ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ ಪ್ರಕಟಿಸಲು ಜಿಲ್ಲಾಧಿಕಾರಿ ಲತಾಕುಮಾರಿ ಸೂಚನೆ

| Published : Jul 13 2025, 01:18 AM IST

ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ ಪ್ರಕಟಿಸಲು ಜಿಲ್ಲಾಧಿಕಾರಿ ಲತಾಕುಮಾರಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ಶಾಲೆಯಲ್ಲಿ ಕಾಂಪೌಂಡ್ ನಿರ್ಮಾಣ ಮಾಡಿ ಅದಕ್ಕೆ ಗೇಟ್ ಅಳವಡಿಸಿ, ಕಡ್ಡಾಯವಾಗಿ ಶೌಚಾಲಯವಿರಬೇಕು, ಆಟದ ಮೈದಾನವಿರಬೇಕು ಎಂದು ಸೂಚಿಸಿದರು. ಮಕ್ಕಳ ಸಂಪೂರ್ಣ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಬೇಕು, ಈ ನಿಟ್ಟಿನಲ್ಲಿ ಶಾಲೆಯಿಂದ ಯಾವುದೇ ಮಗು ಹೊರಗುಳಿಯದಂತೆ ನೋಡಿಕೊಳ್ಳಿ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಮಕ್ಕಳು ಯಾವುದೇ ತೊಂದರೆಗೆ ಸಿಲುಕಿದಲ್ಲಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಲು ಅನುಕೂಲವಾಗುವಂತೆ ಪ್ರತಿ ಶಾಲೆಯಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ ೧೦೯೮ ಯನ್ನು ಪ್ರಕಟಣೆ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಡಿಯೋ ಸಂವಾದ ಮೂಲಕ ಪ್ರೈಡೇ ಫ್ರೆಂಡ್ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ, ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಮಾತನಾಡಿದ ಅವರು, ೧೮ ವರ್ಷದೊಳಗಿನವರೆಲ್ಲರೂ ಮಕ್ಕಳೇ, ಇವರ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಪ್ರಕೃತಿದತ್ತವಾಗಿ, ದೈಹಿಕವಾಗಿ ಬದಲಾವಣೆ ಹಾಗೂ ಋತು ಚಕ್ರದ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡಬೇಕು. ಪ್ರತಿಯೊಬ್ಬರೂ ವಿದ್ಯಾಭ್ಯಾಸ ಮುಗಿಸಿದ ನಂತರ ಕೆಲಸದಲ್ಲಿ ತೊಡಗಿಕೊಂಡು ಸ್ವಾವಲಂಬಿ ಬದುಕು ನಡೆಸುವ ಮೂಲಕ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.

ಮಕ್ಕಳು ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸಹಾಯವಾಗುವಂತೆ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದರು.

ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಶಿಸ್ತು, ಸಮಯ ಪರಿಪಾಲನೆ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದರಲ್ಲದೆ, ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದರು. ಮಕ್ಕಳಿಗೆ ಕಾಗುಣಿತ ಕಡ್ಡಾಯವಾಗಿ ಕಲಿಸಬೇಕು ಪ್ರತಿ ಮಂಗಳವಾರ ಉಕ್ತಲೇಖನ ಪದ ಬರೆಸಬೇಕು, ಶಾಲೆಯಲ್ಲಿ ಪ್ರತಿ ಶನಿವಾರ ಮಕ್ಕಳು ಬಾಯಿತೆರೆದು ಗಟ್ಟಿಯಾಗಿ ಓದಬೇಕು ಎಂದು ಹೇಳಿದರು.

ಪರೀಕ್ಷೆಯಲ್ಲಿ ಫೇಲಾಗುವುದೇ ಭಯದಿಂದ. ಕಲಿತಿರುವುದನ್ನು ಬರೆಯುವುದಿಲ್ಲ, ಅದನ್ನು ಸಹ ಮರೆಯುತ್ತಾರೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಪರೀಕ್ಷಾ ಭಯ ನಿವಾರಣೆ ಮಾಡಿ ಆತ್ಮಸ್ಥೈರ್ಯ ತುಂಬಿ ಓದಲು ಹುರಿದುಂಬಿಸಿ ಎಂದು ತಿಳಿಸಿದರಲ್ಲದೆ, ಪೋಷಕರ ಸಭೆ ನಡೆಸುವಂತೆ ಸೂಚಿಸಿದರು.

