ಯುದ್ಧದ ನೆಪವೊಡ್ಡಿ ಯಾವುದೇ ಕಾರಣಕ್ಕೂ ಎಲ್‌ಪಿಜಿ ಸಿಲಿಂಡರ್ ಅಥವಾ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡು ಕೃತಕ ಅಭಾವ ಸೃಷ್ಟಿಸಬಾರದು.

ಕನ್ನಡಪ್ರಭ ವಾರ್ತೆ ಕೋಲಾರಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಇಂಧನ ಹಾಗೂ ಎಲ್‌ಪಿಜಿ ಗ್ಯಾಸ್ ಸಮಸ್ಯೆ ಮುಂದಿಟ್ಟುಕೊಂಡು ಜಿಲ್ಲೆಯಲ್ಲಿ ಯಾವುದೇ ರೀತಿಯ ಕೃತಕ ಅಭಾವ ಸೃಷ್ಟಿಸಬಾರದು ಮತ್ತು ಕಾಳಸಂತೆಯಲ್ಲಿ ಇವನ್ನು ಮಾರಾಟ ಮಾಡದಂತೆ ಜಿಲ್ಲಾಧಿಕಾರಿ ಎಂ.ಆರ್.ರವಿ ವರ್ತಕರಿಗೆ ಹಾಗೂ ಗ್ಯಾಸ್ ವಿತರಕರಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ನ್ಯಾಯಾಂಗ ಸಭಾಂಗಣದಲ್ಲಿ ಗ್ಯಾಸ್ ಏಜೆನ್ಸಿ ಮಾಲೀಕರು, ಪೆಟ್ರೋಲ್ ಬಂಕ್ ಮಾಲೀಕರು, ಪ್ರಮುಖ ವರ್ತಕರ ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರುಯುದ್ಧದ ನೆಪವೊಡ್ಡಿ ಯಾವುದೇ ಕಾರಣಕ್ಕೂ ಎಲ್‌ಪಿಜಿ ಸಿಲಿಂಡರ್ ಅಥವಾ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡು ಕೃತಕ ಅಭಾವ ಸೃಷ್ಟಿಸಬಾರದು. ಅಕ್ರಮ ದಾಸ್ತಾನು ಪತ್ತೆಯಾದಲ್ಲಿ ಅಗತ್ಯ ವಸ್ತುಗಳ ಕಾಯ್ದೆ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಸಗಟು ವರ್ತಕರು ಮತ್ತು ಗ್ಯಾಸ್ ವಿತರಕರು ತಮ್ಮ ಬಳಿ ಲಭ್ಯವಿರುವ ಒಟ್ಟು ದಾಸ್ತಾನಿನ ವಿವರ ಸಾರ್ವಜನಿಕರಿಗೆ ತಿಳಿಯುವಂತೆ ಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಸಾರ್ವಜನಿಕರಲ್ಲಿ ಗ್ಯಾಸ್ ಸಿಗುವುದಿಲ್ಲ ಎಂಬ ಭಯ ಅಥವಾ ಗೊಂದಲ ಮೂಡಿಸಬಾರದು. ಜನರು ಆತಂಕಗೊಂಡು ಅಗತ್ಯಕ್ಕಿಂತ ಹೆಚ್ಚು ಖರೀದಿ ಮಾಡದಂತೆ ಜಾಗೃತಿ ಮೂಡಿಸಲು ವಿತರಕರಿಗೆ ಸೂಚಿಸಿದರು.

ಪ್ರಸ್ತುತ ಗ್ಯಾಸ್ ವಿತರಣೆಯಲ್ಲಿ ಹೊಸ ನಿಯಮ ಜಾರಿಗೆ ಬಂದಿದ್ದು, ಒಂಟಿ ಸಿಲಿಂಡರ್ ಸಂಪರ್ಕ ಹೊಂದಿರುವವರು 25 ದಿನಗಳ ನಂತರ ಹಾಗೂ ಡಬಲ್ ಸಿಲಿಂಡರ್ ಹೊಂದಿರುವವರು 30 ದಿನಗಳ ನಂತರವೇ ಮರು ಬುಕ್ಕಿಂಗ್ ಮಾಡಲು ಅವಕಾಶವಿದೆ. ಸರ್ಕಾರಿ ಆಸ್ಪತ್ರೆಗಳು, ವಿದ್ಯಾರ್ಥಿನಿಲಯಗಳು, ಅಂಗನವಾಡಿಗಳು ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಗ್ಯಾಸ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಸಾರ್ವಜನಿಕರು ಹಾಗೂ ಹೋಟೆಲ್ ಮಾಲೀಕರು ಕಮರ್ಷಿಯಲ್ ಸಿಲಿಂಡರ್‌ಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ ಇಂಡಕ್ಷನ್ ಸ್ಟೌವ್ ಅಥವಾ ಎಲೆಕ್ಟ್ರಿಕ್ ಒಲೆಗಳಂತಹ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.ಜಿಲ್ಲಾ ಮಟ್ಟದಲ್ಲಿ ಪರಿಸ್ಥಿತಿ ಅವಲೋಕಿಸಲು ಜಿಪಂ ಸಿಇಒ ನೇತೃತ್ವದಲ್ಲಿ ಆಹಾರ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಗೊತ್ತುಪಡಿಸಿದ ತಂಡ ರಚಿಸಲಾಗಿದೆ. ತಾಲೂಕು ಮಟ್ಟದಲ್ಲಿ ತಹಸೀಲ್ದಾರರು ತಮ್ಮ ವ್ಯಾಪ್ತಿಯ ಅಂಗಡಿ ಮತ್ತು ಗೋದಾಮುಗಳಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲನೆ ನಡೆಸಲಿದ್ದಾರೆ.ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ಕಣ್ಣಿಡಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದ್ದು, ಸಾರ್ವಜನಿಕರು ಯಾವುದೇ ಗೊಂದಲಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.ಸಭೆಯಲ್ಲಿ ಜಿಪಂ ಸಿಇಓ ಡಾ.ಪ್ರವೀಣ್ ಪಿ.ಬಾಗೇವಾಡಿ, ಕೋಲಾರ ಎಸ್‌ಪಿ ಕನ್ನಿಕಾ ಸಿಕ್ರಿವಾಲ್, ಎಡಿಸಿ ಎಸ್.ಎಂ.ಮಂಗಳ, ಎಸಿ ಜಂಬಗಿ ರೇಣುಕಾಪ್ರಸಾದ್ ದಿಲೀಪ್, ನಗರಸಭೆ ಪೌರಾಯುಕ್ತ ನವೀನ್ ಚಂದ್ರ ಇದ್ದರು.