ಎಸ್ಐಆರ್ ಮೂಲಕ ಕೋಟ್ಯಾಂತರ ಮತದಾರರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟಿರುವುದನ್ನು ಖಂಡಿಸಿ ವೋಟ್ ಬಚಾವೋ, ದೇಶ ಬಚಾವೋ ಎಂಬ ಘೋಷಣೆಯೊಂದಿಗೆ ನಗರದಲ್ಲಿ ಗುರುವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಎಸ್ಐಆರ್ ಮೂಲಕ ಕೋಟ್ಯಾಂತರ ಮತದಾರರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟಿರುವುದನ್ನು ಖಂಡಿಸಿ ವೋಟ್ ಬಚಾವೋ, ದೇಶ ಬಚಾವೋ ಎಂಬ ಘೋಷಣೆಯೊಂದಿಗೆ ನಗರದಲ್ಲಿ ಗುರುವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.ಗುರುವಾರ ಬೆಳಗ್ಗೆ 11 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಿಂದ ಆರಂಭವಾದ ಮೆರವಣಿಗೆ ಮಹಾವೀರ ವೃತ್ತದವರೆಗೆ ಸಾಗಿತು. ಮೆರವಣಿಗೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗಿ ಮಾನವ ಸರಪಳಿ ರಚಿಸಿ ಪ್ರತಿಭಟನಾ ಸಭೆ ನಡೆಸಿದರು.ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಸಿ. ಯೋಗೀಶ್, ಬಿಜೆಪಿಗರು ಸಂವಿಧಾನ ವಿರೋಧಿಗಳಾಗಿದ್ದಾರೆ. ಪವಿತ್ರವಾದ ಮತದಾನದ ಕಳ್ಳತನಕ್ಕೆ ಕೈ ಹಾಕಿದ್ದಾರೆ. ದೇಶದಲ್ಲಿ ಸುಮಾರು 13 ಕೋಟಿ ಮತಗಳನ್ನು ರದ್ದುಪಡಿಸಲಾಗಿದೆ. ಇವರು ಯಾರೂ 2014ರಲ್ಲಿ ಮತ ಹಾಕಿರಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಇವು ಕಾಂಗ್ರೆಸ್ ಮತಗಳು ಎಂದು ಗೊತ್ತಾಗಿಯೇ ಡಿಲಿಟ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇವತ್ತು ಶಿವಮೊಗ್ಗದಲ್ಲಿ ಅರಾಜಕತೆಯ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅರಾಜಕತೆ ಎನ್ನುವ ಅರ್ಥವೇ ಇವರಿಗೆ ಗೊತ್ತಿಲ್ಲ. ಯಾವುದು ಅರಾಜಕತೆ? ಉದ್ಯೋಗ ನೀಡದಿರುವುದೇ? ನೋಟ್ ಬ್ಯಾನ್ ಮಾಡುವುದೇ? ಜಾಗಟೆ ಬಾರಿಸುವುದೇ? ಧರ್ಮದ ಹೆಸರಲ್ಲಿ ಜನರನ್ನು ದಾರಿ ತಪ್ಪಿಸುವುದೇ? ಕಸ, ಯೋಗದ ಹೆಸರಲ್ಲಿ ಜನರನ್ನು ದಿಕ್ಕು ತಪ್ಪಿಸುವುದೇ ಎಂದು ಪ್ರಶ್ನೆ ಮಾಡಿದರು.ಸೂಡಾ ಅಧ್ಯಕ್ಷ ಸಿ.ಜಿ. ಮಧುಸೂದನ್ ಮಾತನಾಡಿ, ಮತದಾನ ಎಂಬುದು ಪ್ರಜಾಪ್ರಭುತ್ವದ ಮೂಲ ಆಧಾರ. ಮತದಾರರ ಪಟ್ಟಿಯಲ್ಲಿನ ಅಕ್ರಮಗಳು, ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಮತದಾರರ ಹೆಸರು ಕೈಬಿಡುವ ಪ್ರಕ್ರಿಯೆ ಮತ್ತು ಇವಿಎಂ ಕುರಿತ ಅನುಮಾನಗಳನ್ನು ದೂರ ಮಾಡದೆ ಚುನಾವಣೆ ನಡೆಸಿದರೆ ಅದು ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶ್ವೇತಾ ಬಂಡಿ ಮಾತನಾಡಿ, ಮತವನ್ನು ಕಾಪಾಡುವುದು ಎಂದರೆ ದೇಶವನ್ನು ಕಾಪಾಡಿದಂತೆ. ಆದ್ದರಿಂದ ಪ್ರತಿಯೊಬ್ಬ ಮತದಾರರ ಮತದ ಹಕ್ಕು ಉಳಿಯಬೇಕು, ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಡಬಾರದು, ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು. ಮತ್ತು ಚುನಾವಣೆಯಲ್ಲಿ ಅಕ್ರಮ ಎಸಗಿದ ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ರಮೇಶ್ ಹೆಗ್ಡೆ, ಕಲೀಂ ಪಾಷಾ, ಇಸ್ಮಾಯಿಲ್ ಖಾನ್, ಶಿವಕುಮಾರ್, ಡಾ.ಶ್ರೀನಿವಾಸ ಕರಿಯಣ್ಣ, ಎಸ್.ಟಿ. ಹಾಲಪ್ಪ, ಎಸ್.ಪಿ. ಶೇಷಾದ್ರಿ, ಚಂದ್ರಭೂಪಾಲ್, ವೈ.ಎಚ್. ನಾಗರಾಜ್, ಆರ್. ರಾಜಶೇಖರ್, ಎಸ್.ಟಿ. ಚಂದ್ರಶೇಖರ್, ಕೆ.ರಂಗನಾಥ್, ನಾಗರಾಜ್ ಕಂಕಾರಿ, ಎಚ್. ಪಾಲಾಕ್ಷಿ, ರೇಖಾ ರಂಗನಾಥ್, ಕೆ. ದೇವೇಂದ್ರಪ್ಪ, ವಿಶ್ವನಾಥ್ ಕಾಶಿ, ನೇತಾಜಿ, ಮಂಜುನಾಥ ಬಾಬು, ಕೆ.ಜೆ. ನಾಗೇಶ್ ನಾಯ್ಕ್, ಇಕ್ಕೇರಿ ರಮೇಶ್ ಮತ್ತಿತರರು ಇದ್ದರು.