‘ಮಂಡ್ಯ ಬಂದ್’ ನಡೆಸದಂತೆ ಸಂಘಟಕರಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಮನವಿ

| Published : Feb 06 2024, 01:33 AM IST

‘ಮಂಡ್ಯ ಬಂದ್’ ನಡೆಸದಂತೆ ಸಂಘಟಕರಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತ ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ನಡೆದ ಹನುಮ ಧ್ವಜಸ್ತಂಭದ ವಿವಾದಕ್ಕೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳು ಫೆ.7ರಂದು ಹಾಗೂ 9 ರಂದು ಮಂಡ್ಯ ಬಂದ್ ಮಾಡದಂತೆ ಜಿಲ್ಲಾಧಿಕಾರಿ ಡಾ.ಕುಮಾರ ಮನವಿ ಮಾಡಿದರೆ, ಅತ್ತ ಕೆರಗೋಡು ಗ್ರಾಮದ ವಿವಾದಿತ ಧ್ವಜಸ್ತಂಭದ ಸ್ಥಳದಲ್ಲಿದ್ದ ಜೆಡಿಎಸ್ ನಾಯಕರ ಫ್ಲೆಕ್ಸ್ ಗಳನ್ನು ಸ್ಥಳೀಯ ಗ್ರಾಮ ಪಂಚಾಯ್ತಿಯವರು ಸೋಮವಾರ ತೆರವುಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಕೆರಗೋಡು ಗ್ರಾಮದಲ್ಲಿ ನಡೆದ ಹನುಮ ಧ್ವಜಸ್ತಂಭದ ವಿವಾದಕ್ಕೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳು ಫೆ.7ರಂದು ಹಾಗೂ 9 ರಂದು ಮಂಡ್ಯ ಬಂದ್ ಮಾಡದಂತೆ ಜಿಲ್ಲಾಧಿಕಾರಿ ಡಾ.ಕುಮಾರ ಮನವಿ ಮಾಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎರಡು ಸಂಘಟನೆಗಳ ಪ್ರತ್ಯೇಕ ಸಭೆ ಕರೆದು ಬಂದ್ ಮಾಡುವುದರಿಂದ ಆಗುವ ಅನಾನುಕೂಲಗಳ ಬಗ್ಗೆ ಸಂಘಟನೆಗಳ ಮುಖಂಡರಿಗೆ ತಿಳಿಸಿದರು.

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಅಂಗಡಿಗಳಲ್ಲಿ ವ್ಯಾಪಾರಕ್ಕೆ, ಸಾರ್ವಜನಿಕರು, ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ. ಎರಡು ಸಂಘಟನೆಗಳು ಬಂದ್ ಹಿಂಪಡೆಯುವಂತೆ ಮನವಿ ಮಾಡಿದರು. ಫೆ.7ರಂದು ಬಂದ್‌ಗೆ ಕರೆ ನೀಡಿದ್ದ ಸಂಘಟನೆಗಳು ತಾತ್ಕಾಲಿಕವಾಗಿ ವಾಪಸ್‌ ಪಡೆದಿವೆ. ಫೆ.9ರ ಬಂದ್‌ಗೆ ಕರೆ ನೀಡಿದ ಸಂಘಟನೆಗಳು ಈ ಬಗ್ಗೆ ಚರ್ಚಿಸಿ ಮುಂದಿನ ನಿರ್ಧಾರ ತಿಳಿಸುವುದಾಗಿ ಸಂಘಟನೆಗಳ ಮುಖಂಡರು ತಿಳಿಸಿದರು. ಸಭೆಯಲ್ಲಿ ಎಸ್ಪಿ ಎನ್.ಯತೀಶ್, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಸೇರಿದಂತೆ ವಿವಿಧ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಕೆರಗೋಡಿನಲ್ಲಿ ಜೆಡಿಎಸ್ ಫ್ಲೆಕ್ಸ್ ಗಳ ತೆರವುಮಂಡ್ಯ: ತಾಲೂಕಿನ ಕೆರಗೋಡು ಗ್ರಾಮದ ವಿವಾದಿತ ಧ್ವಜಸ್ತಂಭದ ಸ್ಥಳದಲ್ಲಿದ್ದ ಜೆಡಿಎಸ್ ನಾಯಕರ ಫ್ಲೆಕ್ಸ್ ಗಳನ್ನು ಸ್ಥಳೀಯ ಗ್ರಾಮ ಪಂಚಾಯ್ತಿಯವರು ಸೋಮವಾರ ತೆರವುಗೊಳಿಸಿದ್ದಾರೆ.ಧ್ವಜಸ್ತಂಭ ಉದ್ಘಾಟನೆ ಅಂಗವಾಗಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸ್ಥಳೀಯ ನಾಯಕರ ಭಾವಚಿತ್ರವುಳ್ಳ ದೊಡ್ಡ ದೊಡ್ಡ ಫ್ಲೆಕ್ಸ್ ಗಳನ್ನು ಶ್ರೀಆಂಜನೇಯಸ್ವಾಮಿ ದೇವಸ್ಥಾನದ ಬಳಿ ಹಾಗೂ ಬಸ್ ನಿಲ್ದಾಣದ ಬಳಿ ಅಳವಡಿಸಿದ್ದರು.ಜೊತೆ ಸ್ತಂಭ ವಿವಾದವಾಗಿ ಪರಿವರ್ತನೆಗೊಂಡು ಬಿಗುವಿನ ವಾತಾವರಣ ಸೃಷ್ಟಿಯಾದ ನಂತರವೂ ಫ್ಲೆಕ್ಸ್ ಗಳು ಹಾಗೆಯೇ ಮುಂದುವರೆದಿದ್ದವು. ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಫ್ಲೆಕ್ಸ್ ಗಳನ್ನು ತೆರವುಗೊಳಿಸಲು ಮುಂದಾದ ಸಮಯದಲ್ಲಿ ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದ್ದರು. ಆ ನಂತರವೂ ಆ ಫ್ಲೆಕ್ಸ್ ಗಳು ಯಥಾಸ್ಥಿತಿಯಲ್ಲಿ ಸ್ಥಳದಲ್ಲೇ ಉಳಿದುಕೊಂಡಿದ್ದವು.ಸೋಮವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಗ್ರಾಪಂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕೆಲವೇ ಸಮಯದಲ್ಲಿ ಫ್ಲೆಕ್ಸ್ ಗಳನ್ನು ಸ್ಥಳದಿಂದ ತೆರವುಗೊಳಿಸಿದರು ಎಂದು ತಿಳಿದುಬಂದಿದೆ.