ಬಾಲ್ಯವಿವಾಹ, ಭ್ರೂಣ ಹತ್ಯೆಯಿಂದ ಜಿಲ್ಲೆಗೆ ಕೆಟ್ಟ ಹೆಸರು: ರಂಗ ನಿರ್ದೇಶಕಿ ಕೆ.ಆರ್.ಸುಮತಿ

| Published : Aug 19 2024, 12:49 AM IST

ಬಾಲ್ಯವಿವಾಹ, ಭ್ರೂಣ ಹತ್ಯೆಯಿಂದ ಜಿಲ್ಲೆಗೆ ಕೆಟ್ಟ ಹೆಸರು: ರಂಗ ನಿರ್ದೇಶಕಿ ಕೆ.ಆರ್.ಸುಮತಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಯಿಯೇ ತನ್ನ ಗರ್ಭದಲ್ಲಿರುವಾಗಲೇ ಹೆಣ್ಣು ಭ್ರೂಣ ತೆಗೆಸುವಂತಹ ಸನ್ನಿವೇಶ ಮಂಡ್ಯ ಜಿಲ್ಲೆಯಲ್ಲಿ ಉದ್ಭವ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಯಾವ ತಾಯಿಯೂ ತನ್ನ ಭ್ರೂಣ ತೆಗೆಸಿಕೊಳ್ಳಲು ಮುಂದೆ ಬರುವುದಿಲ್ಲ, ಆದರೆ ಇಲ್ಲಿ ಪುರುಷರು ಅಷ್ಟೊಂದು ಕ್ರೂರಿಯಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಬಾಲ್ಯವಿವಾಹ ಮತ್ತು ಹೆಣ್ಣು ಭ್ರೂಣ ಹತ್ಯೆಯಿಂದ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತಿದೆ. ಭ್ರೂಣಹತ್ಯೆ ನಡೆಸುವ ಮೂಲಕ ತಾಯಿಯನ್ನೇ ತನ್ನ ಮಗುವಿನ ವಿರುದ್ಧ ನಿಲ್ಲಿಸುವ ಕೆಲಸ ನಡೆಯುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಮೈಸೂರಿನ ರಂಗ ನಿರ್ದೇಶಕಿ ಕೆ.ಆರ್.ಸುಮತಿ ವಿಷಾದಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ವಿಮಲಾರಣದಿವೆ ಮಹಿಳಾ ತಂಡದ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಸ್ತುತ ಸಂದರ್ಭದಲ್ಲಿ ದುಡಿಯುವ ವರ್ಗಕ್ಕಿರುವ ಸವಾಲುಗಳು’ ಹಾಗೂ ನ್ಯಾಯ ಕೇಳಿದ ನಿಂಗವ್ವ’ ೭೮ನೇ ಸ್ವಾತಂತ್ರ್ಯೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಯಿಯೇ ತನ್ನ ಗರ್ಭದಲ್ಲಿರುವಾಗಲೇ ಹೆಣ್ಣು ಭ್ರೂಣ ತೆಗೆಸುವಂತಹ ಸನ್ನಿವೇಶ ಮಂಡ್ಯ ಜಿಲ್ಲೆಯಲ್ಲಿ ಉದ್ಭವ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಯಾವ ತಾಯಿಯೂ ತನ್ನ ಭ್ರೂಣ ತೆಗೆಸಿಕೊಳ್ಳಲು ಮುಂದೆ ಬರುವುದಿಲ್ಲ, ಆದರೆ ಇಲ್ಲಿ ಪುರುಷರು ಅಷ್ಟೊಂದು ಕ್ರೂರಿಯಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು. ಏನಾದರೂ ಆಗಲಿ ಇಲ್ಲಿ ಏನೋ ಒಂದು ವ್ಯತ್ಯಾಸವಾಗಿದೆ ಅದನ್ನು ಹುಡುಕಿ ಸಮಸ್ಯೆ ಪರಿಹರಿಸುವ ಕೆಲಸ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಚಳವಳಿ ಎಂದಾಕ್ಷಣ ಮುಂಚೂಣಿಯಲ್ಲಿ ಹೆಸರು ಬರುವುದು ಮಂಡ್ಯ ಜಿಲ್ಲೆ. ಆದರೆ, ಇಲ್ಲಿ ಇಂತಹ ಬೆಳವಣಿಗೆಗೆಳು ನಡೆಯುತ್ತಿರುವುದರಿಂದಲೇ ಚಳವಳಿಗಾರರಿಗೆ ಸೋಲಾಗಿದೆ. ಕಾನೂನಾತ್ಮಕವಾಗಿ ಇಂತಹ ಕೆಟ್ಟ ವ್ಯವಸ್ಥೆಗೆ ಕಡಿವಾಣ ಹಾಕಬೇಕು. ಜೊತೆಗೆ ನಾಟಕದ ಮೂಲಕವೂ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.

ಬದುಕು ಬವಣೆಯಿಂದ ಕೂಡಿರುವ ಜೀವನದಲ್ಲಿ ನಾಟಕ ನೋಡುವ ಮನೋಭಾವ ಬೆಳಸಿಕೊಳ್ಳಬೇಕು. ಇದು ಸ್ವಲ್ಪ ಸಮಯ ಮುದ ನೀಡುತ್ತದೆ. ಕೃಷಿ ಕಾರ್ಮಿಕರು ಹೆಚ್ಚಿರುವ ಕಡೆ ಕೂಲಿಕಾರರ ಬಗ್ಗೆ ನಾಟಕ ಪ್ರದರ್ಶನಗೊಳ್ಳಬೇಕು. ಇಲ್ಲಿ ಸತ್ಯವನ್ನು ಕೇಳುವ ಎದೆಗಾರಿಕೆ ಹೆಚ್ಚಬೇಕು ಎಂದರು.

ಸಿಐಟಿಯು ಜಿಲ್ಲಾಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ರೈತ ಸಂಘದ ಎಸ್.ಸುರೇಶ್, ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಭರತ್‌ರಾಜ್, ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು, ಸಿಪಿಎಂ ಪ್ರಧಾನ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ಮುಖಂಡರಾದ ಬಿ.ಹನುಮೇಶ್, ಬಿ.ಎಂ.ಶಿವಮಲ್ಲಯ್ಯ, ಆರ್.ರಾಜು, ಅಮಾಸಯ್ಯ, ಚಂದ್ರ ಭಾಗವಹಿಸಿದ್ದರು.