ಕನ್ನಡಪ್ರಭ ವಾರ್ತೆ ಮೈಸೂರು
ಸಂಶೋಧನಾ ಮನೋಭಾವದಿಂದ ವಿದ್ಯಾರ್ಥಿಗಳಿಗೆ ಇತಿಹಾಸ ಪರಿಚಯಿಸುವುದು ಉಪನ್ಯಾಸಕರ ಕರ್ತವ್ಯ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.ಮಹಾರಾಜ ಸರ್ಕಾರಿ ಪಿಯು ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಇತಿಹಾಸ ವೇದಿಕೆಯು ಭಾನುವಾರ ಆಯೋಜಿಸಿದ್ದ ಇತಿಹಾಸ ಸಂಭ್ರಮ-3 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸವನ್ನು ಕೇವಲ ಘಟನೆಗಳ ದಾಖಲೆಯಾಗಿ ಬೋಧಿಸದೆ, ವಾಸ್ತವಾಂಶಗಳು ಮತ್ತು ಸಂಶೋಧನಾ ದೃಷ್ಟಿಕೋನದೊಂದಿಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದು ಪ್ರತಿಯೊಬ್ಬ ಇತಿಹಾಸ ಉಪನ್ಯಾಸಕರ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.
ಇತಿಹಾಸ ಬೋಧನೆ ಅತ್ಯಂತ ಸವಾಲಿನ ಕೆಲಸವಾಗಿದೆ. ಹಿಂದಿನ ಘಟನೆಗಳನ್ನು ವಿವರಿಸುವಾಗ ವಾಸ್ತವದ ನೆಲೆಗಟ್ಟಿನಲ್ಲಿ ಪರಿಶೀಲಿಸಿ, ಸರಿ- ತಪ್ಪುಗಳನ್ನು ವಿಮರ್ಶಾತ್ಮಕವಾಗಿ ವಿದ್ಯಾರ್ಥಿಗಳಿಗೆ ತಿಳಿಸಬೇಕು. ಇತಿಹಾಸದ ಹಲವು ಸಂಗತಿಗಳು ಕೇಳಲು ಸತ್ಯವೆನಿಸಿದರೂ ವೈಜ್ಞಾನಿಕ ದೃಷ್ಟಿಯಿಂದ ಅವುಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸಬಹುದು. ಅಂತಹ ಸಂದರ್ಭಗಳಲ್ಲಿ ಸಂಶೋಧನೆ ಮತ್ತು ದಾಖಲೆಗಳ ಆಧಾರದ ಮೇಲೆ ಸತ್ಯವನ್ನು ವಿದ್ಯಾರ್ಥಿಗಳಿಗೆ ಅರ್ಥೈಸುವುದು ಇಂದಿನ ಉಪನ್ಯಾಸಕರ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.ಇತಿಹಾಸ ಎಂದರೆ ಬರೀ ರಾಜರು, ಪಾಳೇಗಾರರಷ್ಟೇ ಅಲ್ಲ, ಅದು ಜನಸಾಮಾನ್ಯರ ಬದುಕಿನ ಚಿತ್ರಣ. ಅದು ಅಂದಿನ ಜನರ ಜೀವನ ಚರಿತ್ರೆಯನ್ನು ಕಟ್ಟಿಕೊಡುತ್ತದೆ. ಹೀಗಾಗಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಪಠ್ಯಕ್ರಮದೊಂದಿಗೆ ಇತಿಹಾಸವನ್ನೂ ಓದಿಕೊಳ್ಳಬೇಕು ಎಂದರು.
ತಂತ್ರಜ್ಞಾನದಲ್ಲಿ ಮುಂದಿರುವ ಈಗಿನ ವಿದ್ಯಾರ್ಥಿಗಳು ಬುದ್ಧಿವಂತರು. ಆದರೆ, ಭಾವನಾತ್ಮಕ ಜ್ಞಾನ ಕಡಿಮೆ. ಇದಕ್ಕೆ ಓದಿನ ಕೊರತೆಯೇ ಕಾರಣ. ಶಿಕ್ಷಣ ವ್ಯಕ್ತಿಯನ್ನು ಬದಲು ಮಾಡಬೇಕು. ಇಲ್ಲವಾದರೆ ಶಿಕ್ಷಣ ಕಲಿಕೆಯೇ ವ್ಯರ್ಥ. ಜಂಕಫುಡ್ ಸೇವನೆ ಆರೋಗ್ಯಕ್ಕೆ ಹಾನಿಕಾರ ಎಂಬುದು ತಿಳಿದಿದ್ದರೂ ಅದನ್ನು ತಿನ್ನುತ್ತಾರೆ. ಹೀಗಾದರೆ, ಶಿಕ್ಷಣ ಕಲಿತು ಏನು ಪ್ರಯೋಜನ? ಶಿಕ್ಷಣ ಪಡೆದವರು ಸ್ವಯಂ ಬದಲಾಗಬೇಕು. ಅವರಿಂದ ಕುಟುಂಬ, ಊರು, ಕೊನೆಯಲ್ಲಿ ಸಮಾಜವೇ ಬದಲಾಗುತ್ತದೆ ಎಂದು ಅವರು ಹೇಳಿದರು.
