ಸಮಸ್ಯೆ ಬಗೆಹರಿಸಲು ಸಚಿವ ಯತೀಂದ್ರ ಸಿದ್ದರಾಮಯ್ಯ ಭರವಸೆ

ಕನ್ನಡಪ್ರಭ ವಾರ್ತೆ ಮೈಸೂರು

ಕರ್ನಾಟಕದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದ್ದು, ಜನ ಜಾನುವಾರಿಗೆ ಕುಡಿಯುವ ನೀರು ಇಲ್ಲದಂತಾಗಿದೆ. ಕೂಡಲೇ ಸರ್ಕಾರ ಬರಪೀಡಿತ ಎಂದು ಘೋಷಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು.

ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ನೇತೃತ್ವದಲ್ಲಿ ಪ್ರತಿಭಟಿಸಿದ ರೈತರು, ರಾಗಿ, ಜೋಳ, ಮೆಕ್ಕೆಜೋಳ, ಹತ್ತಿ, ಸೂರ್ಯಕಾಂತಿ ಬೆಳೆ ಸರಿಯಾಗಿ ಬಾರದೆ ನಷ್ಟವಾಗಿದೆ. ಅಂತರ್ಜಲ ಕುಸಿತದಿಂದ ಕೃಷಿ ಪಂಪ್‌ ಸೆಟ್‌ ಗಳಲ್ಲಿ ನೀರು ನಿಂತು ಹೋಗಿದೆ. ಇದರಿಂದ ಬೆಳೆದಿರುವಂತಹ ಕಬ್ಬು, ಬಾಳೆ, ಅರಿಶಿಣ. ತೆಂಗು ಇಳುವರಿಯಲ್ಲಿ ನಷ್ಟವಾಗಿದೆ. ಆದ್ದರಿಂದ ತಕ್ಷಣ ಬರಪೀಡಿತ ಎಂದು ಘೋಷಿಸಬೇಕಾಗಿ ಒತ್ತಾಯಿಸಿದರು.

ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ಮಾನದಂಡಗಳನ್ನು ಬದಲಾಯಿಸಿ ವೈಜ್ಞಾನಿಕ ಬೆಳೆ ನಷ್ಟ ಪರಿಹಾರವನ್ನು ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರು. ಬೆಳೆ ನಷ್ಟ ಘೋಷಿಸಬೇಕು. ಇದರಿಂದ ರೈತರ ಬದುಕು, ಜೀವನ ಉಳಿಯುವಂತಾಗುತ್ತದೆ. ರಾಜ್ಯ ಸರ್ಕಾರದ ವ್ಯಾಪ್ತಿ ಬರುವ ಸುಮಾರು 25,000 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 30,000 ಕೋಟಿ ರು. ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಬರಗಾಲ ಜಿಲ್ಲೆಗಳಲ್ಲಿನ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡಬೇಕು. ಖಾಸಗಿ ಫೈನಾನ್ಸ್ ಗಳ ಅಟ್ಟಹಾಸ ಮುಂದುವರೆದಿದ್ದು ಸಾಲ ವಸೂಲಾತಿ ಹೆಸರಿನಲ್ಲಿ ಕಿರುಕುಳ ನೀಡುತ್ತಿವೆ. ಗ್ರಾಪಂ ಮಟ್ಟದಲ್ಲಿ ಮೇವು ಬ್ಯಾಂಕು ಸ್ಥಾಪಿಸಬೇಕು. ಬಣ್ಣಾರಿ ಸಕ್ಕರೆ ಕಾರ್ಖಾನೆಯೂ ಸರ್ಕಾರದ ಆದೇಶದಂತೆ ಪ್ರತಿ ಟನ್ ಗೆ 50 ರು. ನಂತೆ ಮೈಸೂರು ಮತ್ತು ಚಾಮರಾಜನಗರದಲ್ಲಿ ಸುಮಾರು 8 ಕೋಟಿ ರು. ಬಾಕಿ ಪಾವತಿಸಬೇಕಿದೆ ಎಂದು ಅವರು ದೂರಿದರು.

ಬಾಕಿ ಪಾವತಿಸದಿದ್ದರೆ ಮತ್ತೆ ಕಾರ್ಖಾನೆ ಆರಂಭಕ್ಕೆ ಅನುಮತಿ ನೀಡಬಾರದು. ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಖಾನೆ ಮಾಲೀಕರ ಜೊತೆ ಕಬ್ಬು ಬೆಳೆಗಾರರ ಸಭೆ ನಡೆಸಿ ರೈತರಿಗೆ ಹಣ ಪಾವತಿಗೆ ಸೂಚನೆ ನೀಡಬೇಕು ಎಂದರು.