ಎಸ್.ಎಸ್.ಎಲ್.ಸಿ. ಮಕ್ಕಳಿಗೆ ನವೆಂಬರ್ ಒಳಗೆ ಪೂರ್ಣಪ್ರಮಾಣದಲ್ಲಿ ಪಾಠವನ್ನು ಮುಗಿಸಿ, ಪುನರಾವರ್ತನೆ ಪ್ರಾರಂಭಿಸಿ, ಟಿ.ವಿ. ನೋಡಬಾರದು ಜೊತೆಗೆ ಮೊಬೈಲ್ ಬಳಕೆ ಮಾಡದಂತೆ ಎಚ್ಚರ ವಹಿಸಬೇಕು. ೧೮ ವರ್ಷದ ಒಳಗಿನ ಯಾವುದೇ ಮಕ್ಕಳು ಸಾಮಾಜಿಕ ಜಾಲತಾಣಗಳ ಖಾತೆ ಹೊಂದಿರುವಂತಿಲ್ಲ ಎಂದು ತಿಳಿಸಿದರು.

ಕಲಿಕೆಯಲ್ಲಿ ಭಾಷೆ ಬಹು ಮುಖ್ಯ. ಇದಕ್ಕೆ ಹೆಚ್ಚು ಒತ್ತು ನೀಡಬೇಕು. ಭಾಷೆ ಚೆನ್ನಾಗಿ ಕಲಿತರೆ ಉತ್ತಮ ವಿದ್ಯಾಭ್ಯಾಸಕ್ಕೆ ಸಹಾಯವಾಗುತ್ತದೆ, ಪಠ್ಯ ಪುಸ್ತಕಗಳನ್ನು ಕಡ್ಡಾಯವಾಗಿ ಓದಬೇಕು ಎಂದ ಅವರು,

ಪ್ರತಿ ಶಾಲೆಯಲ್ಲಿ ಕಾಂಪೌಂಡ್ ನಿರ್ಮಾಣ ಮಾಡಿ ಅದಕ್ಕೆ ಗೇಟ್ ಅಳವಡಿಸಿ, ಕಡ್ಡಾಯವಾಗಿ ಶೌಚಾಲಯವಿರಬೇಕು, ಆಟದ ಮೈದಾನವಿರಬೇಕು ಎಂದು ಸೂಚಿಸಿದರು. ಮಕ್ಕಳ ಸಂಪೂರ್ಣ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಬೇಕು, ಈ ನಿಟ್ಟಿನಲ್ಲಿ ಶಾಲೆಯಿಂದ ಯಾವುದೇ ಮಗು ಹೊರಗುಳಿಯದಂತೆ ನೋಡಿಕೊಳ್ಳಿ ಎಂದು ತಿಳಿಸಿದರು.

ವರ್ಷಪೂರ್ತಿ ಶಾಲೆಗೆ ಗೈರು ಹಾಜರಾಗದೇ ಶೇ.ನೂರಕ್ಕೆ ನೂರು ಹಾಜರಾತಿ ಪರಿಗಣಿಸಿ, ಮಕ್ಕಳಿಗೆ ಬಹುಮಾನ ನೀಡುವುದರ ಮೂಲಕ ಪ್ರೋತ್ಸಾಹಿಸಿ ಎಂದು ತಿಳಿಸಿದರು.

ಮಕ್ಕಳ ಬೆಳವಣಿಗೆಗೆ ಸಹಕಾರಿ ಆಗುವಂತೆ ಬಿಸಿಯೂಟದ ಜೊತೆಗೆ ಮೊಟ್ಟೆ ನೀಡಿ ಎಂದ ಅವರು, ಹಾಲನ್ನು ಚೆನ್ನಾಗಿ ಕಾಯಿಸಿ ಕುಡಿಯಲು ನೀಡುವಂತೆ ಕ್ರಮವಹಿಸಲು ಸೂಚನೆ ನೀಡಿದರು.

ಕಡಿಮೆ ಅಂಕಗಳನ್ನು ಪಡೆದ ಖಾಸಗಿ ಶಾಲಾ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಾತಿ ಮಾಡುತ್ತಿರುವುದು ಕಂಡುಬಂದಿದೆ. ಅಂತಹ ಖಾಸಗಿ ಶಾಲೆಗಳ ಪರವಾನಗಿ ರದ್ದು ಪಡಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಚಂದ್ರಶೇಖರ್ ಹಾಗೂ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.