ಯುದ್ಧ ಪರಿಸ್ಥಿತಿ ನಿರ್ವಹಣೆಗೆ ಸನ್ನದ್ಧರಾಗಲು ಜಿಲ್ಲಾಧಿಕಾರಿ ಕರೆ

| Published : May 10 2025, 01:03 AM IST

ಯುದ್ಧ ಪರಿಸ್ಥಿತಿ ನಿರ್ವಹಣೆಗೆ ಸನ್ನದ್ಧರಾಗಲು ಜಿಲ್ಲಾಧಿಕಾರಿ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಯುದ್ಧದ ಸನ್ನಿವೇಶ ಇರುವುದರಿಂದ ಅಧಿಕಾರಿಗಳು ಯುದ್ಧ ಪರಿಸ್ಥಿತಿ ಸಮರ್ಪಕ ನಿರ್ವಹಣೆಗೆ ಸರ್ವ ಸನ್ನದ್ಧರಾಗಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಕರೆ ನೀಡಿದರು.

ಗದಗ: ದೇಶದಲ್ಲಿ ಯುದ್ಧದ ಸನ್ನಿವೇಶ ಇರುವುದರಿಂದ ಅಧಿಕಾರಿಗಳು ಯುದ್ಧ ಪರಿಸ್ಥಿತಿ ಸಮರ್ಪಕ ನಿರ್ವಹಣೆಗೆ ಸರ್ವ ಸನ್ನದ್ಧರಾಗಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಕರೆ ನೀಡಿದರು.

ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ದೇಶದಲ್ಲಿ ಯುದ್ಧ ಸನ್ನಿವೇಶದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ತುರ್ತು ಮುಂಜಾಗ್ರತಾ ಕ್ರಮಗಳ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಧಿಕಾರಿ ಹಾಗೂ ಸಿಬ್ಬಂದಿಗಳು ಕೇಂದ್ರಸ್ಥಾನದಲ್ಲಿದ್ದು, ಪರಿಸ್ಥಿತಿ ಅನುಗುಣವಾಗಿ ಜವಾಬ್ದಾರಿಯುತವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.ಜಿಲ್ಲೆಯಲ್ಲಿ ಪ್ರಮುಖ ಸ್ಥಳಗಳು, ದೇವಾಲಯ, ಮಸೀದಿ, ಚರ್ಚ್, ಜನಸಂದಣಿ ಇರುವ ಪ್ರದೇಶಗಳಲ್ಲಿ ಒಂದು ವೇಳೆ ಅಹಿತಕರ ಘಟನೆ ನಡೆದರೆ ಪೂರ್ವ ತಯಾರಿಯಾಗಿ ಸಾರ್ವಜನಿಕರ ರಕ್ಷಣಾ ಕಾರ್ಯದ ಕಡೆ ನಿಗಾ ವಹಿಸಬೇಕು. ತಾಲೂಕು ಮಟ್ಟದಲ್ಲಿಯೂ ಸಹ ತಹಸೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಸಮನ್ವಯತೆಯಲ್ಲಿ ಮುಂಜಾಗ್ರತಾ ಕ್ರಮಗಳ ಕುರಿತು ಸಭೆ ಜರುಗಿಸಬೇಕು ಎಂದು ಸೂಚಿಸಿದರು.ಜಿಲ್ಲಾಡಳಿತದೊಂದಿಗೆ ತುರ್ತು ಪರಿಸ್ಥಿತಿಯಲ್ಲಿ ವಿವಿಧ ಇಲಾಖೆಗಳಿಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಹಂಚಿಕೆಯನ್ನು ಮಾಡಲಾಗಿದೆ. ಮಾಜಿ ಸೈನಿಕರು ಎನ್‌ಸಿಸಿ, ಎನ್‌ಎಸ್‌ಎಸ್ , ಪೊಲೀಸ್ ಇಲಾಖೆಯವರು ಸಾರ್ವಜನಿಕರಿಗೆ ಈ ಕುರಿತು ಜಾಗೃತಿ ಮೂಡಿಸಬೇಕು. ಅಧಿಕಾರಿಗಳು ಯಾವುದೇ ಕಾರಣಕ್ಕೂ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಬಾರದು ಎಂದರು.ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ ಮಾತನಾಡಿ ಯುದ್ದ ಸನ್ನಿವೇಶದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಮಾರ್ಗಸೂಚಿಗಳ ಪಾಲನೆ ಅವಶ್ಯವಾಗಿದೆ. ಆರೋಗ್ಯ ಇಲಾಖೆಯವರು ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಔಷಧಿಗಳ ಸರಬರಾಜು, ವೈದ್ಯಕೀಯ ಸೇವೆ, ಆಕ್ಸಿಜನ್, ಆಂಬ್ಯುಲನ್ಸ್ ಗಳ ಸಿದ್ಧತೆ ಮಾಡಿಟ್ಟುಕೊಳ್ಳಬೇಕು. ಅಗತ್ಯಕ್ಕನುಗುಣವಾಗಿ ಸಾರ್ವಜನಿಕರ ರಕ್ಷಣೆಗಾಗಿ ಅಗ್ನಿ ಶಾಮಕ, ಕಂದಾಯ, ಯುವಜನ ಸೇವೆ, ಲೋಕೋಪಯೋಗಿ, ಅಹಾರ, ಶಿಕ್ಷಣ , ಸಾರಿಗೆ, ಹೆಸ್ಕಾಂ, ಪೊಲೀಸ ಇಲಾಖೆಯವರು ಕಾರ್ಯನಿರ್ವಹಣೆಗೆ ಪೂರ್ವ ತಯಾರಿ ಮಾಡಿಟ್ಟುಕೊಳ್ಳಬೇಕು ಎಂದರು.ನಿವೃತ್ತ ಸೈನಿಕರಿಗೂ ಸಹ ಪ್ರತ್ಯೇಕ ಜವಾಬ್ದಾರಿಯನ್ನು ಕೊಡಲಾಗುತ್ತದೆ. ಜಿಲ್ಲೆಯಲ್ಲಿನ ಹಾಸ್ಟೆಲ್‌ಗಳ ರಕ್ಷಣೆ ಕಡೆ ನಿಗಾ ವಹಿಸಬೇಕು. ತಾಲೂಕು ಮಟ್ಟದಲ್ಲಿಯೂ ಸಭೆ ನಡೆಸಿ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಮಾಕ್ ಡ್ರಿಲ್ ಕಾರ್ಯಕ್ರಮ ಕೈಗೊಳ್ಳಬೇಕು. ಎನ್.ಸಿ.ಸಿ., ಎನ್.ಎಸ್.ಎಸ್. ವಿದ್ಯಾರ್ಥಿಗಳ ಸಂಘಟನೆಯೊಂದಿಗೆ ನಾಗರಿಕರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯವಾಗಬೇಕು. ಜಿಲ್ಲೆಯಲ್ಲಿನ ಜಲ ಸ್ಥಾವರಗಳು, ಶಾಪಿಂಗ್ ಮಾಲ್, ಆಸ್ಪತ್ರೆ , ಕೈಗಾರಿಕೆ, ಧಾರ್ಮಿಕ ಕೇಂದ್ರಗಳು, ಜನಸಂದಣಿ ಇರುವ ಪ್ರಮುಖ ಸ್ಥಳಗಳಲ್ಲಿ ರಕ್ಷಣಾ ಕಾರ್ಯದ ಕುರಿತು ನಿಗಾ ವಹಿಸಬೇಕು. ವೈರ್‌ಲೆಸ್ ಕಂಟ್ರೋಲ್ ರೂಮ್ ನಿರ್ಮಾಣವಾಗಬೇಕು ಎಂದರು.ಜಿ.ಪಂ. ಸಿಇಓ ಭರತ್ ಎಸ್ ಮಾತನಾಡಿ, ಯುದ್ಧ ನಡೆದಾಗ ಜಿಲ್ಲಾಡಳಿತ ನೀಡುವ ಮಾರ್ಗಸೂಚಿಗಳನ್ನು ಪಾಲಿಸಬೇಕು. ದೇಶದಲ್ಲಿ ಯುದ್ಧದ ಸನ್ನಿವೇಶ ಇರುವುದರಿಂದ ತುರ್ತು ಪರಿಸ್ಥಿತಿಯಲ್ಲಿ ನಾಗರಿಕರ ರಕ್ಷಣೆಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಕೆಲಸ ನಿರ್ವಹಿಸಬೇಕು. ಏನಾದರೂ ಸಮಸ್ಯೆ ಉಂಟಾದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ನೊಂದಿಗೆ ನೇರ ಸಂಪರ್ಕದಲ್ಲಿರಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ ಅವರು ವಿವಿಧ ಇಲಾಖೆಗಳು ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಡಿಡಿಪಿಐ ಆರ್.ಎಸ್. ಬುರುಡಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಪೊಲೀಸ್ ಪಡೆಗಳು, ಎನ್‌ಸಿಸಿ, ಎನ್‌ಎಸ್‌ಎಸ್ ,ಹೋಮ್ ಗಾರ್ಡ್ಸ, ನಾಗರಿಕ ಸೇವಾ ಇಲಾಖೆ ಅಧಿಕಾರಿಗಳು ಹಾಜರಿದ್ದರು.