ಸಾರಾಂಶ
ಕನ್ನಡಪ್ರಭ ವಾರ್ತೆ ಆಳಂದ
ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ತಾಲೂಕಿನ ಶಾಲೆ, ವಸತಿ ನಿಲಯ ಸೇರಿ ಪುರಸಭೆ, ತಹಸೀಲ್ದಾರ್ ಕಚೇರಿ ಸೇರಿ ಇನ್ನಿತರ ಕಡೆ ಭೇಟಿ ನೀಡಿ, ಸುವ್ಯವಸ್ಥೆ ಕಾಪಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ಪಟ್ಟಣದ ಪುರಸಭೆಗೆ ಭೇಟಿ ನೀಡಿ, ಅಧಿಕಾರಿಗಳೊಡನೆ ಸಭೆ ನಡೆಸಿದರು. ಮುಖ್ಯಾಧಿಕಾರಿ ಶಂಭುಲಿಂಗ ಕಣ್ಣಿ ಮಾಹಿತಿ ಒದಗಿಸಿದರು. ಕುಡಿಯುವ ನೀರು ಮತ್ತು ಕಾಮಗಾರಿಗಳ ವಿವರ ಪಡೆದ ಡಿಸಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು. ನಗರ ಸ್ವಚ್ಛತೆಗೆ ಆದ್ಯತೆ ನೀಡಿ, ಸಿಬ್ಬಂದಿ ಬೇಕಾಬಿಟ್ಟಿ ಕೆಲಸ ಮಾಡಿದರೆ ದೂರು ಕೊಡಿ ಎಂದು ಹೇಳಿದರು. ಪುರಸಭೆ ಕಟ್ಟಡ ತೀರಾ ಹಳೆಯದಾಗಿದೆಯಲ್ಲ, ಹೊಸ ಕಟ್ಟಡ ನಿರ್ಮಾಣಕ್ಕೆ ಸ್ಥಳ ಗುರುತಿಸಿ ಪ್ರಸ್ತಾವನೆ ಕಳುಹಿಸಿಕೊಡಿ ಎಂದರು.
ಪುರಸಭೆ ವ್ಯಾಪ್ತಿಯ ಸಾರ್ವಜನಿಕರ ಖಾತಾ, ಮೊಟೇಶನ್‍ಗಳಿಗೆ ಅಲೆಯುವಂತೆ ಮಾಡದೇ ಒಳ್ಳೆಯ ಸಂಬಂಧ ಹೊಂದಿ ಸಕಾಲಕ್ಕೆ ಜನರ ಕೆಲಸ ಮಾಡಿಕೊಡಬೇಕು. ಕೆಲಸಕ್ಕೆ ಚಕ್ಕರ ಹೊಡೆಯುವ ಸಿಬ್ಬಂದಿಗೆ ತಕ್ಕ ಶಾಸ್ತಿ ನೀಡಲಾಗುವುದು. ಇಂಥ ವ್ಯಕ್ತಿಗಳಿದ್ದರು ಅವರು ವಿರುದ್ಧ ವರದಿ ಮಾಡಿ ಎಂದು ಸೂಚಿಸಿದರು. ಸಾರ್ವಜನಿಕರಿಂದ ನಮ್ಮ ಕೆಲಸವಾಗುತ್ತಿಲ್ಲ ಎಂಬ ದೂರುಗಳು ಬಾರದಂತೆ ನೋಡಿಕೊಳ್ಳಿ ಟ್ಯಾಕ್ಸ್ ವಸೂಲಾತಿ ಪ್ರಶ್ನಿಸಿದ ಅವರು, ಇದಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದರು.ನಗರದ ಬಡಾವಣೆಗಳಲ್ಲಿ ಕಸ ವಿಲೆವಾರಿ ಮನೆ ಮನೆಗಳಿಂದ ಕಸ ಸಂಗ್ರಹಿಸುವ ಕೆಲಸಕ್ಕೆ ಒತ್ತು ಕೊಡಬೇಕು. ತಿಂಗಳ ಬಳಿಕ ಮತ್ತೆ ಭೇಟಿ ನೀಡಲಾಗುವುದು. ವ್ಯವಸ್ಥೆಯ ಲೋಪದೋಷ ಸರಿಪಡಿಸಿಕೊಳ್ಳಿ, ಅಲ್ಲದೆ ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ತೊಂದರೆ ಆಗದಂತೆ ಸಮಯಕ್ಕೆ ಪೂರೈಸಿ, ಹೆಚ್ಚಿನ ತೊಂದರೆ ಆದರೆ ಕ್ರಿಯಾ ಯೋಜನೆ ರೂಪಿಸಿ ವರದಿಕೊಡಿ ಎಂದು ಮುಖ್ಯಾಧಿಕಾರಿಗಳಿಗೆ ಸಲಹೆ ನೀಡಿದರು. ಈ ವೇಳೆ ಪುರಸಭೆ ಸಹಾಯಕ ಅಭಿಯಂತರ ಜಗದೀಶ, ವ್ಯವಸ್ಥಾಪಕ ಲಕ್ಷ್ಮಿಣ ಕಟ್ಟಿಮನಿ, ಪರಿಸರ ಅಭಿಯಂತರ ರವಿಕಾಂತ ಮಿಸ್ಕಿನ್, ಎಸ್‍ಐ ಲಕ್ಷ್ಮಣ ತಳವಾರ, ರಾಘವೇಂದ್ರ ಇತರ ಶಾಖೆಯ ಸಿಬ್ಬಂದಿ ಇದ್ದರು. ಡಿಸಿ ಜೊತೆಯಲ್ಲಿ ತಹಸೀಲ್ದಾರ್ ಯಲ್ಲಪ್ಪ ಸುಬೇದಾರ, ಆರ್‌ಐ ಶರಣಬಸಪ್ಪ ಹಕ್ಕೆ, ವಿಎ ಆನಂದ ಪೂಜಾರಿ ಇದ್ದರು.
ಈ ಮೊದಲು ಕಿತ್ತೂರರಾಣಿ ಚನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಗುಣಮಟ್ಟತೆ ಪರಿಶೀಲಿಸಿದರು. ವಸತಿ ನಿಲಯದಲ್ಲಿ ಅಲ್ಪೋಪಹಾರ ಸೇವಿಸಿದರು. ಮಕ್ಕಳೊಂದಿಗೆ ಚರ್ಚಿಸಿ, ಸಮಸ್ಯೆ ಆಲಿಸಿ ಮಾಹಿತಿ ಕಲೆ ಹಾಕಿದರು. ಸುವ್ಯವಸ್ಥೆ ಕಾಯ್ದುಕೊಳ್ಳುವಂತೆ ಶಾಲೆಯ ಮುಖ್ಯಸ್ಥರಿಗೆ ಅವರು ತಾಕೀತು ಮಾಡಿದರು.ಪಟ್ಟಣದ ಮುಖ್ಯ ರಸ್ತೆಯ ಅಗಲೀಕರಣ ಪ್ರಸ್ತಾವನೆಯ ನನೆಗುದಿಗೆ ಬಿದ್ದಿರುವ ಕುರಿತು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಈಗಾಗಲೇ ರಸ್ತೆ ಅಗಲೀಕರಣ ಕುರಿತು ಸರ್ವೇ ನಡೆದಿದೆ. ಇದಕ್ಕೆ ಕಮಿಟಿ ಇರುತ್ತದೆ. ಅದರ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಭೂಸಮನೂರ ಅನುದಾನಿತ ಶಾಲೆಗೆ ಭೇಟಿ ನೀಡಿ ಶೈಕ್ಷಣಿಕ ಗುಣಮಟ್ಟತೆ ಮಾಹಿತಿ ಕಲೆಹಾಕಿದ ಜಿಲ್ಲಾಧಿಕಾರಿಗಳು ಮಕ್ಕಳು ಮತ್ತು ಶಾಲೆಯ ಮುಖ್ಯಸ್ಥರೊಂದಿಗೆ ಮಾಹಿತಿ ಆಲಿಸಿ ಸಲಹೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಆಗಮನ ಸುದ್ದಿ ಅರಿತುಕೊಂಡಿದ್ದ ಇಲಾಖೆಯ ಅಧಿಕಾರಿಗಳ ದಿನವೀಡಿ ಕೇಂದ್ರಸ್ಥಾನದಲ್ಲೇ ಕರ್ತವ್ಯ ನಿರ್ವಹಿಸಿದ್ದು ಗಮನ ಸೆಳೆಯಿತು.