ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಬುಧವಾರ ಬೆಳಗ್ಗೆ ದಿಢೀರ್ ಆಗಮಿಸಿ, ಹರಿಹರ ನಗರ ಪ್ರದಕ್ಷಿಣೆ ನಡೆಸಿ ಆಸ್ಪತ್ರೆ, ಕೆಳಸೇತುವೆ, ಸಂತೆ, ರಾಜಕಾಲುವೆ, ಹೈಸ್ಕೂಲಿಗೆ ತೆರಳಿ ವ್ಯವಸ್ಥೇಗಳ ಪರಿಶೀಲನೆ ನಡೆಸಿ ಸಲಹೆ- ಸೂಚನೆಗಳನ್ನು ನೀಡಿದ್ದಾರೆ.

- ಸಾರ್ವಜನಿಕ ಆಸ್ಪತ್ರೆ, ಕೆಳಸೇತುವೆ, ಸಂತೆ, ರಾಜಕಾಲುವೆ, ಹೈಸ್ಕೂಲ್‌ಗೆ ಭೇಟಿ, ಪರಿಶೀಲನೆ

- - -

ಕನ್ನಡಪ್ರಭ ವಾರ್ತೆ ಹರಿಹರ

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಬುಧವಾರ ಬೆಳಗ್ಗೆ ದಿಢೀರ್ ಆಗಮಿಸಿ, ಹರಿಹರ ನಗರ ಪ್ರದಕ್ಷಿಣೆ ನಡೆಸಿ ಆಸ್ಪತ್ರೆ, ಕೆಳಸೇತುವೆ, ಸಂತೆ, ರಾಜಕಾಲುವೆ, ಹೈಸ್ಕೂಲಿಗೆ ತೆರಳಿ ವ್ಯವಸ್ಥೆಗಳ ಪರಿಶೀಲನೆ ನಡೆಸಿ ಸಲಹೆ- ಸೂಚನೆಗಳನ್ನು ನೀಡಿದರು.

ವಾರದ ಸಂತೆಯ ವಿಚಾರವಾಗಿ ಎಪಿಎಂಸಿ ಆವರಣಕ್ಕೆ ತೆರಳಿ ಪರಿಶೀಲಿಸಿದ ಅವರು, ವಾರದ ಸಂತೆ ನಡೆಸಲು ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಶುದ್ಧ ಕುಡಿಯುವ ನೀರು, ಶೌಚಾಲಯ, ಹೈಮಾಸ್ಟ್‌ ಬೀದಿದೀಪದ ಮತ್ತು ಸಾರಿಗೆ ವ್ಯವಸ್ಥೆ ಮಾಡಲು ತಿಳಿಸಿದರು. ಎಪಿಎಂಸಿ ಆವರಣದಲ್ಲಿರುವ ರೈತ ಭವನ ತೀರ ದುಸ್ಥಿತಿಯಲ್ಲಿದ್ದು, ಅದನ್ನು ನೆಲಸಮ ಮಾಡಲು ವರದಿ ನೀಡಲು ಸೂಚನೆ ನೀಡಿದರು.

ಜೆ.ಸಿ. ಬಡಾವಣೆಯ ಧ.ರಾ.ಮ. ಪ್ರೌಢಶಾಲೆಗೆ ಭೇಟಿ ನೀಡಿ, ಮಕ್ಕಳಿಗೆ ಕುಳಿತುಕೊಳ್ಳಲು 30 ಆಸನದ ವ್ಯವಸ್ಥೆ ಮತ್ತು ವಿದ್ಯುತ್ ಸಂಪರ್ಕ, ವಿದ್ಯಾರ್ಥಿನಿಯರ ಅನುಕೂಲಕ್ಕೆ ಸುಸಜ್ಜಿತ ಕಾಂಪೌಂಡ್ ನಿರ್ಮಾಣಕ್ಕೆ ವ್ಯವಸ್ಥೆ ಮಾಡುವಂತೆ ಬಿಇಒ ಅವರಿಗೆ ತಾಕೀತು ಮಾಡಿದರು.

ತದನಂತರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳ ಮೂಲ ಸಮಸ್ಯೆಯನ್ನು ಖುದ್ದಾಗಿ ಆಲಿಸಿದರು. ಶೀಘ್ರ ಆಸ್ಪತ್ರೆಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಮುಖ್ಯ ವೈದ್ಯಾಧಿಕಾರಿಗೆ ತಿಳಿಸಿದರು. ಕೊರತೆ ಇರುವ ಔಷಧಿಗಳಿಗಾಗಿ ಈಗಾಗಲೇ ಜಿಲ್ಲಾಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು ಕೆಲವೇ ದಿನಗಳಲ್ಲಿ ಔಷಧಿಯ ದಾಸ್ತಾನು ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಿಗೆ ಸರಬರಾಜು ಆಗಲಿದೆ ಎಂದು ತಿಳಿಸಿದರು.