ಈಗ ಜ್ಞಾನವೊಂದಿದ್ದರೆ ಸಾಕಾಗದು. ಅದರೊಂದಿಗೆ ಕೌಶಲ ಮತ್ತು ಮೌಲ್ಯವೂ ಬೇಕು. ಅಂಕ ಮುಖ್ಯವಲ್ಲ, ಮನಸ್ಥಿತಿ ಮುಖ್ಯ. ಸೃಜನಶೀಲತೆ, ಕ್ರಿಯಾಶೀಲತೆ ಇರಬೇಕು. ಕಾಲಕ್ಕೆ ತಕ್ಕಂತೆ ಜ್ಞಾನವನ್ನೂ ಉನ್ನತೀಕರಣಗೊಳಿಸಿಕೊಳ್ಳಬೇಕು. ಎಐ ತಂತ್ರಜ್ಞಾನದಿಂದ ಕೆಲಸ ಹೋಗಲ್ಲ. ಅದು ಹೊಸ ಅವಕಾಶವನ್ನು ಸೃಷ್ಟಿಸುತ್ತದೆ. ಇಂತಹ ತಂತ್ರಜ್ಞಾನ ಬಳಕೆಗೆ ಸಜ್ಜಾಗಬೇಕಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ 2026ರ ವಾರ್ಷಿಕ ಪರೀಕ್ಷೆಯಲ್ಲಿ ಇತಿಹಾಸ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ಜಿಲ್ಲೆಯ 35 ವಿದ್ಯಾರ್ಥಿಗಳು ಹಾಗೂ ಇತಿಹಾಸ ವಿಷಯದಲ್ಲಿ ಶೇ.100 ಫಲಿತಾಂಶ ದಾಖಲಿಸಿದ 15 ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಬಳಿಕ ಮೌಲ್ಯಮಾಪನ ಮತ್ತು ಫಲಿತಾಂಶ ಸುಧಾರಣೆ ಕುರಿತು ಉಪನ್ಯಾಸಕ ಎಸ್. ಗಣೇಶ್ ವಿಶೇಷ ಉಪನ್ಯಾಸ ನೀಡಿದರು.ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಎಂ.ಪಿ. ನಾಗಮ್ಮ, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎ. ರಾಮೇಗೌಡ, ಉಪನ್ಯಾಸಕರ ಸಂಘದ ಅಧ್ಯಕ್ಷ ಎಂ.ಎಂ. ಮಹದೇವ್, ಪ್ರಾಂಶುಪಾಲರಾದ ಎನ್. ಉದಯಶಂಕರ್, ಎನ್.ಎಂ. ಶಿವಪ್ರಕಾಶ್, ಬಿ.ಸಿ. ಶಿವಮಲ್ಲು, ಎಂ.ಎನ್. ಮಹದೇವಯ್ಯ, ಜಿಲ್ಲಾ ಇತಿಹಾಸ ವೇದಿಕೆಯ ಅಧ್ಯಕ್ಷ ಹೆಚ್.ಬಿ. ವಾಸು, ಗೌರವಾಧ್ಯಕ್ಷ ಎಂ.ಸಿ. ಚಂದ್ರಶೇಖರ್, ಪದಾಧಿಕಾರಿಗಳಾದ ಪೂರ್ಣಚಂದ್ರ, ಉಮೇಶ್, ವಿನೀಶ್, ಮಹೇಶ್, ಪುಟ್ಟಸ್ವಾಮಿ, ಉಮೇಶ್ ಮೊದಲಾದವರು ಇದ್ದರು. ನಂಜುಂಡಯ್ಯ ಸ್ವಾಗತಿಸಿದರು. ಸತ್ಯನಾರಾಯಣ ವಂದಿಸಿದರು.
----ಕೋಟ್...
ಇತಿಹಾಸವು ಹೊಸ ತಲೆಮಾರಿಗೆ ದಾರಿದೀಪವಾಗಿದ್ದು, ಹಿಂದಿನ ಬದುಕಿನ ಅನುಭವಗಳು ಹಾಗೂ ಜೀವನ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ.- ಎಂ.ಪಿ. ನಾಗಮ್ಮ, ಉಪ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