ಘನತ್ಯಾಜ್ಯವನ್ನು ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಅತ್ಯಂತ ವೈಜ್ಞಾನಿಕವಾಗಿ ಮತ್ತು ಸಮರ್ಪಕವಾಗಿ ವಿಲೇವಾರಿ ಮಾಡಲು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಹೊಸಪೇಟೆ: ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯವನ್ನು ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಅತ್ಯಂತ ವೈಜ್ಞಾನಿಕವಾಗಿ ಮತ್ತು ಸಮರ್ಪಕವಾಗಿ ವಿಲೇವಾರಿ ಮಾಡಲು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯ ವಿಸಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು,

ಕಸ ವಿಲೇವಾರಿಯಲ್ಲಿ ನಿರ್ಲಕ್ಷ್ಯ ತೋರುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಯೋಜನೆಯು ಕೇವಲ ಕಸದ ವಿಲೇವಾರಿಯನ್ನಷ್ಟೇ ಗುರಿಯಾಗಿಟ್ಟುಕೊಳ್ಳದೆ, ಪರಿಸರ ಸಮತೋಲನ ಕಾಪಾಡಿಕೊಳ್ಳುವುದು ಯೋಜನೆಯ ಉದ್ದೇಶವಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಸ ಎಲ್ಲೆಂದರಲ್ಲಿ ಎಸೆಯದೇ, ಸುಡುವುದಾಗಲಿ ಅಥವಾ ಭೂಮಿಯಲ್ಲಿ ಹೂಳುವುದಾಗಲಿ ಮಾಡದೆ, ವೈಜ್ಞಾನಿಕ ವಿಲೇವಾರಿ ಮಾಡುವ ಮೂಲಕ ತ್ಯಾಜ್ಯ ಮುಕ್ತ ಪರಿಸರ ನಿರ್ಮಿಸಬೇಕು ಎಂದರು.

ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆಗೆ ನೀಡಬೇಕು. ಹಸಿ ಕಸದಿಂದ ಕಾಂಪೋಸ್ಟ್ ನಂತಹ ಗೊಬ್ಬರ ತಯಾರಿಸಿ ಮಣ್ಣಿನ ಫಲವತ್ತತೆ ಹೆಚ್ಚಿಸುವುದು ಮತ್ತು ಪ್ಲಾಸ್ಟಿಕ್‌ನಂತಹ ವಸ್ತುಗಳನ್ನು ಮರುಬಳಕೆಗೆ ಒಳಪಡಿಸುವುದು ಸೂಕ್ತ ಎಂದರು.

ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಹೊಸ ನಿಯಮ ಅನ್ವಯ ದಿನಕ್ಕೆ 100 ಕೆಜಿಗಿಂತ ಹೆಚ್ಚು ತ್ಯಾಜ್ಯ ಉತ್ಪಾದಿಸುವ ಸಂಸ್ಥೆಗಳು ಅಥವಾ 20,000 ಚದರ ಮೀಟರ್‌ಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಅಪಾರ್ಟ್‌ಮೆಂಟ್ ಮತ್ತು ವಾಣಿಜ್ಯ ಮಳಿಗೆಗಳು ತಮ್ಮ ಆವರಣದಲ್ಲೇ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಹೊಂದುವುದು ಕಡ್ಡಾಯವಾಗಿದೆ. ತಪ್ಪಿದಲ್ಲಿ ಅಂತಹ ಸಂಸ್ಥೆಗಳು ಬೃಹತ್ ತ್ಯಾಜ್ಯ ಉತ್ಪಾದಕ ಜವಾಬ್ದಾರಿ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ. ಈ ನಿಯಮ ಉಲ್ಲಂಘಿಸಿ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಸ್ಥಳದಲ್ಲೇ ದಂಡ ವಿಧಿಸುವ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದರು.

ತ್ಯಾಜ್ಯ ನಿರ್ವಹಣೆಯು ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಇದರಲ್ಲಿ ಸಾರ್ವಜನಿಕರ ಸಹಕಾರವೂ ಅತ್ಯಗತ್ಯ. ಈ ನಿಟ್ಟಿನಲ್ಲಿ ಮೂಲದಲ್ಲಿಯೇ ಹಸಿ ಮತ್ತು ಒಣ ಕಸವನ್ನು ಮನೆಯಲ್ಲೇ ಪ್ರತ್ಯೇಕಿಸಿ ವಿಲೇವಾರಿ ವಾಹನಗಳಿಗೆ ನೀಡಬೇಕು. ಇದರಿಂದ ಕಾರ್ಮಿಕರ ಶ್ರಮ ಮತ್ತು ಸಮಯ ಎರಡೂ ಉಳಿತಾಯವಾಗಲಿದೆ. ಈ ಕುರಿತು ಅಭಿಯಾನಗಳ ಮೂಲಕ ಸಾರ್ವಜನಿಕರಲ್ಲಿ ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯದಂತೆ ಜಾಗೃತಿ ಮೂಡಿಸಿಬೇಕು ಎಂದರು.

ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಕಾರ್ಮಿಕರಿಗೆ ತರಬೇತಿ ಮತ್ತು ಸ್ವ​ಸುರಕ್ಷತಾ ಸಾಧನ ಸಲಕರಣೆ ಒದಗಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಅವರು, ಪ್ರತಿವರ್ಷ ಜೂನ್ 30ರೊಳಗೆ ತ್ಯಾಜ್ಯ ಸಂಸ್ಕರಣೆಯ ಸಂಪೂರ್ಣ ಮಾಹಿತಿಯನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.

ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಮನೋಹರ್, ನಗರಸಭೆ ಪೌರಾಯುಕ್ತ ಶಿವಕುಮಾರ್, ಉಪವಿಭಾಗಾಧಿಕಾರಿ ವಿವೇಕ್, ತಹಸೀಲ್ದಾರ್ ಶ್ರುತಿ ಎಂ., ಸೇರಿದಂತೆ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಇದ್ದರು.