ನಗರದ ಮೂಲ ಸಮಸ್ಯೆಯಾದ ಹರಪನಹಳ್ಳಿ ರಸ್ತೆಯ ಕೆಳಸೇತುವೆ ವಿಚಾರದ ಬಗ್ಗೆ ಹಲವು ಪತ್ರಿಕೆಗಳಲ್ಲಿ ಹಾಗೂ ಸಂಘ ಸಂಸ್ಥೆಗಳು ಮನವಿಯ ಹಿನ್ನೆಲೆ ಭೇಟಿ ನೀಡಿ, ಮಳೆಗಾಲದಲ್ಲಿ ಸಂಚಾರಕ್ಕೆ ತುಂಬಾ ದುಸ್ತರವಾಗುವ ಕಾರಣ ಕೂಡಲೇ ಅದನ್ನು ಯೋಗ್ಯ ರೀತಿಯಲ್ಲಿ ಸರಿಪಡಿಸಲು ಮುಖ್ಯ ಅಭಿಯಂತರರ ಜೊತೆ ಚರ್ಚಿಸಿ ಸಮಸ್ಯೆ ಪರಿಹರಿಸಲು ತಿಳಿಸುತ್ತೇನೆ ಎಂದು ಹೇಳಿದರು.

ಕೊನೆಯಲ್ಲಿ ಹಳೇ ಪಿ.ಬಿ. ರಸ್ತೆಗೆ ಅಂಟಿಕೊಂಡಿರುವ ಡಿ.ಬಿ. ಕಾಲುವೆ, ಎಸ್‌ಜೆವಿಪಿ ಕಾಲೇಜ್ ಬಳಿ ರಾಜಕಾಲುವೆ ಪರಿಶೀಲನೆ ಮಾಡಿ, ಕಾಲುವೆ ಸ್ವಚ್ಛಗೊಳಿಸುವುದು ಅದಕ್ಕೆ ತಡೆಗೋಡೆ ನಿರ್ಮಾಣ ಬಗ್ಗೆ ಪರಿಶೀಲನೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಹಸೀಲ್ದಾರ್ ಜಿ.ಸಂತೋಷ್ ಕುಮಾರ್, ಬಿಇಒ ಡಿ.ದುರುಗಪ್ಪ, ಪೌರಯುಕ್ತೆ ವಿ.ಈರಮ್ಮ, ಲೋಕೋಪಯೋಗಿ ಸಹಾಯಕ ಅಭಿಯಂತರ ಮರಿಸ್ವಾಮಿ, ನಗರಸಭೆಯ ಸಹಾಯಕ ಅಭಿಯಂತರ ವಿನಯ್ ಕುಮಾರ್, ಪರಿಸರ ಅಭಿಯಂತರ ತಿಮ್ಮಪ್ಪ, ತಾಲೂಕು ಭೂ ಸ್ವಾಧೀನ ಅಧಿಕಾರಿ ಕಲ್ಲೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.

- - -

(ಕೋಟ್‌) ದಾವಣಗೆರೆ ಜಿಲ್ಲೆಯ ಸಂಚಾರ ವ್ಯವಸ್ಥೆ ಸುಧಾರಣೆ ಕಾರಣಕ್ಕಾಗಿ ಜಿಲ್ಲೆಗೆ ಸಾರಿಗೆ ಇಲಾಖೆಯಿಂದ 60 ವಿದ್ಯುತ್ ಚಾಲಿತ ಬಸ್ ವ್ಯವಸ್ಥೆಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಷ್ಟು ಬೇಗ ಜಿಲ್ಲೆಗೆ ವಿದ್ಯುತ್ ಚಾಲಿತ ಬಸ್‌ಗಳು ಬರಲಿವೆ. ಇದರಿಂದ ಸಂಚಾರ ವ್ಯವಸ್ಥೆಯಲ್ಲಿ ಸ್ವಲ್ಪ ಒತ್ತಡ ಕಡಿಮೆಯಾಗಲಿದೆ. ಸಾರ್ವಜನಿಕರು ಈ ಬಸ್‌ಗಳ ಸದುಪಯೋಗ ಪಡೆದುಕೊಳ್ಳಬೇಕು. ಇನ್ನೂ ಹಲವಾರು ಸೌಲಭ್ಯಗಳನ್ನು ಜಿಲ್ಲೆಗೆ ತರುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ.

- ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ.

- - -

-10HRR03 & 03A:

ಹರಿಹರಕ್ಕೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಬುಧವಾರ ಬೆಳಗ್ಗೆ ಹರಿಹರ ನಗರ ಪ್ರದಕ್ಷಿಣೆ ನಡೆಸಿ ವ್ಯವಸ್ಥೆಗಳ ಪರಿಶೀಲಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಸಾಥ್ ನೀಡಿದರು.