ಉತ್ತರ- ದಕ್ಷಿಣ ಎಂಬ ತಾರತಮ್ಯ ಇರಬಾರದು ಕೇಂದ್ರ ಸರ್ಕಾರ ಎಫ್‌.ಆರ್‌.ಪಿ ದರವನ್ನು ಪ್ರತಿ ಟನ್ ಗೆ 3650 ರು. ನಿಗದಿ ಮಾಡಿದೆ. ಅದರಂತೆ ಕಟಾವು, ಸಾಗಾಣಿಕೆಯನ್ನು ಕಾರ್ಖಾನೆಯವರೇ ಭರಿಸಲಿ. ಜಿಲ್ಲಾ ಮಂತ್ರಿಗಳು ತಕ್ಷಣ ರೈತ ಮುಖಂಡರ ಸಭೆ ನಡೆಸಬೇಕು. ಕೇಂದ್ರ ಸರ್ಕಾರವು ನಿಯೋಗವನ್ನು ರಾಜ್ಯಕ್ಕೆ ಕಳುಹಿಸಿ ಬರ ಅಧ್ಯಯನ ನಡೆಸಿ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕೆರೆಹುಂಡಿ ರಾಜಣ್ಣ. ಒಳಗೆರೆ ಗಣೇಶ್, ಪ್ರಕಾಶ್ ಗಾಂಧಿ, ಮಲಿಯೂರು ಮಹೇಂದ್ರ. ಚಿದಂಬರ. ಮುದ್ದಹಳ್ಳಿ ಮಧು, ಗೌಡಿಕೆ ಶಿವಣ್ಣ. ಸುರಪತಿ ನಾಗಣ್ಣ. ಪುಟ್ಟಸೋಮಣ್ಣ, ಜಗದೀಶ್. ಸುಜ್ಜಲೂರು ಜಯಸ್ವಾಮಿ. ಗುರುವಿನಪುರ ಚಂದ್ರಪ್ಪ. ರೇವಣ್ಣ, ದೀಪಕ್, ಮುಕುಡಹಳ್ಳಿ ರಾಜು. ಸಿದ್ದಬಸಪ್ಪ, ಪ್ರಭುಸ್ವಾಮಿ, ಪುಟ್ಟಸ್ವಾಮಿ, ಪ್ರಕಾಶ್, ಮಧು, ಪುನಿ ಮೊದಲಾದವರು ಇದ್ದರು.

---

ಬಾಕ್ಸ್‌ ಸುದ್ದಿ

ಸಚಿವರ ಭೇಟಿ- ಸಮಸ್ಯೆ ಪರಿಹಾರದ ಭರವಸೆ

ಮೈಸೂರಿನ ಜಿಲ್ಲಾ ಪಂಚಾಯತ್‌ ಕಚೇರಿ ಆವರಣದಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು, ರೈತರ ಸಮಸ್ಯೆ ಬಗೆಹರಿಸಲು ಸರ್ಕಾರ ಕ್ರಮ ಕೈಗೊಂಡಿಲ್ಲ. ಬರಪೀಡಿತ ಪ್ರದೇಶಕ್ಕೆ ಯಾಕೆ ಭೇಟಿ ನೀಡಿಲ್ಲ. ರಾಜ್ಯ ಸರ್ಕಾರ ಏಕೆ ಬರಪೀಡಿತ ಎಂದು ಘೋಷಣೆ ಮಾಡಲು ವಿಫಲವಾಗಿದೆ ಎಂದು ಪ್ರಶ್ನಿಸಿದರು.

ಬಣ್ಣಾರಿ ಸಕ್ಕರೆ ಕಾರ್ಖಾನೆಯು 8 ಕೋಟಿ ರು. ರೈತರ ಬಾಕಿ ಹಣವನ್ನು ಉಳಿಸಿಕೊಂಡಿದ್ದು, ಕೂಡಲೇ ಬಿಡುಗಡೆಗೊಳಿಸಬೇಕು. ಇಲ್ಲವಾದರೆ ಮತ್ತೆ ಕಾರ್ಖಾನೆ ಪ್ರಾರಂಭಕ್ಕೆ ಅವಕಾಶ ನೀಡಬಾರದು ಎಂದು ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಒತ್ತಾಯಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಯತಿಂದ್ರ ಸಿದ್ದರಾಮಯ್ಯ, ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸಿ ಹಣ ಕೊಡಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ಕೈ ಬಿಡಲಾಯಿತು.