ಡಿಕೆಶಿ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾ ಜೆಡಿಎಸ್ ಧರಣಿ

| Published : May 10 2024, 01:35 AM IST / Updated: May 10 2024, 10:41 AM IST

ಸಾರಾಂಶ

ಪೆನ್‌ಡ್ರೈವ್ ಪ್ರಕರಣದ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ್ ಕೈವಾಡವಿದೆ ಎಂದು ಆರೋಪಿಸಿ ಜಿಲ್ಲಾ ಜೆಡಿಎಸ್ ವತಿಯಿಂದ ನಗರದಲ್ಲಿ ಡಿಕೆಶಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

 ಚಾಮರಾಜನಗರ ;  ಪೆನ್‌ಡ್ರೈವ್ ಪ್ರಕರಣದ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ್ ಕೈವಾಡವಿದೆ ಎಂದು ಆರೋಪಿಸಿ ಜಿಲ್ಲಾ ಜೆಡಿಎಸ್ ವತಿಯಿಂದ ನಗರದಲ್ಲಿ ಡಿಕೆಶಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಡಿಸಿಎಂ ಡಿ.ಕೆ. ಶಿವಕುಮಾರ್, ಮುಖಂಡ ಎಲ್. ಶಿವರಾಮೇಗೌಡ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆ ತಡೆ ನಡೆಸಿ ಡಿ.ಕೆ.ಶಿವಕುಮಾರ್ ಭಾವಚಿತ್ರವುಳ್ಳ ಪ್ಲೆಕ್ಸ್‌ ಅನ್ನು ಹರಿದು ಹಾಕಿ ಕಿಡಿಕಾರಿದರು. ಈ ವೇಳೆ ಜಿಲ್ಲಾ ಜೆಡಿಎಸ್ ಉಸ್ತುವಾರಿ ಬಿ.ಪುಟ್ಟಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರವನ್ನು ದುರಪಯೋಗ ಪಡಿಸಿಕೊಳ್ಳುತಿದೆ. ಪೆನ್‌ಡ್ರೈವ್ ಅನ್ನು ಹೊರಗೆ ತಂದು ಹಂಚುವ ಮೂಲಕ ಮಹಿಳೆಯರ ಮಾನವನ್ನು ಹರಾಜು ಹಾಕಿರುವ ಕಾಂಗ್ರೆಸ್‌, ಹಂಚಿಕೆ ಮಾಡಿದವರನ್ನು ಹೊರದೇಶಕ್ಕೆ ಕಳುಹಿಸಿದ್ದಾರೆ ಎಂದು ದೂರಿದರು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು, ಇದಕ್ಕೆ ನಮ್ಮ ಸಹಮತ ಇದೆ, ಆದರೆ ತಪ್ಪಿಸ್ಥರಿಗೆ ಶಿಕ್ಷೆ ನೀಡುವ ಬದಲು ಅಮಾಯಕರನ್ನು ಬಂಧಿಸಿದ್ದಾರೆ ಎಂದರು. ಅಶ್ಲೀಲ ವಿಡಿಯೋವಿದ್ಧ ಪೆನ್‌ಡ್ರೈವ್ ಹಂಚಿಕೆ ಹಿಂದೆ ಡಿ.ಕೆ.ಶಿವಕುಮಾರ್ ಕೈವಾಡವಿದೆ ಎಂಬ ಆರೋಪ ಕೇಳಿಬಂದಿರುವುದರಿಂದ ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಪೆನ್‌ಡ್ರೈವ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ಎಸ್‌ಐಟಿಯನ್ನು ಬಳಸಿಕೊಂಡು ಅಪರಾಧಿಗಳ ಬದಲು ನಿರಾಪರಾಧಿಗಳನ್ನು ಶಿಕ್ಷಿಸುತ್ತಿದ್ದಾರೆ. ಇದಕ್ಕೆ ಡಿಕೆಶಿ ಆಡಿಯೋ ವೈರಲ್ ಆಗಿರುವುದೇ ಸಾಕ್ಷಿ. ಆದ್ದರಿಂದ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಬೇಕು. ಪೆನ್‌ಡ್ರೈವ್ ಹಂಚಿಕೆ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಮುಖಂಡ ಕಡಬೂರು ಮಂಜುನಾಥ್ ಮಾತನಾಡಿ, ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ, ಅವರನ್ನು ಗಲ್ಲಿಗೇರಿಸಲಿ ಅದಕ್ಕೆ ನಮ್ಮ ಜೆಡಿಎಸ್ ಸಹಮತ ಇದೆ. ಆದರೆ, ಈ ಎಸ್‌ಐಟಿ ತಂಡವು ಡಿಕೆಶಿ ಅವರ ತನಿಖಾ ತಂಡವಾಗಿದೆ. ಇದರ ಬದಲು ಈ ಪ್ರಕರಣವನ್ನು ಸಿಬಿಐಗೆ ವಹಿಸಲಿ ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಮುಖಂಡ ಆಲೂರು ಮಲ್ಲು, ಪ್ರಧಾನ ಕಾರ್ಯದರ್ಶಿ ಆನಂದ್, ಕುಮಾರ್, ಮಂಗಳಮ್ಮ, ಪುಷ್ಪಲತಾ, ಮಹದೇವಸ್ವಾಮಿ, ರವಿ, ಸೋಮು, ರವೀಶ್, ಆನಂದ್, ಶಂಕರ್, ನಂದೀಶ್ ಶ್ರೀನಾಥ್ ಇತರರು ಭಾಗವಹಿಸಿದ್ದರು.