ಸಾರಾಂಶ
ಕಾರವಾರ: ಜಿಲ್ಲೆಯ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ವಿದ್ಯಾರ್ಥಿಯ ಅಧ್ಯಯನದ ಬಗ್ಗೆ ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರು ವಿಶೇಷ ಕಾಳಜಿ ವಹಿಸಿ ಪ್ರತಿಯೊಬ್ಬರೂ ಉತ್ತೀರ್ಣರಾಗುವಂತೆ ಅವರನ್ನು ಪ್ರೇರೇಪಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಉತ್ತಮಗೊಳಿಸುವ ಕುರಿತು ಸೋಮವಾರ ನಡೆದ ಜಿಲ್ಲೆಯ ಎಲ್ಲ ಕಾಲೇಜುಗಳ ಪ್ರಾಂಶುಪಾಲರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದ್ವಿತೀಯ ಪಿಯುಸಿ ಪ್ರತಿ ವಿದ್ಯಾರ್ಥಿಯ ಬದುಕಿನಲ್ಲಿ ಮಹತ್ತರ ಬದಲಾವಣೆ ತರುವ ಸಮಯವಾಗಿದ್ದು, ಭವಿಷ್ಯ ರೂಪಿಸಿಕೊಳ್ಳುವ ಈ ಹಂತದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ, ಪ್ರೇರೇಪಣೆ ಅಗತ್ಯವಾಗಿದೆ. ಪ್ರಾಧ್ಯಾಪಕರು ತಮ್ಮ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಬಗ್ಗೆ ಕಾಳಜಿ ವಹಿಸಬೇಕು. ಗೈರಾದ ವಿದ್ಯಾರ್ಥಿಗಳ ಬಗ್ಗೆ ಮತ್ತು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವರು ಪರೀಕ್ಷೆಯಲ್ಲಿ ಉತೀರ್ಣರಾಗುವಂತೆ ಮಾಡಬೇಕು. ಅವರಿಗಾಗಿ ವಿಶೇಷ ತರಗತಿಗಳನ್ನು ಆಯೋಜಿಸಬೇಕು. ಜಿಲ್ಲೆಯು ಫಲಿತಾಂಶದಲ್ಲಿ ರ‍್ಯಾಂಕ್ ಪಡೆಯುವುದು ಮುಖ್ಯವಾಗದೇ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುವುದು ಅತಿ ಮುಖ್ಯ ಎಂದರು.ವಿದ್ಯಾರ್ಥಿಗಳಿಗೆ ಪರೀಕ್ಷೆ ಒತ್ತಡ ಎದುರಿಸುವ ಬಗ್ಗೆ, ಪರೀಕ್ಷೆ ಕೊಠಡಿಯಲ್ಲಿ ಸಮಯಪಾಲನೆ ಬಗ್ಗೆ, ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ, ಯಾವುದೇ ವಿದ್ಯಾರ್ಥಿ ಪರೀಕ್ಷೆಗೆ ಗೈರು ಹಾಜರಾಗದಂತೆ ನೋಡಿಕೊಳ್ಳಬೇಕು. ಸಿದ್ಧತಾ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಂಡು ಅವರಿಗೆ ಬೋಧನೆ ಮಾಡುವಂತೆ ಮತ್ತು ಪರೀಕ್ಷೆಯ ಯಾವುದೇ ಹಂತದಲ್ಲೂ ವಿದ್ಯಾರ್ಥಿಗಳ ಮಾನಸಿಕ ಧೈರ್ಯ ಕುಂದದಂತೆ ನಿರಂತರವಾಗಿ ಪ್ರೇರೇಪಿಸಬೇಕು ಎಂದು ಸೂಚಿಸಿದರು.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ ಮಾತನಾಡಿ, ದ್ವಿತೀಯ ಪಿಯುಸಿ ತರಗತಿಗಳಿಗೆ ಗೈರು ಹಾಜರಾಗುತ್ತಿರುವ ವಿದ್ಯಾರ್ಥಿಗಳ ಮಾಹಿತಿ ನೀಡಿ, ಅವರ ಮನೆಗೆಳಿಗೆ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಲೇಜಿಗೆ ಹಾಜರಾಗುವ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ. ಯಾವುದೇ ವಿದ್ಯಾರ್ಥಿ ಪರೀಕ್ಷೆಗೆ ಗೈರು ಹಾಜರಾಗದಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಗುಣಮಟ್ಟದ ಫಲಿತಾಂಶ ಬರುವ ನಿಟ್ಟಿನಲ್ಲಿ ಅಧ್ಯಾಪಕರು ಕಾರ್ಯ ನಿರ್ವಹಿಸಬೇಕು ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸತೀಶ ನಾಯ್ಕ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶ ವೃದ್ಧಿಗಾಗಿ ತರಗತಿಯಲ್ಲಿ ಹಾಜರಾತಿ ಕಡಿಮೆ ಇರುವ ವಿದ್ಯಾರ್ಥಿಗಳನ್ನು ಗುರುತಿಸಿ ಮನವೊಲಿಸಿ ಕಾಲೇಜಿಗೆ ಬರುವಂತೆ ಕ್ರಮ ವಹಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ, ಕಾಲೇಜು ಅವಧಿಯ ಪ್ರಾರಂಭ/ನಂತರದಲ್ಲಿ ವೇಳಾಪಟ್ಟಿ ಮಾಡಿ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಕಾಲೇಜು ಹಂತದಲ್ಲಿ ಗುರುತಿಸಿ 5 ವಿದ್ಯಾರ್ಥಿಗಳಿಗೆ ಒಬ್ಬ ಉಪನ್ಯಾಸಕರನ್ನು ಮೇಲ್ವಿಚಾರಕರಂತೆ ನೇಮಿಸಿ ಅವರ ಕಲಿಕೆಯನ್ನು ಉತ್ತಮಗೊಳಿಸಲಾಗುತ್ತಿದ್ದು, ಎರಡು ಕಿರು ಪರೀಕ್ಷೆ , ಮಧ್ಯ ವಾರ್ಷಿಕ ಪರೀಕ್ಷೆ, ಘಟಕ ಪರೀಕ್ಷೆ ಮತ್ತು ಸಿದ್ಧತಾ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳಿಗೆ /ಪಾಲಕರಿಗೆ ಅವರ ಪ್ರಗತಿಯನ್ನು ತಿಳಿಸಲಾಗಿದೆ. ತಾಲೂಕುವಾರು ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಸಮಿತಿಯನ್ನು ರಚಿಸಿ ಮೇಲುಸ್ತುವಾರಿ ಮಾಡಲಾಗುತ್ತಿದೆ. ಉಪನ್ಯಾಸಕರಿಗೆ ಫಲಿತಾಂಶ ಉತ್ತಮಪಡಿಸಲು ಎರಡು ಪುನಶ್ಚೇತನ ಕಾರ್ಯಗಾರವನ್ನು ನಡೆಸಲಾಗಿದ್ದು, ಡಿಸೆಂಬರ್ ಅಂತ್ಯದಲ್ಲಿ ವರ್ಷದ ಪಠ್ಯವನ್ನು ಪೂರ್ಣಗೊಳಿಸಿ ನಂತರ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಉಪಯೋಗಿಸಿಕೊಂಡು ಬೋಧಿಸಲಾಗುತ್ತಿದೆ ಎಂದರು.ಜಿಲ್ಲೆಯ ಎಲ್ಲ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಇದ್ದರು.