರ್ ಖಂಡ್ರೆ ಅದೇಶ ಮಾಡಿದ್ದಾರೆ. ಈ ಆದೇಶವನ್ನು ಹಿಂಪಡೆಯರಿ ಎಂದು ಆಗ್ರಹಿಸಿದ ರಂಜನ್, ನಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ 2.5 ಲಕ್ಷ ಹೆಕ್ಟೇರ್ ಜಾಗವನ್ನು ಹಿಂಪಡೆದಿದ್ದೇವೆ. ಆದರೆ ಈಗ ಅಕ್ರಮ ಸಕ್ರಮದಲ್ಲಿ ಒಬ್ಬರಿಗೂ ಹಕ್ಕುಪತ್ರ ನೀಡಿಲ್ಲ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ ಮಾತನಾಡಿ ಕೊಡಗು ಜಿಲ್ಲೆ ಸಣ್ಣ ಜಿಲ್ಲೆಯಾದರೂ ತೆರಿಗೆ ಪಾವತಿಯಲ್ಲಿ ಮುಂದಿದೆ. ಆದರೆ ಸಾಕಷ್ಟು ಸಮಸ್ಯೆಗಳು ಜಿಲ್ಲೆಯಲ್ಲಿದೆ. ಕೊಡಗು ವಿಶ್ವ ವಿದ್ಯಾಲಯ ಬಡವರು, ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದರಿಂದ ಕೊಡಗಿಗೆ ಪ್ರತ್ಯೇಕ ವಿಶ್ವ ವಿದ್ಯಾಲಯ ತರುವ ಕೆಲಸ ಮಾಡಿದ್ದರು. ಆದರೆ ಈಗ ರಾಜ್ಯದ 9 ವಿವಿಗಳನ್ನು ಮುಚ್ಚುವ ನಿರ್ಧಾರ ಮಾಡಲಾಗಿದೆ. ರು. 5 ಕೋಟಿ ಅನುದಾನ ನೀಡಲು ಸಾಧ್ಯವಿಲ್ಲ ಎಂದರೆ ಈ ಸರ್ಕಾರ ಅಧಿಕಾರಲ್ಲಿರಬೇಕಾ ಎಂದು ಪ್ರಶ್ನಿಸಿದರು.ಕೊಡಗು ವಿವಿ ಸ್ಥಗಿತ ಮಾಡಿ ಬೇರೆ ವಿವಿಯೊಂದಿಗೆ ವಿಲೀನ ಮಾಡಬಾರದು ಎಂದು ಅಧಿವೇಶನದಲ್ಲಿ ಘೋಷಣೆಯಾಗಬೇಕೆಂದು ಒತ್ತಾಯಿಸಿದರು.
ಪರಿಶಿಷ್ಟ ವರ್ಗದ ಸುಮಾರು 25 ಸಾವಿರ ಕೋಟಿ ಅನುದಾನವನ್ನು ಸ್ಥಗಿತ ಮಾಡಲಾಗಿದೆ. ಮತ್ತೆ ಇದು ಅವರಿಗೆ ಬಳಕೆ ಮಾಡಬೇಕು. ಜಿಲ್ಲೆಯ ಸಿ ಅಂಡ್ ಡಿ ಲ್ಯಾಂಡ್ ಜಮೀನನ್ನು ಮೀಸಲ ಅರಣ್ಯ ಎಂದು ಘೋಷಣೆ ಮಾಡಬಾರದು ಎಂದು ಒತ್ತಾಯಿಸಿದರು.ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ರಾಜ್ಯ ಬಿಜೆಪಿ ಕೃಷಿ ಮೋರ್ಚಾದ ಡಾ. ನವೀನ್ ಕುಮಾರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್ ಕುಮಾರ್, ಮಂಡಲ ಅಧ್ಯಕ್ಷರಾದ ಉಮೇಶ್ ಸುಬ್ರಮಣಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.